ಕಾಸರಗೋಡು: ಸಮಾಜದ ಉನ್ನತಿಗೆ ಮತ್ತು ಸಮಗ್ರ ಅಭಿವೃದ್ಧಿಗೆ ಒಗ್ಗಟ್ಟಿನಿಂದ ದುಡಿಯಬೇಕು. ತಾನು ಇತರರಿಗಿಂತ ಹೆಚ್ಚು ಎಂಬ ಭಾವವನ್ನು ತೋರ್ಪಡಿಸದೆ ನಾವೆಲ್ಲ ಒಂದೇ ಮತ್ತು ಸಮಾನರು ಎಂಬ ಭಾವವನ್ನು ಹೊಂದಬೇಕಾದದ್ದು ಇಂದಿನ ಅಗತ್ಯ. ಈ ತತ್ವವನ್ನು ಅನುಸರಿಸಿ ನಮ್ಮ ಸಮಾಜವನ್ನು ಉನ್ನತಿಗೇರಿಸಬೇಕು ಎಂದು ಹಾಸನದ ಪ್ರಭಾರ ಆರ್.ಟಿ.ಒ. ಹೊಸದುರ್ಗ ಮೂಲದ ಕೆ.ಅಶೋಕ್ ಕುಮಾರ್ ಹೇಳಿದರು.
ಬೀರಂತಬೈಲ್‍ನ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ಮಂದಿರದಲ್ಲಿ ಆಯೋಜಿಸಿದ ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ 86 ನೇ ವಾರ್ಷಿಕೋತ್ಸವ ಮತ್ತು ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮವನ್ನು ಹಮ್ಮಿಕೊಂಡದ್ದು ಶ್ಲಾಘನೀಯ ಎಂದ ಅವರು ಇಂತಹ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಿ ಸಾರ್ವತ್ರಿಕವಾಗಿ ಅನುಸರಿಸಬೇಕು. ಈ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು ಹಾಗು ಸಮಾಜದ ಐಕ್ಯತೆಗೆ ಕಾರಣವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಿ.ವೆಂಕಟ್ರಮಣ ಅವರು ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ನಿರಂಜನ ಕೊರಕೋಡು, ಸಂಘದ ಗೌರವಾಧ್ಯಕ್ಷ ಕೃಷ್ಣಮೂರ್ತಿ ಬೀರಂತಬೈಲು, ಕೋಶಾ„ಕಾರಿ ಬಿ.ರಾಮಮೂರ್ತಿ ಬೀರಂತಬೈಲು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ಅಶೋಕ್ ಕುಮಾರ್ ಸಂಘವು ತಯಾರಿಸಿದ ಸಮಾಜ ಬಾಂಧವರ ವಿಳಾಸದ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಉಪಸಂಘದ ಹನ್ನೊಂದು ಮಂದಿ ಕಾರ್ಯಾಧ್ಯಕ್ಷರು ತಮ್ಮ ಅನಿಸಿಕೆಗಳನ್ನು ಮಂಡಿಸಿದರು. ಸಮಾರಂಭದಲ್ಲಿ ಕೆ.ಅಶೋಕ್ ಕುಮಾರ್ ದಂಪತಿಗಳನ್ನು, ಸಂಘದ ಹಿರಿಯ ಕಾರ್ಯಕರ್ತರಾದ ಯಕ್ಷಗಾನ, ನಾಟಕ ಮತ್ತು ಚಲನಚಿತ್ರ ಕಲಾವಿದ ಪ್ರಭಾಕರ್ ಪಳ್ಳಿಕೆರೆ, ಉದಯೋನ್ಮುಖ ಚಿತ್ರ ನಟ ರಂಜನ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.