ತಿರುವನಂತಪುರ: ತಿರುವನಂತಪುರ ಜಿಲ್ಲೆಯ ಚೆಂಗಲ್ ಮಹೇಶ್ವರ ಶಿವಪಾರ್ವತಿ ಕ್ಷೇತ್ರದ 111 ಅಡಿ ಎತ್ತರದ ಶಿವಲಿಂಗ ನಿರ್ಮಾಣ ಅಂತಿಮ ಹಂತದಲ್ಲಿದೆ. ಅತಿ ಹೆಚ್ಚು ಎತ್ತರದ ಶಿವಲಿಂಗ ಎಂಬ ದಾಖಲೆಗಿರುವ ತಪಾಸಣೆಯೂ ಪೂರ್ಣಗೊಂಡಿದೆ. 8 ಅಂತಸ್ತುಗಳಿರುವ ಶಿವಲಿಂಗದೊಳಗೆ ಆರಾಧನೆಗೆ ಸೌಕರ್ಯ ಇರಲಿದೆ.
2012 ಮಾ.23ರಂದು 111 ಅಡಿ ಎತ್ತರದ ಶಿವಲಿಂಗದ ನಿರ್ಮಾಣ ಆರಂಭಿಸಲಾಗಿತ್ತು. 6 ವರ್ಷ ಬಳಿಕ ನಿರ್ಮಾಣ ಅಂತಿಮ ಹಂತಕ್ಕೆ ತಲುಪಿದೆ. 111 ಅಡಿ ಎತ್ತರ ಹಾಗೂ 111 ಅಡಿ ಸುತ್ತಳತೆಯಲ್ಲಿ ನಿರ್ಮಾಣ ನಡೆಸಲಾಗಿದೆ.
ಶಿವಲಿಂಗದೊಳಗಿನಿಂದ ಸುತ್ತುವರಿದು ನಡೆದು ಮೇಲೇರಬಹುದಾದ ಸೌಕರ್ಯವನ್ನು ವ್ಯವಸ್ಥೆ ಮಾಡಲಾಗಿದೆ. ಅರಣ್ಯದಾರಿಯಲ್ಲಿ ನಡೆಯುವ ಅನುಭವ ಭಾಸವಾಗುವ ರೀತಿಯಲ್ಲಿ ಇದರ ನಿರ್ಮಾಣ ನಡೆಸಲಾಗಿದೆ. ಪ್ರತಿಯೊಂದು ಅಂತಸ್ತುಗಳನ್ನು ಹತ್ತುವಾಗ ಅಲ್ಲಿ ಪ್ರಾರ್ಥನೆ ಮಾಡಲಿರುವ ಸೌಕರ್ಯವನ್ನು ವ್ಯವಸ್ಥೆಗೊಳಿಸಲಾಗಿದೆ. ಕೆಳಗಿನ ಅಂತಸ್ತಿನಲ್ಲಿ 108 ರೀತಿಯ ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಾಗುವುದು. ಇದರ ಶಿಲಾನ್ಯಾಸ ಪೂರ್ಣಗೊಂಡಿದೆ.
8ನೇ ಅಂತಸ್ತಿನಲ್ಲಿ ಕೈಲಾಸ ಹೋಲಿಕೆ ನಿರ್ಮಿಸಲಾಗಿದೆ. ಅಲ್ಲಿ ಪರಮ ಶಿವ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. ಫೆ. 20ರಿಂದ ಕ್ಷೇತ್ರ ಉತ್ಸವ ನಡೆಯಲಿದೆ. ಅದಕ್ಕೂ ಮೊದಲು, 111ಅಡಿ ಎತ್ತರದ ಶಿವಲಿಂಗ ಪೂರ್ಣಗೊಳಿಸುವ ಪ್ರಯತ್ನ ನಡೆಯುತ್ತಿರುವುದಾಗಿ ಕ್ಷೇತ್ರ ಮಠಾಧಿಪತಿ ಮಹೇಶ್ವರಾನಂದ ಸ್ವಾಮೀಜಿ ಹೇಳಿದ್ದಾರೆ.
111 ಅಡಿ ಎತ್ತರದ ಶಿವಲಿಂಗ ಜಗತ್ತಿನಲ್ಲಿ ಪ್ರಥಮವಾಗಿ ಪೂರ್ಣಗೊಳಿಸಲಾಗುತ್ತಿದೆ. 108 ಅಡಿ ಎತ್ತರದಲ್ಲಿ ಕರ್ನಾಟಕದ ಕೋಲಾರದ ಕ್ಷೇತ್ರದಲ್ಲಿ ಶಿವಲಿಂಗವಿದೆ. ಈ ದಾಖಲೆಯನ್ನು ಚೆಂಗಲ್ ಶಿವಪಾರ್ವತಿ ಕ್ಷೇತ್ರದ ಶಿವಲಿಂಗ ಮೀರಲಿದೆ. ಇದಕ್ಕಾಗಿ ಇಂಡಿಯ ಬುಕ್ ಆಫ್ ರೆಕಾರ್ಡ್ ಹಾಗೂ ಲಿಂಮ್ಕಾ ಬುಕ್ ಆಫ್ ರೆಕಾರ್ಡ್ ಮತ್ತು ಗಿನ್ನೆಸ್ ಬುಕ್ ಆಫ್ ರೆಕಾರ್ಡ್‍ನ ಪ್ರತಿನಿಧಿಗಳು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಶೀಘ್ರದಲ್ಲೇ ದಾಖಲೆಯ ಘೋಷಣೆಗಳು ನಡೆಯಲಿವೆ.