ಕಾಸರಗೋಡು: ಮಂಗನಕಾಯಿಲೆ ಬಗ್ಗೆ ಜಿಲ್ಲೆಯಲ್ಲೂ ಜಾಗ್ರತೆ ಪಾಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿರುವರು
ಕರ್ನಾಟದಲ್ಲಿ ಮಂಗನಕಾಯಿಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಗಡಿಪ್ರದೇಶವಾಗಿರುವ ಜಿಲ್ಲೆಯಲ್ಲೂ ಈ ಬಗ್ಗೆ ಎಚ್ಚರಿಕೆ ಬೇಕು ಎಂದವರು ಸಾರ್ವಜನಿಕರಿಗೆ ಸಲಹೆ ಮಾಡಿದ್ದಾರೆ.
ಮಂಗನಕಾಯಿಲೆ ಅಥವಾ ಕ್ಯಾಸೈನೂರ್ ಫೋರೆಸ್ಟ್ ಡಿಸೀಸ್ ಎಂದು ಕರೆಯಲಾಗುವ ಈ ಕಾಯಿಲೆ ರಷ್ಯನ್ ಸ್ಪ್ರಿಂಗ್ ಸಮ್ಮರ್ ಕಾಂಪ್ಲೆಕ್ಸ್ ಮೂಲಕ ಹರಡುವ ರೋಗವಾಗಿದೆ. ಅರಣ್ಯದಲ್ಲಿ ಮಂಗಗಳು ರೋಗಬಾಧೆಯಿಂದ ಸಾಮೂಹಿಕವಾಗಿ ಮೃತಪಡುವ ಮೂಲಕ ಇದಕ್ಕೆ ಮಂಗನಕಾಯಿಲೆ ಎಂದು ಕರೆಯಲಾಗುತ್ತದೆ. ಮಂಗನಕಾಯಿಲೆಯ ವೈರಸ್ ಸಾಧಾರಣ ಗತಿಯಲ್ಲಿ ವನಾಂತರ ಪ್ರದೇಶಗಳಲ್ಲಿ ಬದುಕುವ ಅಳಿಲು, ಪುಟ್ಟ ಗಾತ್ರದ ಸಸ್ತನಿಗಳು, ಕೆಲ ಜಾತಿಯ ಪಕ್ಷಿಗಳು ಮೊದಲಾದವುಗಳ ದೇಹದಲ್ಲಿರುತ್ತವೆ. ಇವುಗಳ ರಕ್ತ ಹೀರುವ ಹಿಮೋಫಿಲಾಸಸ್ ಎಂಬ ವಿಭಾಗದ ಕೀಟಗಳು ಈ ರೋಗವನ್ನು ಮನುಷ್ಯರಿಗೆ ತಲಪಿಸುವ ವಾಹಕಗಳಾಗಿವೆ.
ಈ ಕೀಟ ಕಚ್ಚಿದ ಯಾ ಸತ್ತ ಮಂಗನ ಬಳಿ ಸುಳಿದ ಮನುಷ್ಯನಿಗೆ ಈ ರೋಗ ಬಾಧೆಯಾಗುತ್ತದೆ. ಮೇಕೆ,ಹಸು ಇತ್ಯಾದಿಗಳ ಮೈ ಯಲ್ಲಿ ಕಾಣಿಸಿಕೊಳ್ಳುವ ಈ ಕೀಟಗಳು ಆ ಮೂಲಕ ಮನುಷ್ಯನನ್ನು ಕಚ್ಚುವ ಸಾಧ್ಯತೆಗಳಿರುತ್ತವೆ.
ರೋಗ ಲಕ್ಷಣಗಳು:
ಮನುಷ್ಯ ದೇಹ ಪ್ರವೇಶಮಾಡಿದ ರೋಗಾಣುವಿನಿಂದ 3 ರಿಂದ 8 ದಿನಗಳಲ್ಲಿ ರೋಗಲಕ್ಷಣ ಕಾಣಿಸತೊಡಗುತ್ತದೆ. ತೀವ್ರ ಜ್ವರ, ತಲೆನೋವು, ಮೈ ಕೈ ನೋವು, ಹೊಟ್ಟೆ ನೋವು, ಕೆಲವೊಮ್ಮೆ ಅತಿಸಾರ ಇತ್ಯಾದಿಗಳು ಈ ರೋಗದ ಆರಂಭದ ಲಕ್ಷಣಗಳಾಗಿವೆ. ರೋಗ ಉಲ್ಭಣಗೊಂಡರೆ ದೇಹದ ಯಾವುದಾದರೂ ಭಾಗದಿಂದ ರಕ್ತಸ್ರಾವ, ಮೂರ್ಛೆ ತಪ್ಪುವುದು, ಅಪಸ್ಮಾರ ಇತ್ಯಾದಿಕಾಣಿಸಿಕೊಳ್ಳುತ್ತವೆ.
ಸುರಕ್ಷಾ ಕ್ರಮಗಳು:
ಈ ರೋಗ ತಗುಲಿರುವುದು ಖಚಿತವಾದರೆ ಪ್ರಯಾಣ ನಡೆಸಕೂಡದು. ಉದ್ಯೋಗ ಸಂಬಂಧ ವನಾಂತರ ಪ್ರದೇಶಗಳಿಗೆ ತೆರಳಬೇಕಾಗಿ ಬರುವವರು ದೇಹಪೂರ್ತಿ ಮುಚ್ಚುವಂಥಾ ಬಟ್ಟೆ, ಕಾಲುಗಳಿಗೆ ದೊಡ್ಡ ಬೂಟು ಇತ್ಯಾದಿ ಧರಿಸಬೇಕು. ಮಂಗಗಳ ಬಳಿ ತೆರಳಬಾರದು. ವನಾಂತರ ಪ್ರದೇಶಗಳಲ್ಲಿ ವಾಸಿಸುವವರು ಇಂಬಳ ಸಹಿತ ಕೀಟಬಾಧೆಯಿರದಂತೆ ನೋಡಿಕೊಳ್ಳಬೇಕು.
ಬಟ್ಟೆಗಳನ್ನು ಬಿಸಿನೀರಲ್ಲಿ ಒಗೆದು, ಬಿಸಿಲಲ್ಲಿ ಒಣಗಿಸಬೇಕು.ಜಾನುವಾರುಗಳ ಮೈಯಲ್ಲಿ ಕೀಟಗಳು ಸೇರಿಕೊಳ್ಳದಂತೆ ಮೃಗಾಸ್ಪತ್ರೆಯಲ್ಲಿ ಲಭಿಸುವ ಲೇಪನ ಅವುಗಳ ಮೈಗೆ ಸವರಬೇಕು. ಎಲ್ಲಾದರೂ ಮಂಗ ಮೃತಪಟ್ಟಿದ್ದರೆ ತಕ್ಷಣ ಜಿಲ್ಲಾಡಳಿತೆಗೆ ಮಾಹಿತಿ ನೀಡಬೇಕು. ಮೃತ ಮಂಗನ ಅಂತ್ಯಕ್ರಿಯೆ ವೈಯಕ್ತಿಕ ಸುರಕ್ಷಾ ಕ್ರಮ ನಡೆಸಿಕೊಂಡು ಮಾಡಬೇಕು. ಕೀಟನಾಶಕ ಕ್ರಮ ನಡೆಸಬೇಕು ಎಂದು ವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುವರು.