ಮಂಜೇಶ್ವರ: ಸೂಕ್ತ ಬಣ್ಣವನ್ನು ವ್ಯವಸ್ಥಿತ ಸಂಯೋಜನೆಯ ಮೂಲಕ ಸುಂದರ ಚಿತ್ರವಾಗಿ ಸೃಷ್ಟಿಸಲು ಸಾಧ್ಯ. ಸೂಕ್ತ ಪದಗಳ ಸಂಯೋಜನೆಯಿಂದ ಕಾವ್ಯದ ಸೃಷ್ಟಿಯಾಗುತ್ತದೆ' ಎಂದು ಸಾಹಿತಿ, ಕಾರ್ಕಳ ಪ್ರಥಮ ದರ್ಜೆ ಸರಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ವರದರಾಜ ಚಂದ್ರಗಿರಿ ಹೇಳಿದರು.
ಅವರು ಇತ್ತೀಚೆಗೆ ತಲಪಾಡಿ ಸಮೀಪದ ಕಣ್ವತೀರ್ಥದಲ್ಲಿರುವ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ, ಸಾಹಿತಿ ಟಿ.ಎ.ಎನ್ ಖಂಡಿಗೆಯವರ ಮನೆಯಲ್ಲಿ ನಡೆದ 'ಈ ಹೊತ್ತಿಗೆ ಈ ಹೊತ್ತಗೆ' ಸರಣಿ ಕಾರ್ಯಕ್ರಮದ 4ನೇ ಸಭೆಯಲ್ಲಿ ಸಾಹಿತಿ ಎಸ್ ಮಂಜುನಾಥ್ ಅವರ 'ನೆಲದ ಬೇರು ನಭದ ಬಿಳಲು' ಕೃತಿಯನ್ನು ಅನುಸಂಧಾನ ಮಾಡಿ ಮಾತನಾಡಿದರು.
ಮೌನವನ್ನು ಸವಿಯುವುದು ಹೇಗೆಂಬುದನ್ನು ಮಂಜುನಾಥರ ಕೃತಿಯ ಮೂಲಕ ತಿಳಿದುಕೊಳ್ಳಬಹುದು. ಮಂಜುನಾಥರ ಕಾವ್ಯದಲ್ಲಿ ನೇರವಾದ ಮಾತು ಮತ್ತು ಮಾತಿಗೆ ಅನಿರೀಕ್ಷಿತ ತಿರುವು ನೀಡುವ ಮೂಲಕ ಕಾವ್ಯಕ್ಕೆ ಹೊಸಮುಖ ಸೃಷ್ಟಿಸಿದರು. ಅವರ ಕೃತಿಗಳಲ್ಲಿ ಸಾಂಪ್ರದಾಯಿಕ ದೃಷ್ಟಿಯಿಂದ ಭಿನ್ನವಾದ ಒಳನೋಟವಿದೆ' ಎಂದು ಹೇಳಿದರು. ಸರಣಿ ಕಾರ್ಯಕ್ರಮದ ಸಂಯೋಜಕ ಟಿ ಎ ಎನ್ ಖಂಡಿಗೆ ಸ್ವಾಗತಿಸಿ, ಡಾ ಯೋಗೀಶ್ ಕೈರೋಡಿ ವಂದಿಸಿದರು. ಅನೇಕ ಮಂದಿ ಕೃತಿಯ ಕುರಿತು ಸಂವಾದ ನಡೆಯಿತು.