ಮಾನ್ಯದ ಜನತೆಯ ಕಲಾಭಿಮಾನ ಶ್ಲಾಘನೀಯ : ವೆಂಕಟಲಕ್ಷ್ಮಿ
ಬದಿಯಡ್ಕ : ಕಲಾಸಕ್ತರ ಮನಸನ್ನು ಸೆರೆಹಿಡಿಯುವ ಪ್ರಮುಖ ಶಾಸ್ತ್ರೀಯ ಕಲೆಗಳಲ್ಲಿ ಒಂದಾದ ಯಕ್ಷಗಾನವು ಪರಂಪರೆಯ ಪಾಠವನ್ನು ಯುವ ಪೀಳಿಗೆಗೆ ಕಲೆಯ ಮೂಲಕ ಸಾರುವುದಲ್ಲದೆ ಪೌರಾಣಿಕ ಐತಿಹಾಸಿಕ ಕತೆಗಳಿಗೆ ರಂಗದಲ್ಲಿ ಮರುಜೀವ ನೀಡುವುದರ ಮೂಲಕ ಪಾತ್ರಗಳು ಹಾಗೂ ಸನ್ನಿವೇಷಗಳು ಮನಸಿನಲ್ಲಿ ಅಚ್ಚಳಿಯದೆ ನಿಲ್ಲುವಂತೆ ಮಾಡುತ್ತದೆ. ಆದುದರಿಂದ ಕಲೆಯನ್ನು ಆಸಕ್ತರಿಗೆ ಕಲಿಸುವ ಮೂಲಕ ಜೀವಂತವಾಗಿಸುವ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ವೆಂಕಟಲಕ್ಷ್ಮಿ ಬಸವಲಿಂಗರಾಜು ಹೇಳಿದರು.
ಅವರು ಮಾನ್ಯ ದೇವರಕೆರೆ ಯಕ್ಷನಾಟ್ಯ ನಿಲಯದ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಹಾಗೂ ನಾಟ್ಯನಿಲಯದ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಮತ್ತು ನಾಟ್ಯನಿಲಯದ ವಿದ್ಯಾರ್ಥಿಗಳಿಂದ ಯಕ್ಷನಾಟ್ಯಗುರು ರಾಕೇಶ್ ರೈ ಅಡ್ಕ ಅವರ ನಿರ್ದೇಶನದಲ್ಲಿ ಜರುಗಿದ ಯಕ್ಷೋತ್ಸವ - 2018 ಯಕ್ಷಗಾನ ಪ್ರದರ್ಶನ ಸಿಡಿಯನ್ನು ಭಾನುವಾರ ಮಾನ್ಯ ದೇವರಕೆರೆಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಯಕ್ಷಗಾನ ಪ್ರದರ್ಶನವನ್ನು ಸತತವಾಗಿ ಏರ್ಪಡಿಸಿ ನೋಡಿ ಕಲಿಯುವ, ಆನಂದಿಸುವ ಅವಕಾಶದೊಂದಿಗೆ ಪುಟಾಣಿ ಮಕ್ಕಳನ್ನು ಯಕ್ಷಗಾನ ಕಲೆಯಲ್ಲಿ ಪಳಗಿಸಿ, ನಿಪುಣರನ್ನಾಗಿಸಿ ಹೊರಪ್ರಪಂಚಕ್ಕೆ ಪರಿಚಯಿಸುವ ಮಾನ್ಯದ ಜನತೆಯ ಕಲಾಭಿಮಾನ ಹಾಗೂ ಕಲೆಯ ಮೇಲಿನ ಜಾಗೃತ ಮನಸು ಬಹಳ ದೊಡ್ಡದು. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಮೈಮರೆಯುವಂತೆ ಮಕ್ಕಳನ್ನು ಪ್ರೇರೇಪಿಸುವ ಮೊಬೈಲ್ ಫೋನ್‍ಗಳನ್ನು ದೂರವಿಟ್ಟು ಗಂಡುಕಲೆ ಯಕ್ಷಗಾನವನ್ನು ಮೈಗೂಡಿಸಿಕೊಳ್ಳುವತ್ತ ಮಕ್ಕಳನ್ನು ಉತ್ತೇಜಿಸುವ ಕಾರ್ಯ ಮುಂದುವರಿಯಲಿ ಎಂದು ಅವರು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾವಿದ ವೆಂಕಟ್ರಮಣ ಹೊಳ್ಳ ಕಾಸರಗೋಡು ಮಾತನಾಡಿ ಕಲಿತ ಕಲೆಯನ್ನು ಆಸಕ್ತರಿಗೆ ಕಲಿಸುವ ಕಲಾವಿದ ಕಲೆಯ ಉಳಿವಿಗೆ ಕಾರಣನಾಗುತ್ತಾನೆ. ಮಕ್ಕಳಲ್ಲಿ ಹಾಗೂ ಯುವ ಮನಸುಗಳಲ್ಲಿ ಯಕ್ಷಗಾನದ ಮೇಲಿನ ಆಸಕ್ತಿ ಹೆಚ್ಚಾಗಲು ಯಕ್ಷಗಾನ ವೀಕ್ಷಣೆ ಸಹಾಯಕ. ಆದುದರಿಂದ ಯಕ್ಷಗಾನದ ಸಿಡಿಯು ಎಲ್ಲರ ಮನೆಮನೆಗಳಲ್ಲಿ ಇನ್ನೊಮ್ಮೆ ಯಕ್ಷ ಲೋಕವನ್ನು ತೆರೆದಿಡಲಿ. ಆ ಮೂಲಕ ಇನ್ನಷ್ಟು ಜನರು ಈ ಕಲೆಯನ್ನು ಆರ್ಜಿಸುವಂತಾಗಲಿ ಅಲ್ಲದೇ ಅರ್ಹ ಯಕ್ಷ ಕಲಾವಿದರು ಸಮಾಜದಲ್ಲಿ ಗುರುತಿಸುವಂತಾಗಲಿ ಎಂದು ಹೇಳಿದರು.
ಬದಿಯಡ್ಕ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷರು ಯಕ್ಷಗಾನ ಪ್ರೋತ್ಸಾಹಕರಾದ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಖ್ಯಾತ ಯಕ್ಷಗುರು ರಾಕೇಶ್ ರೈ ಅಡ್ಕ, ನಾರಾಯಣ ಮಣಿಯಾಣಿ ಮಾನ್ಯ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಖಾದರ್ ಮಾನ್ಯ , ಯಕ್ಷಗಾನ ಸಿಡಿ ನಿರ್ಮಾಪಕ ಟೀಂ ಫೆÇೀಕ್ಸ್ ಸ್ಟಾರ್ ಬದಿಯಡ್ಕ ಸದಸ್ಯರು ಉಪಸ್ಥಿತರಿದ್ದರು. ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ವಿಜಯ ಕುಮಾರ್ ಮಾನ್ಯ ವಂದಿಸಿದರು.