ಬದಿಯಡ್ಕ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮುಂದಿನ ತಿಂಗಳು ನಡೆಯಲಿರುವ ಮಹಾಯಾಗದ ಪೂರ್ವ ಭಾಗಿಯಾಗಿ ಶ್ರೀ ವಿಷ್ಣು ಸಹಸ್ರ ನಾಮ ಪಾರಾಯಣ ಅಭಿಯಾನ ರಥಯಾತ್ರೆಗೆ ಶನಿವಾರ ಸಂಜೆ ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಭವ್ಯ ಸ್ವಾಗತವನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ಶ್ರೀ ಯೋಗಾನಂದ ಸ್ವಾಮೀಜಿಯರಿಗೆ ಪೂರ್ಣಕುಂಭ ಸ್ವಾಗತವನ್ನು ನೀಡಲಾಯಿತು. ನಂತರ ಆಶೀರ್ವಚನವನ್ನು ನೀಡುತ್ತಾ ಅವರು ಫೆ.18ರಿಂದ 24ರ ವರೆಗೆ ಕೊಂಡೆವೂರಿನಲ್ಲಿ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗ ಕುರಿತು ಮಾಹಿತಿಯನ್ನು ನೀಡಿ ಎಲ್ಲರೂ ಸಕ್ರಿಯರಾಗಿ ಪಾಲ್ಗೊಳ್ಳಬೇಕೆಂದು ಕರೆಯಿತ್ತರು. ವಿಷ್ಣು ಸಹಸ್ರನಾಮ ಪಠಣದಿಂದ ಲೋಕಕಲ್ಯಾಣವಾಗುತ್ತದೆ ಎಂದರು.
ವೇದಮೂರ್ತಿ ಹರಿನಾರಾಯಣ ಮಯ್ಯ ವಿಷ್ಣುಸಹಸ್ರನಾಮ ಪಾರಾಯಣ, ಪೂಜಾದಿ ಕ್ರಿಯೆಗಳನ್ನು ನಡೆಸಿಕೊಟ್ಟು ಪ್ರಸಾದ ವಿತರಣೆ ಮಾಡಿದರು. ಸಹಸ್ರನೇತ್ರದಾನ, ಸಹಸ್ರ ವೃಕ್ಷ ಅಭಿಯಾನವನ್ನು ಈ ಸಂದರ್ಭದಲ್ಲಿ ವಿವರಿಸಲಾಯಿತು. ನಾರಾಯಣ ಮಣಿಯಾಣಿ ಮೊಳೆಯಾರು, ನಾರಾಯಣ ಶೆಟ್ಟಿ ಬೇಳ, ಗಂಗಾಧರ ಓಣಿಯಡ್ಕ, ರವಿ ಓಣಿಯಡ್ಕ, ಉದಯ ಮೈಕುರಿ, ಗಣೇಶ ಕೃಷ್ಣ ಅಳಕ್ಕೆ ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ರವೀಂದ್ರ ಮಾಸ್ತರ್ ಸ್ವಾಗತಿಸಿ, ಸುದಾಮ ಮಾಸ್ತರ್ ವಂದಿಸಿದರು.