ಬದಿಯಡ್ಕ: 2005 ರಲ್ಲಿ ಲಾಸ್ಯ ರಂಜಿನಿ ಎಂಬ ಹೆಸರಿನಲ್ಲಿ ಕೇವಲ ನೃತ್ಯ ಶಾಲೆಯಾಗಿ ಆರಂಭಗೊಂಡ ಸಂಸ್ಥೆ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ, ಶೈಕ್ಷಣಿಕ , ವೇದ , ಕಲಾರಂಗಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಜ್ವಲಿಸುವಂತೆ ಮಾಡುವ ಸದುದ್ದೇಶದಿಂದ 2013 ರಲ್ಲಿ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಎಂಬ ಹೆಸರಿನೊಂದಿಗೆ ಹೊಸ ಜನ್ಮ ತಾಳಿತು.
ಈಗಾಗಲೇ ನೃತ್ಯ, ಸಂಗೀತ, ಯಕ್ಷಗಾನ , ಸಾಹಿತ್ಯ, ಚಿತ್ರಕಲೆ , ಯೋಗ , ನಾಟಕ , ಕರಕುಶಲ ವಸ್ತುಗಳ ತಯಾರಿ ಮುಂತಾದ ಹಲವು ವಿಷಯಗಳಿಗೆ ತರಬೇತಿ ನೀಡುವ ಶಿಬಿರಗಳನ್ನೂ , ಮಕ್ಕಳಿಗೆ ಉಚಿತವಾಗಿ ಬೇಸಿಗೆಶಿಬಿರ , ಮುಖವರ್ಣಿಕಾ ಶಿಬಿರಗಳನ್ನೂ , ಭಾವಯಾನ , ಜಾನಪದ ಉತ್ಸವ, ಯಕ್ಷಗಾನ, ನೃತ್ಯಸಿಂಚನಗಳಂತಹ ಹಲವಾರು ಕಾರ್ಯಕ್ರಮಗಳನ್ನೂ ನಡೆಸಿಕೊಂಡು ಬಂದಿದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ , ಹಲವರಿಗೆ ಆರೋಗ್ಯ ನಿಧಿಯನ್ನೂ ನೀಡಿದೆ. ಈ ಎಲ್ಲಾ ಚಟುವಟಿಕೆಗಳನ್ನು ಗುರುತಿಸಿ ಜ. 20 ರಂದು ಭಾನುವಾರ ಕಾರ್ಕಳದ ಶ್ರೀಗೋಮಟೇಶ್ವರ ಸನ್ನಿಧಿಯಲ್ಲಿ ನಡೆದ ಹತ್ತನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಸಂಘ ರತ್ನ ರಾಜ್ಯಮಟ್ಟದ ಗೌರವ ಪ್ರಶಸ್ತಿಯನ್ನು ನಿರ್ದೇಶಕಿ ಅನುಪಮಾ ರಾಘವೇಂದ್ರ ಅವರಿಗೆ ನೀಡಿ ಗೌರವಿಸಲಾಯಿತು.