ಮುಳ್ಳೇರಿಯ: ಚೊಟ್ಟೆ ಕುಂಡಂಗುಳಿ ಶ್ರೀ ದುರ್ಗಾದೇವಿ ದೇವರ ಮನೆಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಖ್ಯಾತ ವ್ಯಂಗಚಿತ್ರಕಾರ ಎಲ್ಲೆನ್ ರಾವ್ ಚಿತ್ರ ರಚನಾ ಕೌಶಲ್ಯಗಳ ಓರೆಗೆರೆ ತರಬೇತಿಯೂ ಎಲ್ಲರ ಗಮನ ಸೆಳೆಯಿತು.
ಮೂಲತಃ ಕಾಸರಗೋಡು ಕುಂಟಾರು ಸಮೀಪದ ಮಾಯಿಲಂಕೋಟೆ ನಿವಾಸಿಯಾದ ಪ್ರಸ್ತುತ ಬೆಂಗಳೂರಿನ ಖಾಸಗಿ ಬ್ಯಾಂಕ್ ಒಂದರ ಉದ್ಯೋಗಿಯಾಗಿರುವ ಎಲ್ಲೆನ್ ರಾವ್(ಲಕ್ಷ್ಮೀನಾರಾಯಣ ರಾವ್) ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವುದರೊಂದಿಗೆ ತನ್ನ ಕಲಾಭಿರುಚಿಯನ್ನು ಇತರರಿಗೆ ಹಂಚಲು ಅವಕಾಶ ಲಭಿಸಿತು.
ಚಿತ್ರ ಬರೆಯಲು ಬಾರದವರೂ ಚಿತ್ರ ಬರೆಯಬಲ್ಲರು ಎಂಬುದನ್ನು ಮಕ್ಕಳ ಗೆರೆಗಳನ್ನೇ ಆಧಾರವಾಗಿಟ್ಟು ಚಿತ್ರ ರಚಿಸಿ ತೋರಿಸಿದರು. ಸುಲಭವಾಗಿ ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಬಿಡಿಸುವ ವಿಧಾನವನ್ನು ಉದಾಹರಣೆಯ ಮೂಲಕ ಪರಿಚಯಿಸಿದರು. ಒಬ್ಬರು ವ್ಯಕ್ತಿಯನ್ನು ವೇದಿಕೆಗೇರಿಸಿ, ಅವರ ಭಂಗಿಯನ್ನು ಚಿತ್ರಿಸಿ ಮೆಚ್ಚುಗೆ ಪಡೆದರು. ಹಾಗೆಯೇ ಸಮಕಾಲೀನ ವಿದ್ಯಮಾನಗಳ ಬಗ್ಗೆ ವ್ಯಂಗಚಿತ್ರಗಳನ್ನು ಬಿಡಿಸುವುದು, ಚಿತ್ರ ರಚನೆಯನ್ನು ಕರಗತ ಮಾಡಿಕೊಳ್ಳುವ ವಿಧಾನಗಳನ್ನು ಚಿತ್ರ ರಚನೆಯ ಮಾಡುವ ಮೂಲಕ ಪ್ರಸ್ತುತಪಡಿಸಿದರು.
ಈಗಾಗಲೇ ಹಲವು ವಾರ ಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ತಮ್ಮ ವ್ಯಂಗಚಿತ್ರಗಳ ಮೂಲಕ ಹೆಸರು ಪಡೆದ ಇವರ ನ್ನು ದೇವರ ಮನೆಯ ವತಿಯಿಂದ ಅಭಿನಂದಿಸಲಾಯಿತು.