ಕುಂಬಳೆ: ಕೇಂದ್ರ ಸರಕಾರ ದೇಶದ ಜನತೆಯ ಸೇಮಗ್ರ ಅಭಿವೃದ್ಧಿಗಾಗಿ ಜಾರಿ ಮಾಡಿರುವ ಎಲ್ಲ ಜನಪರ ಯೋಜನೆಗಳನ್ನು ಕೇರಳದ ಎಡರಂಗ ಸರಕಾರ ಬುಡಮೇಲು ಗೊಳಿಸುತ್ತಿದೆ. ಜನತೆಗೆ ನೇರವಾಗಿ ಸಿಗಬೇಕಾದ ಯೋಜನೆಗಳಿಗೆ ರಾಜ್ಯ ಸರಕಾರ ಅಡ್ಡಗಾಲು ಹಾಕುತ್ತಿದೆ ಎಂದು ಬಿಜೆಪಿ ಉತ್ತರವಲಯ ಸಂಘಟನಾ ಕಾರ್ಯದರ್ಶಿ ಕು.ವೇ, ಸುರೇಶ್ ಗಂಭೀರ ಆರೋಪ ಮಾಡಿದರು.
ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಶಕ್ತಿ ಕೇಂದ್ರ ಪ್ರಮುಖರ ಹಾಗೂ ಯುವಮೋರ್ಚಾ ನೇತಾರರ ಸಭೆಯನ್ನು ಮಂಗಳವಾರ ಕುಂಬಳೆ ಪಕ್ಷದ ಕಚೇರಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರದ ಪ್ರಧಾನ್ ಮಂತ್ರಿ ಆವಾಜ್ ಯೋಜನೆಯ ಹೆಸರು ಬದಲಾಯಿಸಿ ಎಡರಂಗ ಸರಕಾರ ಲೈಫ್ ಎಂಬ ಹೆಸರನಿಟ್ಟು ಅನೇಕ ವಿಧದ ನಿಬಂಧನೆಗಳು ಹಾಕಿ ಬಡವರಿಗೆ ಮನೆ ಸಿಗದಂತೆ ಮಾಡಿದೆ. ಕೃಷಿ ಫಸಲ್ ಯೋಜನೆಯನ್ನು ರಾಜ್ಯದಲ್ಲಿ ಸಮಗ್ರವಾಗಿ ಜಾರಿ ಮಾಡದೆ ಕೃಷಿಕರಿಗೆ ರಾಜ್ಯ ಸರಕಾರ ಮೋಸ ಮಾಡುತ್ತಿದೆ. ಅದೇ ರೀತಿಯಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ ಕೇರಳದಲ್ಲಿ ಜಾರಿ ಗೊಳಿಸದೆ ಎಡರಂಗ ಜನತೆಯನ್ನು ವಂಚಿಸುತ್ತಿದೆ. ಉದ್ಯೋಗ ಖಾತರಿ ಯೋಜನೆ, ಬಿಪಿಯಲ್ ಉಚಿತ ಅಕ್ಕಿ ಯೋಜನೆ, ದೀನ್ ದಯಾಳ್ ವಿದ್ಯುತ್ ಯೋಜನೆ, ಮುದ್ರಾ ಸಾಲ ಯೋಜನೆ, ಗರ್ಭಿಣಿಯರಿಗೆ 6000 ಸಿಗುವ ಯೋಜನೆಗಳು ಕೇರಳದಲ್ಲಿ ಬಡ ಜನತೆಗೆ ನೇರವಾಗಿ ಸಿಗದಂತೆ ಮಾಡಿ ಎಡರಂಗ ಕೇಂದ್ರದ ಮೇಲೆ ಗೂಬೆ ಕೂರಿಸಿ ಜನತೆಗೆ ಮಾಡುತ್ತಿರುವ ವಂಚನೆ ಖಂಡನೀಯ ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆ ಕೇರಳದಲ್ಲಿ ಎಡರಂಗ ಹಾಗೂ ಮುಸ್ಲಿಂ ಲೀಗ್ ಪಕ್ಷದ ಅಡಿಯಳಾಗಿ ಕಾರ್ಯ ನಿರ್ವಹಿಸುತ್ತಿದೆ. ಶಬರಿಮಲೆ ವಿಚಾರದಲ್ಲಿ ಹಿಂದುಗಳನ್ನು ಮಾತ್ರ ಗುರಿಯಾಗಿಸಿ ನಕಲಿ ದೂರು ದಾಖಲಿಸಿ ಹಿಂದುಗಳ ಮೇಲೆ ದೌರ್ಜನ್ಯ ಎಸಗುತ್ತಿದೆ. ಕಡಂಬಾರ್ ದೇವಾಲಯಕ್ಕೆ ನುಗ್ಗಿ ತಲವಾರು ದಾಳಿ ನಡೆಸಿದ ಆರೋಪಿಗಳನ್ನು, ಕುಂಜತ್ತೂರಲ್ಲಿ ಅಯ್ಯಪ್ಪ ಭಕ್ತರ ಮೇಲೆ ದಾಳಿ ನಡೆಸಿದವರನ್ನು, ಅಯ್ಯಪ್ಪ ಭಕ್ತರುಗಳ ವಾಹನ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸದ ಪೊಲೀಸ್ ತಾರತಮ್ಯ ನೀತಿ ತೋರುತ್ತಿದೆ. ಇದರ ವಿರುದ್ಧ ಒಂದು ವಾರದ ಒಳಗೆ ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಆರೋಪಿಗಳ ಬಂಧನವಾಗದಿದ್ದರೆ ಬಿಜೆಪಿ ಪರಿವಾರ ಸಂಘಟನೆ ಪೊಲೀಸ್ ಠಾಣಾ ಮಾರ್ಚ್ ನಡೆಸಲು ನಿರ್ಣಯ ಮಾಡಲಾಗುದೆಂದು ಬಿಜೆಪಿ ತಿಳಿಸಿದೆ.
ಮಂಡಲ ಉಪಾಧ್ಯಕ್ಷ ವಿನೋದನ್ ಕಡಪ್ಪರ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸುರೇಶ್ ಕುಮಾರ್ ಶೆಟ್ಟಿ, ಆದರ್ಶ್ ಬಿಎಂ, ಸತ್ಯಶಂಕರ ಭಟ್, ದಿನೇಶ್ ಚೆರುಗೋಳಿ,ಯಾದವ ಬಡಾಜೆ, ಪದ್ಮಶೇಖರ್, ಚಂದ್ರನ್ ಅಡ್ಕ, ಶಂಕರ ಆಳ್ವ ಹಾಗೂ ಬಿಜೆಪಿ ಶಕ್ತಿಕೇಂದ್ರ ಪ್ರಮುಖರು ಉಪಸ್ಥಿತರಿದ್ದರು. ಸಂತೋಷ್ ದೈಗೊಳಿ ಸ್ವಾಗತಿಸಿ, ಮಹೇಶ್ ನಿಡುಗಳ ವಂದಿಸಿದರು.