ಮುಂಬೈ: ಎಎನ್‍ಐ ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರದ ಕುರಿತು ಮಾತನಾಡಿರುವ ಬೆನ್ನಲ್ಲೇ ಆರ್ ಎಸ್‍ಎಸ್ ಮತ್ತೊಮ್ಮೆ ಮೋದಿ ಮೇಲೆ ಒತ್ತಡ ಹೇರಿದೆ.
ರಾಮ ಮಂದಿರಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಬಹುದು ಎಂಬ ಪ್ರಧಾನಿ ಮೋದಿ ಹೇಳಿಕೆ ಬೆನ್ನಲ್ಲೇ ಆರ್ ಎಸ್‍ಎಸ್ ನ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದೇ ಅವಧಿಯಲ್ಲಿ ರಾಮ ಮಂದಿರ ನಿರ್ಮಾಣ ಪ್ರಾರಂಭಿಸಬೇಕು, ರಾಮಮಂದಿರ ನಿರ್ಮಾಣಕ್ಕೆ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ 2014 ರಲ್ಲಿ ಮೋದಿ ಪ್ರಣಾಳಿಕೆ ಭರವಸೆ ನೀಡಿತ್ತು ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಸಾಂವಿಧಾನಿಕ ಚೌಕಟ್ಟಿನಲ್ಲಿ ಎಲ್ಲಾ ಪ್ರಯತ್ನವನ್ನು ಮಾಡುವುದಾಗಿ 2014 ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಣಾಳಿಕೆ ನೀಡಿತ್ತು. ದೇಶದ ಜನತೆ ಬಿಜೆಪಿಯ ಭರವಸೆ ನಂಬಿ ಸಂಪೂರ್ಣ ಬಹುಮತ ನೀಡಿದ್ದರು. ಈಗ ಜನತೆ ಸರ್ಕಾರ ತನ್ನ ಭರವಸೆ ಈಡೇರಿಸುತ್ತದೆ ಎಂದು ನಿರೀಕ್ಷಿಸುತ್ತಿದ್ದಾರೆ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದು, ಸರ್ಕಾರ ಇದೇ ಅವಧಿಯಲ್ಲಿ ರಾಮ ಮಂದಿರ ನಿರ್ಮಾಣ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.