ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ನ್ಯಾಯಾಧೀಶರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.
ಅಲ್ಲಿನ ಮಾಧ್ಯಮಗಳ ವರದಿಯ ಪ್ರಕಾರ ಸುಮನ್ ಕುಮಾರಿ ಪಾಕಿಸ್ತಾನದ ಮೊದಲ ಹಿಂದೂ ಮಹಿಳಾ ನ್ಯಾಯಾಧೀಶೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಖಂಬರ್-ಶಹದಾದ್ಕೋಟ್ ಜಿಲ್ಲೆಯ ಮೂಲದವರಾಗಿರುವ ಸುಮನ್ ಕುಮಾರಿ ಅದೇ ಜಿಲ್ಲೆಯಲ್ಲಿ ಸಿವಿಲ್ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಲಿದ್ದಾರೆ.
ಹೈದರಾಬಾದ್ ನಲ್ಲಿ ಎಲ್ ಎಲ್ ಬಿ ಪೂರ್ಣಗೊಳಿಸಿರುವ ಸುಮನ್ ಕುಮಾರಿ, ಕರಾಚಿಯ ಸ್ಜಬಿಸ್ಟ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಗಳಿಸಿದ್ದಾರೆ. ಮಗಳ ಸಾಧನೆ ಬಗ್ಗೆ ತಂದೆ ಪವನ್ ಕುಮಾರ್ ಬೊಡನ್ ಮಾತನಾಡಿದ್ದು, ತಮ್ಮ ಮಗಳು ಜಿಲ್ಲೆಯಲ್ಲಿರುವ ಬಡವರಿಗೆ ಉಚಿತ ಕಾನೂನು ನೆರವು ನೀಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ.
ಸುಮನ್ ಅತ್ಯಂತ ಸವಾಲಿನ ವೃತ್ತಿಯನ್ನು ಕೈಗೆತ್ತಿಕೊಂಡಿದ್ದಾರೆ. ಕಠಿಣ ಪರಿಶ್ರಮ ಹಾಗೂ ಪ್ರಮಾಣಿಕತೆಯಿಂದ ಉನ್ನತ ಮಟ್ಟಕ್ಕೇರುತ್ತಾರೆ ಎಂಬ ಭರವಸೆ ಇದೆ ಎನ್ನುತ್ತಾರೆ ತಂದೆ ಪವನ್ ಕುಮಾರ್. ಸುಮನ್ ಕುಮಾರಿ ತಂದೆ ಕಣ್ಣಿನ ತಜ್ಞರಾಗಿದ್ದು, ಸುಮನ್ ಕುಮಾರಿ ಅವರ ಹಿರಿಯ ಸಹೋದರಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರೆ ಮತ್ತೋರ್ವ ಸಹೋದರಿ ಲೆಕ್ಕ ಪರಿಶೋಧಕರಾಗಿದ್ದಾರೆ. ಸುಮನ್ ಲತಾ ಮಂಗೇಶ್ಕರ್ ಹಾಗೂ ಅತಿಫ್ ಅಸ್ಲಾಮ್ ಅವರ ಅಭಿಮಾನಿಯಾಗಿದ್ದಾರೆ.
ಇದಕ್ಕೂ ಮೊದಲು ರಾಣಾ ಭಗವಾನ್ ದಾಸ್ ಎಂಬುವವರು ಹಿಂದೂ ಸಮುದಾಯದಿಂದ ಪಾಕಿಸ್ತಾನದ ನ್ಯಾಯಾಧೀಶರಾಗಿದ್ದರು ಅಷ್ಟೆ ಅಲ್ಲದೇ 2005-2007 ನಡುವೆ ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದರು.