ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಲ್ಲ ಪ್ರಮುಖ ವಲಯಗಳ ಸಮಗ್ರ ಅಭಿವೃದ್ಧಿಗೆ ಬಜೆಟ್ಟಿನಲ್ಲಿ ಸೂಕ್ತ ಹಣವನ್ನು ಮೀಸಲಿಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟು ಸಿಪಿಎಂ ಪ್ರತಿನಿಧಿಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮನವಿ ಸಲ್ಲಿಸಿದರು. ಉತ್ತರ ಕೇರಳದ ಪ್ರಥಮ ವಿಧಾನಸಭಾ ಕ್ಷೇತ್ರವಾದ ಮಂಜೇಶ್ವರದ ಅಭಿವೃದ್ಧಿಗೆ ಸರಕಾರ ವಿಶೇಷ ಗಮನಹರಿಸಬೇಕು, ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು ಕೊಡಮಾಡಬೇಕು, ಶಿಕ್ಷಣ, ನೀರಾವರಿ ಸಹಿತ ಸಾಂಸ್ಕøತಿಕ ಕ್ಷೇತ್ರಗಳ ಅಭಿವೃದ್ಧಿ ಪ್ರಸ್ತುತ ಅಗತ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದರಂತೆ ಗೋವಿಂದ ಸ್ಮಾರಕಕ್ಕೆ ಹಣ ಮುಂಜೂರಾತಿ, ಹೊಸಂಗಡಿಯಲ್ಲಿ ಮಾರಾಟ ತೆರಿಗೆ ಚೆಕ್‍ಪೋಸ್ಟ್‍ಗಾಗಿ ಮೀಸಲಿಟ್ಟ 9.5 ಎಕರೆ ಪ್ರದೇಶದಲ್ಲಿ ಮಂಜೇಶ್ವರ ತಾಲೂಕು ಕಚೇರಿ ಕೇಂದ್ರವಾದ ಮಿನಿ ಸಿವಿಲ್ ಸ್ಟೇಶನ್ ನಿರ್ಮಾಣದ ಬಗ್ಗೆ ವಿನಂತಿಸಲಾಗಿದೆ. ಶಿರಿಯಾ ಅಣೆಕಟ್ಟು, ಬಂಬ್ರಾಣ ಅಣೆಕಟ್ಟುಗಳ ಪುನರ್ ನಿರ್ಮಾಣ, ಕುಂಬಳೆಯಲ್ಲಿ ಐಎಚ್‍ಆರ್‍ಡಿ ಕಾಲೇಜು ಸ್ಥಾಪನೆ, ಕುಂಬಳೆ ಪಾರ್ಥಿಸುಬ್ಬ ಯಕ್ಷಗಾನ ಕಲಾಕೇಂದ್ರದ ನಿರ್ಮಾಣ, ಕೇರಳ ತುಳು ಅಕಾಡೆಮಿಯಡಿ ತುಳು ಭವನದ ನಿರ್ಮಾಣ, ಮಂಜೇಶ್ವರ ಮೀನುಗಾರಿಕಾ ಬಂದರು ಮೊದಲಾದ ಯೋಜನೆಗಳ ಸಾಕಾರಕ್ಕೆ ಮನವಿಯಲ್ಲಿ ವಿನಂತಿಸಲಾಗಿದೆ.
ತ್ರಿಕರಿಪುರ ಶಾಸಕ ಎಂ.ರಾಜಗೋಪಾಲ್, ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೆ.ಆರ್ ಜಯಾನಂದ, ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿ ಸಿ.ಎ.ಸುಬೈರ್ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಪತ್ರವನ್ನು ಹಸ್ತಾಂತರಿಸಿದರು.