ಬದಿಯಡ್ಕ/ಉಪ್ಪಳ: ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ಆಳುವ ಸರಕಾರ ಮತ್ತೆಮತ್ತೆ ಗಧಾಪ್ರವಾರಗಳ ಮೂಲಕ ಸಾಂವಿಧಾನಿಕ ಹಕ್ಕನ್ನು ಚ್ಯುತಿಗೊಳಿಸಲು ಪ್ರಯತ್ನಿಸುತ್ತಿದ್ದು, ಕನ್ನಡಿಗರ ರಕ್ತವನ್ನು ಕುದಿಯುವಂತೆ ಮಾಡಿದೆ.
ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡದ ಗಂಧಗಾಳಿ ತಿಳಿಯದ ಶಿಕ್ಷಕರನ್ನು ನೇಮಿಸುವ ಯತ್ನ ಮುಂದುವರಿಯುತ್ತಿದ್ದು, ಇದೀಗ ಬದಿಯಡ್ಕದ ಪೆರಡಾಲ ಸರಕಾರಿ ಹೈಸ್ಕೂಲು, ಮಂಗಲ್ಪಾಡಿ ಗ್ರಾ.ಪಂ. ನ ಬೇಕೂರು ಸರಕಾರಿ ಹೈಸ್ಕೂಲು ಹಾಗೂ ಪೈವಳಿಕೆ ಗ್ರಾ.ಪಂ. ವ್ಯಾಪ್ತಿಯ ಸರಕಾರಿ ಕನ್ನಡ ಪ್ರೌಢಶಾಲೆ ಪೈವಳಿಕೆ-ಕಾಯರ್ಕಟ್ಟೆ ಶಾಲೆಗಳ ಕನ್ನಡ ಮಾಧ್ಯಮ ಫಿಸಿಕಲ್ ಸೈನ್ಸ್(ವಿಜ್ಞಾನ) ಶಿಕ್ಷಕರ ತೆರವಿದ್ದ ಹುದ್ದೆಗೆ ಮಲೆಯಾಳ ಶಿಕ್ಷಕರನ್ನು ಸೋಮವಾರ ನೇಮಕಗೊಳಿಸಿ ಕಗ್ಗಂಟಿಗೆ ಗುರಿಯಾದ ಪ್ರಸಂಗ ನಡೆದಿದೆ.
ಬದಿಯಡ್ಕದ ಪೆರಡಾಲ ಸರಕಾರಿ ಹೈಸ್ಕೂಲಿನಲ್ಲಿ ಕನ್ನಡ ಮಾಧ್ಯಮ ಹೈಸ್ಕೂಲಿನಲ್ಲಿ 55 ರಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕನ್ನಡ ಮಾಧ್ಯಮ ತರಗತಿಗಳಿಗೆ ಕನ್ನಡ ಬಲ್ಲ ಶಿಕ್ಷಕರನ್ನೇ ನೇಮಿಸಬೇಕೆಂಬ ಸಾಂವಿಧಾನಿಕ ಹಕ್ಕು ಮತ್ತು ಆದೇಶಗಳನ್ನು ಗಾಳಿಗೆ ತೂರಿ ಮಲೆಯಾಳ ಮಾತ್ರ ಗೊತ್ತಿರುವ ಶಿಕ್ಷಕರನ್ನು ನೇಮಕಗೊಳಿಸಲು ರಾಜ್ಯ ಲೀಕಸೇವಾ ಆಯೋಗ ಈ ಹಿಂದೆ ನಡೆಸಿದ ನಡೆಯನ್ನು ಮತ್ತೆ ಮುಂದುವರಿಸಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಘಾಸಿಗೊಳ್ಳುವ ಭೀತಿ ಎದುರಾಗಿದೆ.
ಕಯ್ಯಾರರು ಓದಿದ್ದ ಶಾಲೆ:
ಪೆರಡಾಲ ಸರಕಾರಿ ಶಾಲೆ ಶತಮಾನಗಳಷ್ಟು ಪ್ರಾಚೀನವಾದುದು. ಗಡಿನಾಡ ಹೋರಾಟದ ಮುಂಚೂಣಿಯಲ್ಲಿದ್ದ ಕವಿ, ಕಯ್ಯಾರ ಕಿಞ್ಞಣ್ಣ ರೈ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇದೇ ಶಾಲೆಯಲ್ಲಿ ಪೂರೈಸಿದವರು. ಅಂದು ಪ್ರಾಥಮಿಕ ಶಿಕ್ಷಣ ಸೌಲಭ್ಯವಿದ್ದ ಇಲ್ಲಿ ಬಳಿಕ ಹೈಸ್ಕೂಲು ಹಾಗೂ ಮಲೆಯಾಳ ಮಧ್ಯಮಗಳೂ ವ್ಯವಸ್ಥೆಗೊಂಡಿತು.
ಪೆರಡಾಲ, ಬದಿಯಡ್ಕ, ಕುಂಬ್ಡಾಜೆ, ಪಳ್ಳತ್ತಡ್ಕ, ಮಾನ್ಯ, ಮಾವಿನಕಟ್ಟೆ ಮೊದಲಾದ ಪ್ರದೇಶಗಳ ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಸೌಕರ್ಯ ಪಡೆಯುತ್ತಿದ್ದಾರೆ. ವಿಸ್ಕøತ ತರಗತಿ ಕೊಠಡಿಗಳು, ವಿಶಾಲ ಆಟದ ಬಯಲು, ಸಾಕಷ್ಟು ಕಲಿಕಾ ಸೌಕರ್ಯಗಳಿರುವ ಸರಕಾರಿ ಹೈಸ್ಕೂಲು ಪೆರಡಾಲ ಕಲಿಕಾ ಮಟ್ಟದಲ್ಲೂ ಮುಂದಿದೆ. ಇದೀಗ ಬಂದೊದಗಿರುವ ಆಪತ್ತಿನ ಬಗ್ಗೆ ಶಾಲಾ ರಕ್ಷಕ ಶಿಕ್ಷಕ ಸಮಿತಿ ತೀವ್ರ ಹೋರಾಟದ ಮುನ್ಸೂಚನೆ ನೀಡಿದೆ.
ಕಾಯರ್ಕಟ್ಟೆ ಶಾಲೆಗೂ ಇದೇ ಸ್ಥಿತಿ:
ಪೈವಳಿಕೆ ಸರಕಾರಿ ಶಾಲೆಯೆಂಬ ಹೆಸರಿನ ಕಾರ್ಯಕ್ಟ್ಟೆಯ ಸರಕಾರಿ ಅಚ್ಚ ಕನ್ನಡ ಮಾಧ್ಯಮ ಹೈಸ್ಕೂಲಿನ ವಿಜ್ಞಾನ ಶಿಕ್ಷಕರಾಗಿ ತಿರುವನಂತಪುರದ ವ್ಯಕ್ತಿಯೋರ್ವರನ್ನು ನೇಮಿಸಿರುವ ಬಗ್ಗೆ ಸೋಮವಾರ ಮಧ್ಯಾಹ್ನ ಅಧಿಕೃತ ಆದೇಶ ರವಾನೆಯಾಗಿದೆ.
ಹೈಸ್ಕೂಲಿನ ಎರಡೆರಡು ಡಿವಿಷನ್ ಗಳಲ್ಲಾಗಿ ಈ ಶಾಲೆಯಲ್ಲಿ 150 ಕ್ಕಿಂತಲೂ ಮಿಕ್ಕಿದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶತಮಾನಗಳಷ್ಟು ಹಳೆಯದಾಗಿರುವ ಈ ವಿದ್ಯಾಸಂಸ್ಥೆ ಕನ್ನಡ ಮಾಧ್ಯಮದಲ್ಲಿ ಮಾತ್ರ 5 ರಿಂದ 10ನೇ ತರಗತಿ ತನಕ ವಿದ್ಯಾಭ್ಯಾಸ ಸೌಕರ್ಯ ನೀಡುವ ಜಿಲ್ಲೆಯ ಏಕೈಕ ಸರಕಾರಿ ಶಾಲೆಯಾಗಿರುವುದು ಗಮನಾರ್ಹ. ಚಿಪ್ಪಾರು, ಲಾಲ್‍ಬಾಗ್, ಪೈವಳಿಕೆ, ಬಾಯಾರು, ಕನಿಯಾಲ, ಸಜಂಕಿಲ, ಮುಳಿಗದ್ದೆ, ಬೆರಿಪದವು, ಮಾಣಿಪ್ಪಾಡಿ ಮೊದಲಾದ ವಿಸ್ತಾರ ಪ್ರದೇಶಗಳ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಗೈಯ್ಯುತ್ತಿದ್ದಾರೆ.
ಶಾಲಾ ರಕ್ಷಕ ಶಿಕ್ಷಕ ಸಂಘವು ಸೋಮವಾರ ಅಪರಾಹ್ನ ತುರ್ತು ಸಭೆ ಸೇರಿ ನೇಮಕಾತಿಯಾದ ಶಿಕ್ಷಕನನ್ನು ತಮ್ಮ ಶಾಲೆಯಲ್ಲಿ ನೇಮಕಗೊಳಿಸದಂತೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ. ವಿದ್ಯಾರ್ಥಿಗಳ ಕಲಿಕೆಗೆ ಸ್ಥಳೀಯ ಶಿಕ್ಷಕರನ್ನು ದಿನವೇತನ ಆಧಾರದಲ್ಲಿ ನಿಯುಕ್ತಿಗೊಳಿಸಲು ತೀರ್ಮಾನಿಸಿದ್ದಾರೆ.
ಬೇಕೂರಿನಲ್ಲೂ ಮಲೆಯಾಳಿಯ ನೇಮಕ:
ಮಂಗಲ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಬೇಕೂರು ಸರಕಾರಿ ಹೈಸ್ಕೂಲಿಗೂ ವಿಜ್ಞಾನ ವಿಭಾಗಕ್ಕೆ ಮಲೆಯಾಳಿ ಶಿಕ್ಷಕನನ್ನು ನೇಮಕಗೊಳಿಸಿದ ಆದೇಶ ಮುಖ್ಯೋಪಾಧ್ಯಾಯರಿಗೆ ರವಾನೆಯಾಗಿದ್ದು 200ಕ್ಕಿಂತಲೂ ಮೇಲ್ಪಟ್ಟು ಕನ್ನಡ ವಿಭಾಗದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.
ಏನಿದರ ರಹಸ್ಯ:
ಕೇರಳಲೋಕಸೇವಾ ಆಯೋಗವು 2017ರಲ್ಲಿ ನಡೆಸಿದ ಹೈಸ್ಕೂಲು ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಮಲತಾಯಿ ಧೋರಣೆ ತಳೆದಿರುವುದು ಕಂಡುಬಂದಿದೆ. ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮದ ವಿವಿಧ ಪಠ್ಯ ಬೋಧನೆಗೆ ಅಮದು 23 ಶಿಕ್ಷಕರನ್ನು ಆಯ್ಕೆಮಾಡಲಾಗಿತ್ತು. ಈ ಪೈಕಿ 2018 ರಲ್ಲಿ ಲೋಕಸೇವಾ ಆಯೋಗ ಏಳು ಮಂದಿ ಕನ್ನಡ ಮಾಧ್ಯಮಗಳ ವಿವಿಧ ಪಠ್ಯ ಬೋಧನಾ ಶಿಕ್ಷಕರ ನೇಮಕಾತಿಗೆ ಆದೇಶ ನೀಡಿತ್ತು. ಏಳು ಮಂದಿ ಶಿಕ್ಷಕರಲ್ಲಿ ಐವರು ಕನ್ನಡ ಬಾರದ ಮಲೆಯಾಳದಲ್ಲಿ ಮಾತ್ರ ಬೋಧನಾ ಸಾಮಥ್ರ್ಯವಿರುವ ಶಿಕ್ಷಕರಾಗಿದ್ದು, ಅವರನ್ನು ಕನ್ನಡ ಮಾಧ್ಯಮದಲ್ಲಿ ಬೋಧಿಸಲು ನೇಮಕಗೊಳಿಸಿರುವುದು ಆಶ್ಚರ್ಯ-ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.
ಕಳೆದ ಜುಲೈ ತಿಂಗಳಲ್ಲಿ ಮಂಗಲ್ಪಾಡಿ ಸರಕಾರಿ ಶಾಲೆ(ಕುಕ್ಕಾರು) ಶಾಲೆಗೆ ಕನ್ನಡ ಗಣಿತ ಶಿಕ್ಷಕರಾಗಿ ಮಲೆಯಾಳಿ ಅಧ್ಯಾಪಕರೋರ್ವರು ನೇಮಕಗೊಂಡಿದ್ದರು.ಶಾಲಾ ರಕ್ಷಕ ಶಿಕ್ಷಕ ಸಂಘ ಹಾಗೂ ವಿವಿಧ ಕನ್ನಡ ಹೋರಾಟ ಸಮಿತಿಗಳ ಪ್ರಬಲ ಹೋರಾಟದ ಫಲವಾಗಿ ಅವರನ್ನು ಬೇರೆಡೆಗೆ ಸ್ಥಳಾಂತರಿಸುವಲ್ಲಿ ಸಫಲವಾಗಿತ್ತು. ಮಿಕ್ಕುಳಿದಂತೆ ಆರು ಮಂದಿಗಳಲ್ಲಿ ಇದೀಗ ಮೂವರು ಕನ್ನಡ ಬಾರದ ಶಿಕ್ಷಕರನ್ನು ನೇಮಕಗೊಳಿಸಲಾಗಿದೆ.
ಇದೀಗ ಮಲೆಯಾಳ ಶಿಕ್ಷಕರನ್ನು ನೇಮಕಗೊಳಿಸಿರುವುದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರಲಿದ್ದು ಹೆತ್ತವರು ಆತಂಕಿತರಾಗಿದ್ದಾರೆ.
ಕಯ್ಯಾರರ ಭಯ ನಿಜವಾಯ್ತೇ?
ಅಖಿಲ ಭಾರತ 66ನೇ ಕನ್ನಡ ಸಾಹಿತ್ಯ ಸಮ್ಮೇಳನ(ಮಂಗಳೂರಿನಲ್ಲಿ) ಸರ್ವಾಧ್ಯಕ್ಷತೆವಹಿಸಿದ್ದ ಕವಿ ಕಯ್ಯಾರರು ಅಮದು ತಮ್ಮ ಭಾಷಣದಲ್ಲಿ ಗಡಿನಾಡು ಕಾಸರಗೋಡಿನ ಕನ್ನಡ ಅವಗಣನೆಯ ಭೀತಿಯ ಬಗ್ಗೆ ವಿವರಿಸುತ್ತಾ ಮುಂದೊಂದು ದಿನ ಕನ್ನಡ ಮಾಧ್ಯಮ ಪಠ್ಯ ಬೋಧನೆಗೆಮಲೆಯಾಳಿಗಳು ಬಾರದಿರಲಾರರು. ಈ ಬಗ್ಗೆಸಂಘಟಿತ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿರುವುದು ಆ ಮಹಾನ್ ಚೇತನದ ದೂರಗಾಮಿ ದೃಷ್ಟಿಕೋನದಸೂಚನೆಯಾಗಿ ನಮ್ಮಿದಿರು ಕಾಡುತ್ತಿರುವುದು ದುರ್ದೈವವೆನ್ನದೆ ವಿಧಿಯಿಲ್ಲ!
ಸಾಹಿತ್ಯ ಸಮ್ಮೇಳನದಲ್ಲಿ ಚಕಾರವಿಲ್ಲ:
ಕಳೆದೆಡೆದು ದಿನಗಳ ಹಿಂದೆ ಧಾರವಾಡದಲ್ಲಿ ನಡೆದ ಅಖಿಲ ಭಾರತ ಪ್ರಸ್ತುತ ಸಾಲಿನ ಸಾಹಿತ್ಯ ಸಮ್ಮೇಳನದಲ್ಲಿ ಗಡಿನಾಡು ಕಾಸರಗೋಡಿನ ಸಮಸ್ಯೆಗಳ ಬಗ್ಗೆ ಚಕಾರ ಎತ್ತದಿರುವುದು ನಮ್ಮ ಗತಿಗೇಡಿನ ಸಂಕೇತವೆನ್ನದೆ ವಿಧಿಯಿಲ್ಲ. ಸಾಮಾನ್ಯವಾಗಿ ಸಾಹಿತ್ಯ-ಭಾಷಾ ಸಮಸ್ಯೆಗಳ ಬಗ್ಗೆ ಚರ್ಚೆ-ನಿರ್ಣಯಗಳಾಗುವುದು ಸಾಹಿತ್ಯ ಸಮ್ಮೇಳನಗಳ ಲಕ್ಷ್ಯ. ಆದರೆ ಇತ್ತೀಚೆಗಿನ ಸಾಹಿತ್ಯ ಸಮ್ಮೇಳನಗಳಲ್ಲಿ ಕಾಸರಗೋಡಿನ ಕನ್ನಡ ಸಮಸ್ಯೆಗಳ ಬಗ್ಗೆ ವಿಮರ್ಶೆಯೇ ನಡೆಯುವುದಿಲ್ಲ. ಮನಸ್ಸು ಮಾಡಿದರೆ ನಿರ್ಣಯ ಕೈಗೊಂಡು ಸರಕಾರದ ಮೂಲಕ ಕೇರಳ ಸರಕಾರಕ್ಕೆ ಒತ್ತಡ ಹಾಕುವ ಸಾಮಥ್ರ್ಯ ಕ.ಸಾ.ಪ ಮತ್ತದರ ಸಾಹಿತ್ಯ ಸಮ್ಮೇಳನಕ್ಕಿದೆ ಎಂಬುದೂ ಗಮನಾರ್ಹ!
ಏನಂತಾರೆ ಈ ಬಗ್ಗೆ: ಅಭಿಪ್ರಾಯ ಸಂಗ್ರಹ:
1) ನಿರಂತರವಾದ ಕನ್ನಡ ಅವಗಣನೆ ತೀವ್ರ ಕಳವಳಕಾರಿಯಾಗಿದೆ. ಇದೀಗ ನೇಮಕಾತಿಗೊಳಗಾಗುವ ಮೂವರು ಶಿಕ್ಷಕರನ್ನು ಕನ್ನಡ ಮಾಧ್ಯಮಕ್ಕೆ ನೇಮಕಗೊಳಿಸದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಜೊತೆಗೆ ಈ ಬಗ್ಗೆ ತೀವ್ರ ಹೋರಾಟ ನಡೆಸಲಾಗುವುದು. ಲೋಕಸೇವಾ ಆಯೋಗದ ಮುಂದಿನ ನೇಮಕಾತಿ ಪ್ರಕ್ರಿಯೆಗಳಲ್ಲಿ ಗಡಿನಾಡಿನ ಭಾಷಾಅಲ್ಪಸಂಖ್ಯಾತ ಕನ್ನಡಿಗರ ಸಾಂವಿಧಾನಿಕ ಹಕ್ಕನ್ನು ಮೊಟಕುಗೊಳಿಸುವ ಯತ್ನಗಳನ್ನು ಆರಂಭದಿಂದಲೇ ಮೊಟಕುಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಬಹುಮುಖ ಚಿಂತನೆ, ಚರ್ಚೆ ನಡೆಸಲಾಗುವುದು.
ನ್ಯಾಯವಾದಿ.ಮುರಳೀಧರ ಬಳ್ಳುಕುರಾಯ
ಕನ್ನಡ ಹೋರಾಟ ಸಮಿತಿ ಹಾಗೂ ಕರ್ನಾಟಕ ಸಮಿತಿಯ ಅಧ್ಯಕ್ಷರು.ಕಾಸರಗೋಡು.
...............................................................................................................................................................................................................................................................
2) ಕನ್ನಡ ಮಾಧ್ಯಮ ಶಿಕ್ಷಕ ಹುದ್ದೆಯ ಬದಲಿಗೆ ಮಲೆಯಾಳ ಮಾತ್ರ ಬಲ್ಲ ಶಿಕ್ಷಕರನ್ನು ನೇಮಿಸಿರುವುದು ಖಂಡನಾರ್ಹವಾಗಿದೆ. ಪ್ರತಿವರ್ಷವೂ ಈ ರೀತಿಯಲ್ಲಿ ಕನ್ನಡಿಗರ ಹಕ್ಕುಚ್ಯುತಿಗೊಳಿಸುವ ಯತ್ನಗಳು ಅಧಿಕಾರಿ ವರ್ಗ ಕನ್ನಡಿಗರ ಮೇಲೆಸಗುವ ಮನಃಪೂರ್ವಕವಾದ ಯತ್ನವಾಗಿದ್ದು, ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ವಿರೋಧ ವ್ಯಕ್ತಪಡಿಸುತ್ತಿದೆ. ಕನ್ನಡ ವಿದ್ಯಾರ್ಥಿಗಳ ಶಿಕ್ಷಣ ಹಕ್ಕನ್ನು ಹೊಸಕುವ ಯತ್ನಗಳಿಂದ ಸಂಬಂಧಪಟ್ಟವರು ಹಿಂದೆ ಸರಿಯಬೇಕು. ಈ ಬಗ್ಗೆ ಶಿಕ್ಷಣ ಉಪನಿರ್ದೇಶಕರ ಸಹಿತ ಉನ್ನತ ಅಧಿಕಾರಿಗಳಿಗೆ ಮನವಿ ನೀಡಲಾಗುವುದು. ಜೊತೆಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಮುಂದಿನ ಹೋರಾಟಕ್ಕೆ ನೈತಿಕ ಬೆಂಬಲ ನೀಡಲಾಗುವುದು.
ರವೀಂದ್ರನಾಥ ಕೆ.ಆರ್.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ
.......................................................................................................................................................
3) ಕನ್ನಡ ಮಾಧ್ಯಮ ಶಿಕ್ಷಕ ಹುದ್ದೆಗೆ ಕನ್ನಡ ಬಾರದ ಶಿಕ್ಷಕನ ನೇಮಕಾತಿಯು ಅನ್ಯಾಯದ ಕ್ರಮವಾಗಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದ್ದು, ಯಾವ ಕಾರಣಕ್ಕೂ ಮಲೆಯಾಳ ಮಾತ್ರ ಬಲ್ಲ ಶಿಕ್ಷಕನ ಬೋಧನೆಗೆ ಅವಕಾಶ ನೀಡಲಾಗದು.
ಅಬ್ದುಲ್ ರಹಮಾನ್ ಅನ್ನಡ್ಕ
ಪೆರಡಾಲ ಸರಕಾರಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ
.........................................................................................................................................................
4) ಕನ್ನಡ ಮಾಧ್ಯಮದಲ್ಲಿ ಶತಮಾನಗಳಿಂದ ಶಿಕ್ಷಣ ನೀಡುವ ಕಾಯರ್ಕಟ್ಟೆ ಶಾಲೆಗೆ ವಿಜ್ಞಾನ ವಿಭಾಗಕ್ಕೆ ಮಲೆಯಾಳ ಭಾಷೆ ಮಾತ್ರ ಬಲ್ಲ ಶಿಕ್ಷಕನ ನೇಮಕಾತಿ ನಡೆಸಿರುವುದು ಗಡಿನಾಡಿನ ಕನ್ನಡ ಮನಸ್ಸುಗಳಿಗೆ ಎಸಗಿರುವ ಅಪಮಾನವಾಗಿದೆ. ವಿದ್ಯಾರ್ಥಿಗಳ ಶಿಕ್ಷಣವನ್ನು ಅಧೋಗತಿಗೆ ತಳ್ಳುವ ಈ ಕ್ರಮ ಖಂಡನೀಯ. ಮಲೆಯಾಳ ಮಾತ್ರ ಬಲ್ಲ ಶಿಕ್ಷಕನನ್ನು ನೇಮಕಗೊಳಿಸದಂತೆ ತೀರ್ಮಾನಿಸಲಾಗಿದ್ದು,ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಲಾಗುವುದು. ಶಿಕ್ಷಣ ವ್ಯವಸ್ಥೆಗಾಗಿ ತಾತ್ಕಾಲಿಕ ಶಿಕ್ಷಕನನ್ನು ನೇಮಿಸಲಾಗುವುದು.
ಪುರುಷೋತ್ತಮ ಶೆಟ್ಟಿಗಾರ್. ಬಾಯಿಕಟ್ಟೆ
ಸರಕಾರಿ ಪ್ರೌಢಶಾಲೆಪೈವಳಿಕೆ ಕಾಯರ್ಕಟ್ಟೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ
........................................................................................................................................................