HEALTH TIPS

ಶಬರಿಮಲೆ ಸ್ತ್ರೀ ಪ್ರವೇಶದ ವಿರುದ್ಧ ಕರೆ ನೀಡಿದ್ದ ಹರತಾಳದಲ್ಲಿ ವಿವಿದೆಡೆ ಸಂಘರ್ಷ ರಸ್ತೆ ತಡೆ, ವಾಹನಗಳು ನಜ್ಜುಗುಜ್ಜು, ಸಿಪಿಎಂ ನೇತಾರರ ಮನೆಗಳ ಮೇಲೆ ಕಲ್ಲು ತೂರಾಟ, ಕಚೇರಿಗಳಿಗೆ ಹಾನಿ

       
        'ಕಾಸರಗೋಡು: ಶಬರಿಮಲೆ ಕ್ಷೇತ್ರದಲ್ಲಿ ಸ್ತ್ರೀ ಪ್ರವೇಶಕ್ಕೆ ಆಸ್ಪದ ನೀಡಿದ ಸರಕಾರದ ಕ್ರಮವನ್ನು ಖಂಡಿಸಿ ಮತ್ತು ಕರ್ಮ ಸಮಿತಿ ಸಮಿತಿ ಕಾರ್ಯಕರ್ತನೋರ್ವ ಪತ್ತನಂತಿಟ್ಟದಲ್ಲಿ ಕಲ್ಲೇಟಿನಿಂದ ಮೃತಪಟ್ಟ ಎಂದು ಆರೋಪಿಸಿ ಅಯ್ಯಪ್ಪ ಧರ್ಮ ಸೇನಾ ಮತ್ತು ಶಬರಿಮಲೆ ಕರ್ಮ ಸಮಿತಿ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳು ಹಮ್ಮಿಕೊಂಡ ಹರತಾಳದಲ್ಲಿ ರಸ್ತೆ ತಡೆ, ಅಂಗಡಿ ಮುಗ್ಗಟ್ಟು ಮುಚ್ಚುವಿಕೆ, ಕಾವೇರಿದ ಪ್ರತಿಭಟನೆ ಸಹಿತ ವ್ಯಾಪಕ ಹಿಂಸಾಚಾರ ನಡೆದಿದೆ. ನಗರ ಮತ್ತು ಹೊರವಲಯದ ಸಿಪಿಎಂ ನೇತಾರರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ನೀಲೇಶ್ವರದ ಸಿಪಿಎಂ ಕಚೇರಿಯನ್ನು ಹಾನಿಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ತಲಪಾಡಿ, ಮಂಜೇಶ್ವರ, ಬಂದ್ಯೋಡುಗಳಲ್ಲಿ ರಸ್ತೆ ಅಡ್ಡಗಟ್ಟಿ ವಾಹನಗಳನ್ನು ತಡೆದ ಘಟನೆ ನಡೆದಿದೆ. ಕುಂಬಳೆ ಪೇಟೆ ಪ್ರದೇಶದಲ್ಲಿ ಹರತಾಳದ ವೇಳೆ ರಸ್ತೆ ಮಧ್ಯೆ ಕಲ್ಲುಗಳನ್ನಿಟ್ಟು, ಘೋಷಣೆ ಕೂಗಿಪ್ರತಿಭಟನೆ ನಡೆಸಲಾಯಿತು. ಒಳ ಪ್ರದೇಶಗಳಾದ ಕೈಕಂಬ ಬಾಯಾರುಪದವು ರಸ್ತೆಯ ಜೋಡುಕಲ್ಲು, ಬಾಯಾರುಪದವು, ಮುಳಿಗದ್ದೆ ಪ್ರದೇಶಗಳಲ್ಲಿ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿಟ್ಟು, ಟಯರ್ ಸುಡಲಾಯಿತು. ಜೋಡುಕಲ್ಲು ಪ್ರದೇಶದಲ್ಲಿ ಒಟ್ಟು ಸೇರಿದ ಪ್ರತಿಭಟನಾಕಾರರು ರಸ್ತೆ ಮಧ್ಯೆ ಕುಳಿತು ಅಯ್ಯಪ್ಪ ನಾಮಜಪ ಹಮ್ಮಿಕೊಂಡರು. ಬಾಯಾರುಪದವು ಪ್ರದೇಶದಲ್ಲಿ ಸಿಪಿಎಂ-ಸಂಘ ಪರಿವಾರದ ಕಾರ್ಯಕರ್ತರ ಮಧ್ಯೆ ಜಟಾಪಟಿ ನಡೆದಿದ್ದು ಇಬ್ಬರು ಗಾಯಗೊಂಡಿದ್ದಾರೆ. ಬದಿಯಡ್ಕ ಪ್ರದೇಶದಲ್ಲಿ ಡಿವೈಎಫ್‍ಐ ಕಚೇರಿಗೆ ಕರಿ ಆಯಿಲ್ ಸಿಂಪಡಿಸಲಾಗಿದೆ. ಪೆರ್ಮುದೆ ಜಂಕ್ಷನ್ ಬಳಿ ರಸ್ತೆ ತಡೆ ನಡೆಸಿದ ಕಾರ್ಯಕರ್ತರ ಮೇಲೆ ಪೋಲಿಸರು ಆಗಮಿಸಿ ಲಾಠಿ ಪ್ರಯೋಗಿಸಿದ ಘಟನೆ ನಡೆದಿದೆ, ಅನಂತರ ರಸ್ತೆ ತೆರವುಗೊಳಿಸಲಾಯಿತು. ಸೀತಾಂಗೋಳಿ ಮತ್ತು ಬೇಳ ಚರ್ಚ್ ಮುಂದುಗಡೆ ಸಾಗುವ ರಸ್ತೆಯಲ್ಲಿ ಬುಧವಾರ ರಾತ್ರಿ ವೇಳೆ ಕಟ್ಟಿಗೆ ಜೋಡಿಸಿ, ಟಯರ್‍ಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಉಳಿಯತ್ತಡ್ಕ, ಮಧೂರು, ವಿದ್ಯಾನಗರಗಳಲ್ಲಿ ರಸ್ತೆ ತಡೆ ಏರ್ಪಟ್ಟಿತ್ತು. ನಗರದ ಹಲವು ಅಂಗಡಿ ಮುಗ್ಗಟ್ಟುಗಳು ಗುರುವಾರ ಮುಂಜಾನೆಯಿಂದ ತೆರೆದಿದ್ದು, ಪ್ರತಿಭಟನಾಕಾರರು ಉದ್ವಿಗ್ನಗೊಂಡು, ಕಲ್ಲು ತೂರಾಟ ನಡೆಸಿದ ಕಾರಣ ಪೋಲಿಸರ ಮಧ್ಯಸ್ಥಿಕೆಯ ಮೂಲಕ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುಗಡೆಗೊಳಿಸಲಾಯಿತು. ಹೊಸ ಬಸ್ಸು ನಿಲ್ದಾಣದ ಫಾತಿಮಾ ಆರ್ಕೇಡ್ ಕಟ್ಟಡಕ್ಕೆ ಕಲ್ಲೆಸೆತದ ಪರಿಣಾಮ ಗಾಜುಗಳು ಒಡೆದಿವೆ, ಪ್ರತಿಭಟನೆಯನ್ನು ದೃಶ್ಯವನ್ನು ಸೆರೆಹಿಡಿಯುತ್ತಿದ್ದ ಖಾಸಗಿ ಟಿ.ವಿ ಚಾನೆಲ್ ವರದಿಗಾರರನ್ನು ಬೆದರಿಸಿದ ಘಟನೆ ನಡೆದಿದೆ. ಸಂಘರ್ಷ ಸಾಧ್ಯತೆ ಹತ್ತಿಕ್ಕಲು ಆಯಕಟ್ಟಿನ ಸ್ಥಳದಲ್ಲಿ ಹೆಚ್ಚಿನ ಪೋಲಿಸ್ ಭದ್ರತೆ ಒದಗಿಸಲಾಯಿತು. ಇತ್ತೀಚೆಗೆ ನೇಮಕಗೊಂಡ ಜಿಲ್ಲಾ ಸಹಾಯಕ ಪೋಲಿಸ್ ವರಿಷ್ಠೆ ಡಿ.ಶಿಲ್ಪಾ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಹರತಾಳ ಸಂದರ್ಭ ಅಂಗಡಿ ಮುಗ್ಗಟ್ಟುಗಳು ತೆರೆಯಲಿದೆ ಎಂದಿದ್ದ ವ್ಯಾಪಾರಿ ಏಕೋಪನ ಸಮಿತಿ ಹೇಳಿಕೊಂಡಿತ್ತು, ಆದರೆ ಹೆಚ್ಚಿನ ಅಕ್ರಮ ಸಾಧ್ಯತೆಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಪೋಲಿಸರು ನಗರದಲ್ಲಿನ ಹೆಚ್ಚಿನ ಅಂಗಡಿಗಳನ್ನು ಮುಚ್ಚುಗಡೆಗೊಳಿಸಿದರು.
      ಡಿವೈಎಫ್‍ಐ ಕಚೇರಿಗೆ ಕರಿ ಆಯಿಲ್:
   ಬದಿಯಡ್ಕ ನೀರ್ಚಾಲು ಸಮೀಪದ ಕಡಂಬಳದ ಡಿವೈಎಫ್‍ಐ ಕಚೇರಿಗೆ ಪ್ರತಿಭಟನಾಕಾರರು ಕರಿ ಆಯಿಲ್ ಸಿಂಪಡಿಸಿದ್ದಾರೆ, ಹರತಾಳದ ವೇಲೆ ಪ್ರತಿಭಟನಾಕಾರರು ಆಯಿಲ್ ಸಿಂಪಡಿಸಿದ್ದಾರೆ ಎಂದು ಡಿಫಿ ನೇತಾರರು ಆರೋಪಿಸಿದ್ದಾರೆ. ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಡಿಫಿ ಯುನಿಟ್ ಕಾರ್ಯದರ್ಶಿ ಹೇಳಿದ್ದು, ಬದಿಯಡ್ಕ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
     ಸಿಪಿಎಂ ನೇತಾರರ ಮನೆಗೆ ಕಲ್ಲು ತೂರಾಟ:
    ಹರತಾಳದ ದಿನದಂದು ನಗರದ ಸಿಪಿಎಂ ನೇತಾರರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪ್ರತಿಭಟನಾಕಾರರು ಬುಧವಾರ ರಾತ್ರಿ ವೇಳೆ ನೆಲ್ಲಿಕುನ್ನು, ಬಟ್ಟಂಪಾರೆ, ಕೇಳುಕುನ್ನು ಪ್ರದೇಶದ ಮನೆಗಳಿಗೆ ಆಕ್ರಮಿಸಿದ್ದಾರೆ ಎನ್ನಲಾಗಿದೆ. ಕಾಸರಗೋಡು ಸಹಕಾರಿ ಬ್ಯಾಂಕ್ ಸಿಬ್ಬಂದಿ ಬಟ್ಟಂಪಾರ ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ಅಶೋಕ್ ಎಂಬವರ ಮನೆಗೆ ದಾಳಿ ನಡೆಸಲಾಗಿದ್ದು, ಮನೆ ಕಿಟಕಿಯ ಗಾಜುಗಳನ್ನು ಪುಡಿಗಟ್ಟಲಾಗಿದೆ, ಸಹಕಾರಿ ಬ್ಯಾಂಕ್ ಸಿಬ್ಬಂದಿಗಳಾದ ಬಿಂದು, ಅನಿಲ್, ಹೇಮಂತ್, ವನಜ ಎಂಬವರ ಮನೆಗಳ ಮೇಲೂ ಹರತಾಳಕ್ಕೆ ಕರೆ ನೀಡಿದ್ದ ಸಂಘಟನೆ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಕಲ್ಲೆಸೆತದಂತಹ ಅಕ್ರಮದಲ್ಲಿ ಭಾಗಿಗಳಾಗಿದ್ದಾರೆ ಎಂದು ಸಿಪಿಎಂ ನೇತಾರರು ಆರೋಪಿಸಿದ್ದಾರೆ.
     ಬಂದ್ಯೋಡಿನಲ್ಲಿ ವಾಹನ ತಡೆ, ಪೋಲಿಸರಿಂದ ಪ್ರತಿಭಟನಾಕಾರರನ್ನು ಚದುರಿಸಲು ಆಶ್ರುವಾಯು ಪ್ರಯೋಗ
ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡು ಪ್ರದೇಶದಲ್ಲಿ ಪ್ರತಿಭಟನಾಕಾರರು ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿಟ್ಟು, ವಾಹನಗಳನ್ನು ಬಲವಂತವಾಗಿ ತಡೆದು ನಿಲ್ಲಿಸಿದ್ದಾರೆ. ಈ ಮಧ್ಯೆ ಎರಡು ಕಾರುಗಳು, ಎರಡು ಆಟೋರಿಕ್ಷಾಗಳು ಸೇರಿದಂತೆ ಹಲವು ದ್ವಿಚಕ್ರ ವಾಹನಗಳು ಪ್ರತಿಭಟನಾಕಾರರಿಂದ ಹಾನಿಗೊಳಗಾಗಿವೆ. ವಾಹನಗಳನ್ನು ಧ್ವಂಸಗೈದ ಪ್ರತಿಭಟನಾಕಾರರನ್ನು ಚದುರಿಸಲು ಸ್ಥಳಕ್ಕಾಗಮಿಸಿದ ಪೋಲಿಸರು ಲಾಠಿ ಪ್ರಯೋಗ ನಡೆಸಿದ್ದು, ನಂತರ ಆಶ್ರುವಾಯು ಪ್ರಯೋಗ ಮಾಡಿದ್ದಾರೆ. ವಾಹನಗಳನ್ನು ತಡೆದು ನಿಲ್ಲಿಸಿದ ಕಾರ್ಯಕರ್ತರು ವಾಹನಗಳನ್ನು ಪುಡಿಗಟ್ಟಿದ ಸಂದರ್ಭ ಬಂದ್ಯೋಡು ಖದೀಜಾ ಸೆಂಟರ್ ಮಾಲಕ ಯೂಸುಫ್, ಕಸಾಯಿ ಮೂಸಾ ಎಂಬವರು ಗಾಯಗೊಂಡಿದ್ದು ಸಮೀಪದ ಆಸ್ಪತ್ರೆ ದಾಖಲಾಗಿದ್ದಾರೆ. ಈ ಮಧ್ಯೆ ತೆರೆಯಲ್ಪಟ್ಟಿದ್ದ ಹಲವು ಅಂಗಡಿ ಮುಗ್ಗಟ್ಟುಗಳನ್ನು ಪುಡಿಗಟ್ಟಲಾಗಿದೆ. ಹೆಚ್ಚಿನ ಸಂಘರ್ಷ ಸಾಧ್ಯತೆ ಅರಿತ ಪೋಲಿಸ್ ಅಧಿಕಾರಿ ಎರಡು ಪೋಲಿಸ್ ತಂಡಗಳನ್ನು ನಿಯೋಜಿಸಿದ್ದರು.
    ಮಂಜೇಶ್ವರದಲ್ಲಿ ಟಯರ್ ಸುಡುವಿಕೆ ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ 
ರಸ್ತೆ ಮಧ್ಯೆ ಟಯರ್ ಸುಡುವುದನ್ನು ಪ್ರಶ್ನಿಸಿದ ಯುವಕನ ಮೇಲೆ ಪ್ರತಿಭಟನಾಕಾರರು ಹಲ್ಲೆ ಮಾಡಿದ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಹಲ್ಲೆಯಲ್ಲಿ ಗಾಯಗೊಂಡು ಯುವಕನನ್ನು ಮಂಗಳೂರು ಆಸ್ಪತ್ರೆ ದಾಖಲಿಸಲಾಗಿದೆ. ಮಂಜೇಶ್ವರದ ಗಾಂಧಿ ನಗರದಲ್ಲಿ ನಡೆದ ಘಟನೆಯಲ್ಲಿ ಮಹಮ್ಮದ್ ಅವರ ಪುತ್ರ ಇಮ್ತಿಯಾಸ್(29) ಗಾಯಗೊಂಡವರು. ಪ್ರತಿಭಟನೆಯಲ್ಲಿ ತೊಡಗಿದ್ದ 15 ಮಂದಿಯ ತಂಡ ಅಕ್ರಮಿಸಿದ ವೇಳೆ ಇಮ್ತಿಯಾಜಿನ ಕೈ ಮುರಿತಕ್ಕೊಳಗಾಗಿದೆ. ಕಬ್ಬಿಣದ ಸರಳು ಬಳಸಿ ತನಗೆ ಹೊಡೆಯಲಾಗಿದೆ ಎಂದು ಇಮ್ತಿಯಾಜ್ ಆರೋಪಿಸಿದ್ದು, ದೂರು ನೀಡಿದ್ದಾರೆ.
     ನಗರದಲ್ಲಿ ಬಿಗಿ ಪೋಲಿಸ್ ಭದ್ರತೆ
ಹರತಾಳ ದಿನದಂದು ಸಂಘರ್ಷ ಸ್ಥಿತಿ ಹತೋಟಿಗೆ ತರಲು ಗುರುವಾರದಂದು ನಗರದ ವಿವಿಧ ಭಾಗಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಯಿತು. ನಗರದ ಮಧ್ಯ ಭಾಗ, ರೈಲ್ವೇ ನಿಲ್ದಾಣ ರಸ್ತೆ, ಕೆಎಸ್‍ಆರ್‍ಟಿಸಿ ನಿಲ್ದಾಣ, ಹೊಸ ಬಸ್ಸು ನಿಲ್ದಾಣ, ನಗರಸಭಾ ವ್ಯಾಪ್ತಿ ಪ್ರದೇಶ ಸಹಿತ ಕರಂದಕ್ಕಾಡು ಪ್ರದೇಶಗಳಲ್ಲಿ ಹೆಚ್ಚುವರಿ ಪೋಲಿಸರನ್ನು ನಿಯೋಜಿಸಲಾಯಿತು. ಹರತಾಳದ ವೇಳೆ ಕಾರ್ಯಕರ್ತರು ಹಮ್ಮಿಕೊಂಡ ಪ್ರತಿಭಟನೆ ವೇಳೆ ತೆರೆದಿದ್ದ ಅಂಗಡಿ ಮುಗ್ಗಟ್ಟುಗಳ ಮೇಲೆ ಕಲ್ಲು ತೂರಾಟವಾದ ಸಂದರ್ಭ ಭದ್ರತೆ ಮತ್ತು ಹೆಚ್ಚಿನ ಸುರಕ್ಷೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚುವರಿ ಪೋಲಿಸರು ನಿಯೋಜಿಸಲಾಯಿತು. ಉದ್ವಿಗ್ನಗೊಂಡ ಕಾರ್ಯಕರ್ತರು ನುಳ್ಳಿಪ್ಪಾಡಿ, ಕುಂಡಂಕುಳಿ ಪ್ರದೇಶಗಳಲ್ಲಿದ್ದ ವಿರೋಧ ಪಕ್ಷದ ಧ್ವಜ ಸ್ಥಂಬ ಹಾಗೂ ಧ್ವಜಗಳನ್ನು ನಾಶಗೊಳಿಸಿದ್ದಾರೆ. ಠಾಣಾಧಿಕಾರಿ ಅಜಿತ್ ಕುಮಾರ್ ನೇತೃತ್ವದಲ್ಲಿ ಪೋಲಿಸ್ ಪಹರೆ ಕಾರ್ಯ ನಗರದಾದ್ಯಂತ ನಡೆಯಿತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries