ಉಪ್ಪಳ: ಪೈವಳಿಕೆ ಸಮೀಪದ ಬಾಯಾರಪದವು ಮುಳಿಗದ್ದೆಯ ಜಾರಂ ದರ್ಗಾ ಸಮೀಪ ಹರತಾಳದ ಹಿನ್ನೆಲೆಯಲ್ಲಿ ನಡೆದ ಘರ್ಷಣೆಯಲ್ಲಿ ಅತಿಕ್ರಮಿಗಳು ಕಲ್ಲು ತೂರಿದ ವೇಳೆ ಉಸ್ತಾದ್ ಅಬ್ದುಲ್ ಕರೀಂ ತಲೆಗೆ ಗಂಭೀರ ಗಾಯವಾಗಿದೆ.
ಪ್ರತಿಭಟನಾ ನಿರತರು ಒತ್ತಾಯಪೂರ್ವಕ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿ ಗುರುವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲವರು ದರ್ಗಾ ಸಮೀಪ ಪ್ರತಿಭಟನಾ ನಿರತರು ಹಾದುಹೋಗುತ್ತಿದ್ದಾಗ ಕಲ್ಲುತೂರಾಟ ನಡೆಸಿದರು. ಈ ವೇಳೆ ಉದ್ವಗ್ನತೆ ಸೃಷ್ಟಿಯಾಯಿತು. ಇದೇ ವೇಳೆ ದರ್ಗಾದ ಉಸ್ತಾದ್ ಅಬ್ದುಲ್ ಕರೀಂ ಅವರ ಮೇಲೆ ಏಕಾಏಕಿ ಧಾಳಿ ನಡೆಯಿತು. ಹಲ್ಲೆಯ ವೇಳೆ ಗಂಭೀರ ಗಾಯಗೊಂಡ ಅವರನ್ನು ಬಳಿಕ ಮಂಗಳೂರಿನ ಆಸ್ಪತ್ರೆ ದಾಖಲಿಸಲಾಯಿತು. ಆಕ್ರಮಣ-ಹಲ್ಲೆಯ ಬಗ್ಗೆ ಮಾಹಿತಿಗಳು ಪೇಟೆಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಪೋಲೀಸರು ಇದರ ದೃಶ್ಯಾವಳಿಗಳನ್ನು ಗಮನಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅಪರಾಹ್ನ ಮತ್ತೆ ಪರಿಸ್ಥಿತಿ ಬಿಗಡಾಯಿಸಿದ್ದು, ಪ್ರತಿಭಟನಾ ನಿರತರ ಮೇಲೆ ಸಿಪಿಎಂ ಕಾರ್ಯಕರ್ತರು ಆಕ್ರಮಣಕ್ಕೆ ಯತ್ನಿಸಿದರು.ಈ ವೇಳೆ ಉಂಟಾದ ಘರ್ಷಣೆಯಲ್ಲಿ ಸಿಪಿಎಂ ಮುಖಂಡ ಝಾಕೀರ್ ಎಂಬವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.