ಕುಂಬಳೆ: ಸರೋವರ ಕ್ಷೇತ್ರವೆಂದೇ ಪ್ರಸಿದ್ದವಾಗಿರುವ ಜಿಲ್ಲೆಯ ಪ್ರಸಿದ್ದ ದೇವಾಲಯವಾದ ಅನಂತಪುರ ಶ್ರೀಅನಂತಪದ್ಮನಾಭ ದೇವಾಲಯದ ಪ್ರಧಾನ ಆಕರ್ಷಣೆಯಾದ "ಬಬಿಯಾ" ಮೊಸಳೆ ನಿಧನವಾಗಿದೆ ಎಂದು ಶುಕ್ರವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಸುದ್ದಿಗಳು ಪ್ರಸಾರವಾಗುತ್ತಿದ್ದು, ಇದು ಸುಳ್ಳು ಎಂದು ತಿಳಿದುಬಂದಿದೆ.
ಶ್ರೀಕ್ಷೇತ್ರ ಅನಂತಪುರದ ಆಡಳಿತ ಮಂಡಳಿ ನೂತನ ಅಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್ ಅವರು ಶುಕ್ರವಾರ ರಾತ್ರಿ ಈ ಬಗ್ಗೆ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಶ್ರೀಕ್ಷೇತ್ರದ ಮೊಸಳೆ ಆರೋಗ್ಯಪೂರ್ಣವಾಗಿದೆ. ವೃಥಾ ಸುಳ್ಳು ಮಾಹಿತಿಗಳನ್ನು ಆಧುನಿಕ ಮಾಧ್ಯಮಗಳ ಮೂಲಕ ಹಬ್ಬಿಸಿ ಭಕ್ತರ ಭಾನೆಗಳನ್ನು ಗೊಂದಲಗೊಳಿಸುವ ಹುನ್ನಾರ ಸುಳ್ಳು ಮಾಹಿತಿಯ ಹಿಂದೆ ಅಡಗಿದೆ. ಈ ಬಗ್ಗೆ ಸೈಬರ್ ಕ್ರೈಂ ವಿಭಾಗಕ್ಕೆ ಇಂದು ದೂರು ದಾಖಲಿಸಲಾಗುವುದೆಂದು ತಿಳಿಸಿದ್ದಾರೆ.
ಜಾಲ ತಾಣದ ಬೀಲ ಪ್ರಸಾರಕರು:
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಕಪೋಲಕಲ್ಪಿತ ಸುದ್ದಿಗಳನ್ನು ಪ್ರಸಾರಗೊಳಿಸುವ ಹುಚ್ಚು ತೀವ್ರ ಸ್ವರೂಪ ಪಡೆಯುತ್ತಿರುವುದು ಜನಸಾಮಾನ್ಯರ ಭೀತಿಗೆ ಕಾರಣವಾಗಿದೆ. ಉನ್ನತ ತಂತ್ರಜ್ಞಾನ ಆಧಾರಿತ ಇಂದಿನ ಸ್ಮಾರ್ಟ್ ಪೋನ್ ಯುಗದಲ್ಲಿ ಬೇಕಾದಂತೆ ಬೇಕಾದಲ್ಲಿ ಮನಸ್ಸಿನೊಳಗೆ ಬಂದಿರುವುದನ್ನು ಹಂಚುವ ಹುಚ್ಚು ಮನಸ್ಸುಗಳಿಂದ ತೊಂದರೆಗಳಾಗುತ್ತಿರುವುದು ಸಾಮಾಜಿಕ ಅಸಂತುಷ್ಠಿಗೆ ಕಾರಣವಾಗುತ್ತಿದೆ. ಸುದ್ದಿ, ಸುದ್ದಿಯ ಮಹತ್ವ, ಪ್ರಸಾರಗೊಳಿಸುವ ಕನಿಷ್ಠ ಅರಿವುಗಳಿಲ್ಲದ ಯುವ ಸಮೂಹ ಏನನ್ನೋ ಸಾಧಿಸುವ ಛಲವೆಂಬಂತೆ ಜಾಲ ತಾಣಗಳ ದುರುಪಯೋಗದಲ್ಲಿ ನಿರತವಾಗಿರುವುದು ಸೈಬರ್ ಕ್ರೈಂ ವಿಭಾಗದ ನಿದ್ದೆಗೆಡಿಸುತ್ತಿದೆ. ಈ ನಿಟ್ಟಿನಲ್ಲಿ ಸೈಬರ್ ಕ್ರೈಂ ವಿಭಾಗ ವ್ಯಾಪಕ ಪ್ರಮಾಣದ ಕಾನೂನು ಕಟ್ಟಳೆಗಳ ನಿರ್ವಹಣೆಗೆ ಮುಂದಾಗಿದೆ. ಹೊಸ ತಲೆಮಾರು ಜಾಗೃತವಾದಲ್ಲಿ ಭವಿಷ್ಯ ಸುಲಲಿತವಾದೀತು ಎಂಬುದು ಸೈಬರ್ ಅಧಿಕಾರಿಗಳು ತಿಳಿಸಿದ್ದಾರೆ.