ನವದೆಹಲಿ: ಭಾರತದಲ್ಲಿ ಚುನಾವಣೆಗಳಿಗೆ ಬಳಸುವ ಇವಿಎಂ- ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡಬಹುದು ಎಂದು ಭಾರತೀಯ ಸೈಬರ್ ತಜ್ಞರು ಹೇಳುತ್ತಿರುವ ಬೆನ್ನಲ್ಲೇ, ಇವುಗಳನ್ನು ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಬಹುದೆಂದು ಪರಿಶೀಲಿಸಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.
2014ರ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡಲಾಗಿತ್ತು ಎಂದು ಭಾರತೀಯ ಸೈಬರ್ ತಜ್ಞರು ಆರೋಪ ಮಾಡಿದ್ದರು. ಸೈಯದ್ ಸೂಜಾ ಎಂಬುವವರು ಲಂಡನ್ ನಲ್ಲಿ ನಡೆದ ಕಾನ್ಫರೆನ್ಸ್ ಉದ್ದೇಶಿಸಿ ಮಾತನಾಡುವ ವೇಳೆ, ಭಾರತದಲ್ಲಿ ಬಳಕೆ ಮಾಡುವ ಇವಿಎಂಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದು ಹೇಳಿದ್ದಾರೆ.
2014ರಲ್ಲಿ ಅವರ ತಂಡದ ಕೆಲ ಸದಸ್ಯರನ್ನು ಕೊಂದ ಬಳಿಕ ಜೀವ ಬೆದರಿಕೆಯಿಂದಾಗಿ ಭಾರತವನ್ನು ತೊರೆದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಈ ಸಂಬಂಧ ನಿನ್ನೆ(ಸೋಮವಾರ) ಹೇಳಿಕೆ ಬಿಡುಗಡೆ ಮಾಡಿರುವ ಚುನಾವಣಾ ಸಮಿತಿ, ಭಾರತದಲ್ಲಿ ಚುನಾವಣೆಯಲ್ಲಿ ಬಳಸುವ ಇವಿಎಂಗಳನ್ನು ಸುಲಭವಾಗಿ ಹ್ಯಾಕ್ ಮಾಡಲು ಸಾಧ್ಯವಿಲ್ಲ. ದುರುದ್ದೇಶದಿಂದ ಈ ರೀತಿಯ ಆರೋಪ ಮಾಡಲಾಗಿದೆ ಎಂದು ಹೇಳಿದೆ.
ಕಠಿಣ ಮೇಲ್ವಿಚಾರಣೆ ಹಾಗೂ ಭದ್ರತೆಯ ಅಡಿಯಲ್ಲಿ ಬಿಇಎಲ್ ಹಾಗೂ ಇಸಿಐಎಲ್ ಕಂಪನಿಗಳಿಂದ ಇವಿಎಂಗಳನ್ನು ಉತ್ಪಾದಿಸಲಾಗುತ್ತದೆ ಎಂದು ಆಯೋಗ ಪುನರ್ ಉಚ್ಚರಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನಾನ್ಮಕ ಕ್ರಮ ಕೈಗೊಳ್ಳಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.