ಕಾಸರಗೋಡು: "ಹರಿತಯಾನಂ" ವಾಹನ ಪರ್ಯಟನೆ ಶುಕ್ರವಾರ ಆರಂಭಗೊಂಡಿದೆ.
ಹರಿತ ಕೇರಳಂ ಮಿಷನ್ ನಡೆಸುತ್ತಿರುವ ಚಟುವಟಿಕೆಗಳ, ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಾಹನ ಮೂಲಕ ಈ ಪ್ರಚಾರ ಪರ್ಯಟನೆ ನಡೆಸಲಾಗುತ್ತಿದೆ.
ಉಭಯ ಬದಿಯಲ್ಲಿ ಡಿಜಿಟಲ್ ಸ್ಕ್ರೀನ್ ಅಳವಡಿಸಿ ಪ್ರಧಾನ ಕೇಂದ್ರಗಳಲ್ಲಿ ಜನತೆಯ ಬಳಿ ಬಂದು ವೀಡಿಯೋ ಪ್ರದರ್ಶನ ಮೂಲಕ ಈ ಪ್ರಚಾರ ನಡೆಸಲಾಗುತ್ತಿದೆ. ದಕ್ಷಿಣ ಮತ್ತು ಉತ್ತರ ಕೇರಳ ವಲಯ ಮೂಲಕ ಎರಡು ವಾಹನ ಜಾಥಾಗಳು ಈ ಮೂಲಕ ಆರಂಭಗೊಂಡಿವೆ.
ಉತ್ತರ ವಲಯದ ವಾಹನ ಜಾಥಾ ಶುಕ್ರವಾರ ನಗರದ ನೂತನ ಬಸ್ ನಿಲ್ದಾಣ ಬಳಿಯ ಸಹಿಮರದಡಿ ಆರಂಭಗೊಂಡಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ವಾಹನಕ್ಕೆ ಹಸುರು ನಿಶಾನೆ ತೋರಿದರು. ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮುಖ್ಯ ಅತಿಥಿಯಾಗಿದ್ದರು. ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಶಾಹಿನಾ ಸಲೀಂ, ವಿವಿಧ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮನ್ಯನ್ ಹರಿತಯಾನಂ ನ ಮಾಹಿತಿ ನೀಡಿದರು.
ನಿನ್ನೆ ಜಿಲ್ಲಾಧಿಕಾರಿಕಚೇರಿ ಆವರಣ, ಪಾಲಕುನ್ನು, ಮಡಿಕೈ,ಪುದಿಯ ಕೋಟೆ, ಕಾ?ಂಗಾಡ್ ಬಸ್ ನಿಲ್ದಾಣ ಪ್ರದೇಶಗಳಲ್ಲಿ ಪರ್ಯಟನೆ ನಡೆಯಿತು. ಇಂದು (ಜ.6) ನೀಲೇಶ್ವರ, ಕಾಲಿಕಡವು, ಚೆರುವತ್ತೂರು, ತ್ರಿಕರಿಪುರ, ಪಡನ್ನ ಪ್ರದೇಶಗಳಲ್ಲಿ ಪರ್ಯಟನೆ ನಡೆಸಲಿದೆ.
ಹರಿತ ಕೇರಳಂ ಮಿಷನ್ ನ ಕುರಿತು, ಹಸುರು ಸಂಹಿತೆ ಬಗ್ಗೆ, ಶುಚಿತ್ವ-ತ್ಯಾಜ್ಯ ಪರಿಷ್ಕರಣೆ ಸಂಬಂಧ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ರಚಿಸಲಾದ ಹಸುರು ಕ್ರಿಯಾ ಸೇನೆಯ ಚಟುವಟಿಕೆಗಳು, ಸುರಕ್ಷಿತ ಆಹಾರೋತ್ಪಾದನೆ, ಹೆಚ್ಚುವರಿ ಭತ್ತದ ಕೃಷಿ ಉತ್ಪಾದನೆ, ನೀರಾವರಿ ಸಂರಕ್ಷಣೆ, ನದಿ ಸಹಿತ ಜಲಾಶಯಗಳ ಪುನಶ್ಚೇತನ ಇತ್ಯಾದಿ ವಿಷಯಗಳ ವೀಡಿಯೋ ಸಹಿಜಾಗೃತಿ ಮೂಡಿಸುವ ಚಟುವಟಿಕೆ ಹರಿತಯಾನಂ ಮೂಲಕ ನಡೆಸಲಾಗುತ್ತಿದೆ.