ನವದೆಹಲಿ: ಬಾಂಗ್ಲಾದೇಶ, ಪಾಕಿಸ್ತಾನ, ಮತ್ತು ಅಪ್ಘಾನಿಸ್ತಾನದ ಮುಸ್ಲಿಯೇತರ ವಲಸಿಗರಿಗೆ ಭಾರತದ ಪೌರತ್ವ ಒದಗಿಸುವ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ನಿನ್ನೆ ಅಂಗೀಕಾರ ಪಡೆಯಿತು.
ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ-2019ರ ಮಂಡಿಸಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್ ,ಈ ಮಸೂದೆ ಸಂವಿಧಾನದಲ್ಲಿನ ವಿನಾಯಿತಿಗಳಿಗೆ ವಿರುದ್ಧವಾಗಿಲ್ಲ, ಮೂರು ನೆರೆಯ ರಾಷ್ಟ್ರಗಳಲ್ಲಿ ನೋವುಂಡ ಅಲ್ಪಸಂಖ್ಯಾತರಿಗೆ ನೆರವು ನೀಡಲಿದೆ ಎಂದು ಹೇಳಿದರು.
ಬಾಂಗ್ಲಾದೇಶ, ಪಾಕಿಸ್ತಾನ, ಮತ್ತು ಅಪ್ಘಾನಿಸ್ತಾನದಿಂದ ವಲಸೆ ಬಂದು ಆರು ವರ್ಷಗಳಿಂದ ಭಾರತದಲ್ಲಿ ನೆಲೆಸಿರುವ ಹಿಂದೂಗಳು, ಜೈನರು, ಕ್ರಿಶ್ಚಿಯನ್, ಸಿಖ್, ಬೌದ್ದರು ಹಾಗೂ ಪಾರ್ಸಿಯನ್ನರು ಯಾವುದೇ ದಾಖಲೆ ಹೊಂದಿದ್ದರೂ ಸಹ ಈ ಮಸೂದೆ ಭಾರತದ ಪೌರತ್ವವನ್ನು ನೀಡಲಿದೆ ಎಂದರು.
ಭಾರತ ಹೊರತುಪಡಿಸಿದರೆ ಬೇರೆಡೆಗೆ ಹೋಗಲು ಅವರಿಗೆ ಅವಕಾಶ ಇಲ್ಲ. ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಸೇರಿದಂತೆ ಅನೇಕ ನಾಯಕರು ನೆರೆಯ ರಾಷ್ಟ್ರಗಳ ನೊಂದ ಅಲ್ಪಸಂಖ್ಯಾತ ಜನರಿಗೆ ಆಶ್ರಯ ಒದಗಿಸುವ ಮನೋಭಾವ ಹೊಂದಿದ್ದರು ಎಂದು ರಾಜನಾಥ್ ಸಿಂಗ್ ಹೇಳಿದರು.