ಪೆರ್ಲ:ಶ್ರೇಷ್ಟ ವ್ಯಕ್ತಿತ್ವ, ಅಪೂರ್ವ ವಾಗ್ಮೀಯತೆ ಹಾಗೂ ಪ್ರಚೋದನಾತ್ಮಕ ಬರವಣಿಗೆಗಳಿಂದ ರಾಷ್ಟ್ರ ಚೇತನವನ್ನು ಜಾಗೃತಗೊಳಿಸಿದ ವಿಶ್ವ ಚೇತನ ಸ್ವಾಮಿ ವಿವೇಕಾನಂದರು, ಯುವಕರಲ್ಲಿ ನವೋತ್ಸಾಹವನ್ನು ಕೆರಳಿಸಿ, ನಮ್ಮ ಸಂಸ್ಕೃತಿಯ ಬಗ್ಗೆ ಅರಿವು, ಹೆಮ್ಮೆ ಮೂಡಿಸಿ ಸ್ವತಂತ್ರ, ನವ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ್ದರು ಎಂದು ನಾಲಂದ ಕಾಲೇಜು ಉಪನ್ಯಾಸಕಿ ಅಮೃತ ಹೇಳಿದರು.
ನಾಲಂದ ಮಹಾವಿದ್ಯಾಲಯ ಎನ್ನೆಸ್ಸೆಸ್ ಘಟಕದಿಂದ ಸೋಮವಾರ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವಿಶ್ವದಾದ್ಯಂತ ಪರ್ಯಟನೆ ನಡೆಸಿ ತಮ್ಮ ವಿಚಾರ ಧಾರೆಗಳನ್ನು ಧಾರೆ ಎರೆದ ವಿವೇಕಾನಂದರಿಗೆ ಯುವಶಕ್ತಿಯ ಮೇಲೆ ಅಚಲ ನಂಬಿಕೆ ಮತ್ತು ಗೌರವವಿತ್ತು.ಮಾನವನಿಗೆ ಅಸಾಧ್ಯವೆಂಬುದಿಲ್ಲ.ಸಾಧನೆಗೆ ಆತ್ಮವಿಶ್ವಾಸ, ಏಕಾಗ್ರತೆ, ಛಲ ಅತಿ ಮುಖ್ಯ ಎಂದಿದ್ದರು. ದೇಶದ ಉದ್ಧಾರ ಯುವಕರಿಂದ ಸಾಧ್ಯ ಎಂದು ಪ್ರತಿಪಾದಿಸಿದ್ದ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಯೋಜನಾಧಿಕಾರಿ ಸುರೇಶ್ ಕೆ. ಎಂ.ಮಾತನಾಡಿ, ಯುವ ಜನತೆ ತಮ್ಮನ್ನು ಸಾಮಾಜಿಕ ಚಟುವಟಿಕೆ, ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿ ಕೊಂಡಲ್ಲಿ ರಾಷ್ಟ್ರಾಭಿವೃದ್ಧಿ ಸಾಧ್ಯ ಎಂದರು.
ಎನ್ನೆಸ್ಸೆಸ್ ಕಾರ್ಯದರ್ಶಿ ರೂಪ, ಧನ್ಯ, ನಿಶ್ಚಿತ, ಸದಸ್ಯರು ಉಪಸ್ಥಿತರಿದ್ದರು.ಕೃತಿಕಾ ಸ್ವಾಗತಿಸಿ, ಪ್ರದೀಪ್ ಎಸ್. ವಂದಿಸಿದರು.ಸ್ನೇಹಾ ನಿರೂಪಿಸಿದರು.