ನವದೆಹಲಿ: ಆಡಳಿತರೂಢ ಬಿಜೆಪಿ 2019ರ ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿದ್ದು, ಪ್ರಣಾಳಿಕೆ ಸೇರಿದಂತೆ ವಿವಿಧ ಅಂಶಗಳತ್ತ ಗಮನ ಕೇಂದ್ರೀಕರಿಸಲು ಭಾನುವಾರ 17 ಪ್ರತ್ಯೇಕ ಸಮಿತಿಗಳನ್ನು ರಚಿಸಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, 20 ಸದಸ್ಯರ ಬಿಜೆಪಿ ಪ್ರಣಾಳಿಕೆ(ಸಂಕಲ್ಪ ಪತ್ರ) ಸಮಿತಿಯ ಮುಖ್ಯಸ್ಥರಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪ್ರಚಾರ ಸಮಿತಿ ಮುಖ್ಯಸ್ಥರಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ನೇಮಕ ಮಾಡಿದ್ದಾರೆ.
ಪ್ರಣಾಳಿಕೆ ಸಮಿತಿಯಲ್ಲಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್, ರವಿಶಂಕರ್ ಪ್ರಸಾದ್, ಪಿಯೂಶ್ ಗೋಯಲ್, ಮುಖ್ತಾರ್ ಅಬ್ಬಾಸ್ ನಕ್ವಿ, ಮಧ್ಯ ಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಹ ಸದಸ್ಯರಾಗಿದ್ದು, ಪ್ರಣಾಳಿಕೆ ಸಿದ್ಧಪಡಿಸುವಲ್ಲಿ ರಾಜನಾಥ್ ಸಿಂಗ್ ಅವರಿಗೆ ನೆರವಾಗಲಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ 'ಸಾಮಾಜಿಕ ಮತ್ತು ಸ್ವಯಂ ಸೇವಾ ಸಂಸ್ಥೆಗಳ' ಸಮಿತಿಯ ಮುಖ್ಯಸ್ಥರ ಹೊಣೆಗಾರಿಕೆ ನೀಡಲಾಗಿದೆ. ಚುನಾವಣಾ ಸಾಹಿತ್ಯ ರಚನೆ ಮಾಡುವ ಸಮಿತಿಯ ಜವಾಬ್ದಾರಿಯನ್ನು ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ವಹಿಸಲಾಗಿದೆ.
ರವಿಶಂಕರ್ ಪ್ರಸಾದ್ ಅವರು ಪಕ್ಷದ ಮಾಧ್ಯಮ ಸಮಿತಿಯ ಮುಖ್ಯಸ್ಥರಾಗಿಯೂ ಅವಳಿ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ. ಕೇಂದ್ರದ ಮತ್ತೊಬ್ಬ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಬುದ್ಧಿಜೀವಿಗಳ ಸಭೆಗಳನ್ನು ಆಯೋಜಿಸುವ ಸಮಿತಿಯ ನೇತೃತ್ವ ನೀಡಲಾಗಿದೆ.