ಇಡಿಯಡ್ಕ ಶ್ರೀಕ್ಷೇತ್ರದ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ ಯತಿ ದ್ವಯರಿಂದ ಆಶೀರ್ವಚನ
ಪೆರ್ಲ: ಜಗತ್ತಿನ ಎಲ್ಲಾಆಗು-ಹೋಗುಗಳ ಹಿಂದಿರುವ ಸರ್ವಶಕ್ತ ಭಗವಂತನಾಗಿದ್ದಾನೆ. ಸರ್ವವ್ಯಾಪಿಯಾದ ಭಗವಂತನ ಅನುಗ್ರಹ ಪ್ರಾಪ್ತಿಯಿಂದ ಮಾನವ ಜೀವನ ಪಾವನಗೊಂಡು ಸದ್ಗುಣಗಳ ಸುಖ ಲಭ್ಯವಾಗುತ್ತದೆ ಎಂದು ಉಡುಪಿ ಪೇಜಾವರ ಮಠದ ಕಿರಿಯ ಯತಿವರ್ಯರಾದ ಶ್ರೀವಿಶ್ವಪ್ರಸನ್ನ ಶ್ರೀಗಳು ಆಶೀರ್ವಚನಗೈದು ಹರಸಿದರು.
ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಮತ್ತು ವಾರ್ಷಿಕ ಜಾತ್ರೋತ್ಸವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸೋಮವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನಗೈದು ಅವರು ಮಾತನಾಡಿದರು.
ಗುಡಿ-ಗೋಪುರಗಳ ಮಾಧ್ಯವಾಗಿಸಿ ಸರ್ವವ್ಯಾಪಿ ಭಗವಂತನನ್ನು ಸಾಕ್ಷಾತ್ಕರಿಸುವ ಚಿಂತನೆ ಆರಾಧನಾಲಯಗಳ ಹಿಂದೆ ಅಡಗಿದೆ ಎಂದು ತಿಳಿಸಿದ ಅವರು, ಜಗತ್ತನ್ನು ಕಣ್ತೆರೆದು ನೋಡಿದರಷ್ಟೇ ವಿಶಿಷ್ಟತೆ ಗೋಚರಿಸುತ್ತದೆ ಎಂಬ ಆಚಾರ್ಯ ಮದ್ವರ ವಾಣಿಯಂತೆ ಅಂತರಂಗದ ಕಣ್ಣನ್ನು ಸತ್ ಚಿಂತನೆಯೆಡೆಗೆ ತೆರೆದುಕೊಳ್ಳುವ ಮೂಲಕ ಜೀವನವನ್ನು ಪಾವನಗೊಳಿಸುವ ಚೈತನ್ಯ ಎಲ್ಲರಲ್ಲಿರಲಿ ಎಂದು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಯತಿವರ್ಯರಾದ ಶ್ರೀಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನಗೈದು, ಶಾಂತಿ, ಆನಂದ ಹಾಗೂ ನೆಮ್ಮದಿಗಳು ದೇವಾಲಯಗಳಿಂದ ಸಮಾಜಕ್ಕೆ ಲಭ್ಯವಾಗುತ್ತದೆ. ಮನಸ್ಸು, ಬುದ್ದಿ, ಚಿತ್ತಗಳನ್ನು ಸಮತೋಲನದಲ್ಲಿರಿಸುವುದರ ಮೂಲಕ ಅಂತರಂಗದೊಳಗಿನ ಭಗವಂತನನ್ನು ಕಾಣುವ ಯತ್ನವನ್ನು ಪ್ರತಿಯೊಬ್ಬರೂ ಮಾಡಬೇಕು. ಇದರಿಂದ ಬದುಕು ಸಾರ್ಥಕತೆ ಪಡೆಯುವುದು ಎಂದು ತಿಳಿಸಿದರು. ಧರ್ಮದ ಚೌಕಟ್ಟಿನಲ್ಲಿ ಬದುಕಿನಲ್ಲಿ ಶಾಶ್ವತವಾದ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಹೊಣೆ ಪುಣ್ಯಪ್ರದವಾದುದಾಗಿದ್ದು, ಮಾನವ ಬದುಕಿನ ಲಕ್ಷ್ಯವೂ ಇದೇ ಆಗಿದೆ ಎಂದು ಅವರು ತಿಳಿಸಿದರು. ಜೀವನ ಮೌಲ್ಯಗಳನ್ನು ತಿಳಿಸುವ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸುವ ಮೂಲಕ ದೈವ ಸಂಪ್ರೀತಿಗೆ ಕಾರಣವಾಗಲು ಸಾಧ್ಯವಿದೆ ಎಂದ ಅವರು, ದೇವಾಲಯಗಳಿಗೆ ಕಾಯ ದಮಡಿಸಿ ಪೂರ್ಣ ಶರಣಾಗತಿಯ ಮನೋಸ್ಥಿತಿಯಲ್ಲಿ ಅರ್ಪಿಸುವ ಕೊಳ್ಳುವ ಮೂಲಕ ಅನುಗ್ರಹ ಪ್ರಾಪ್ತಿಗೊಳಪಡುವೆವು ಎಂದು ತಿಳಿಸಿದರು.
ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸಗೈದು ಮಾತನಾಡಿದ ಉಡುಪಿಯ ಪತ್ರಕರ್ತ ಶ್ರೀಕಾಂತ ಶೆಟ್ಟಿ ಅವರು, ತುಳುನಾಡು ಸಹಿತ ಸಂಪೂರ್ಣ ಆರ್ಯಾವರ್ತದ ಆರಾಧನೆ-ನಂಬಿಕೆಗಳು ಜಗತ್ತಿಗೆ ಬೆಳಕು ನೀಡಿದ ವಿಶಿಷ್ಟ ಚಿಂತನೆಗಳಾಗಿವೆ. ವೇದ, ಉಪನಿಷತ್ತು, ಪುರಾಣಗಳು ಹೇಳಿದ ವೈಜ್ಞಾನಿಕ ಸತ್ಯಶೋಧನೆಗಳನ್ನು ನಮಗಿನ್ನೂ ಅರ್ಥೈಸಲು ಸಾಧ್ಯವಾಗದಿರುವುದು ದುರ್ದೈವವಾಗಿದೆ. ದೇವಾಲಯಗಳ ನಿರ್ಮಾಣದ ಹಿಂದೆ ವೈಜ್ಞಾನಿಕ ಚಿಂತನೆಗಳು ಅಡಗಿದ್ದು, ಸರ್ವ ಜೀವರಾಶಿಗಳ ಒಳಿತಿನ ಚಿಂತನೆ ಅದರಲ್ಲಿ ಅಡಗಿದೆ ಎಂದು ಅವರು ತಿಳಿಸಿದರು. ದೇಹದ ಸಹಸ್ರಾರ ಚಕ್ರದ ಪ್ರತೀಕವಾಗಿರುವ ದೇವಾಲಯಗಳ ಗರ್ಭಗೃಹದೊಳಗೆ ನಾವು ಪೂಜಿಸುವ ಆರಾಧ್ಯಮೂರ್ತಿ ನಮ್ಮೊಳಗಿನ ಭಾವಶುದ್ದಿಯ ಪ್ರತೀಕವಾದ ಅಹಂ ಬ್ರಹ್ಮಾಸ್ಮಿಯ ಸಂಕೇತ ಎನ್ನುವುದನ್ನು ನಾವು ಅರ್ಥೈಸಬೇಕು. ಆಗ ಸಂಕಟಗಳಿಂದ ಪಾರಾಗಲು ಸಾಧ್ಯ ಎಂದು ತಿಳಿಸಿದರು. ದೇವತಾರಾಧನೆ, ದೈವಾರಾಧನೆಗಳು ಪ್ರತ್ಯೇಕವಾಗಿ ಕಾಣಿಸುತ್ತಿದ್ದರೂ ಮೂಲ ಪರಿಕಲ್ಪನೆ ಒಂದೇ ಎಂದು ಅವರು ತಿಳಿಸಿದರು. ನಮ್ಮ ಆಚರಣೆ, ಸಂಸ್ಕøತಿಗಳನ್ನು ಗೌರವಿಸಿ ಅದರಂತೆ ಮುನ್ನಡೆದಾಗ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಅವರು ಕರೆನೀಡಿದರು.
ಹಿರಿಯ ಧಾರ್ಮಿಕ ಮುಂದಾಳು, ಉದ್ಯಮಿ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಚೇರ್ಕಬೆ ಶ್ರೀಶಾಸ್ತಾರ ಸುಬ್ರಹ್ಮಣ್ಯ ಕ್ಷೇತ್ರದ ಮೊಕ್ತೇಸರ ಕೃಷ್ಣ ಭಟ್ ಕೋಟೆ, ಮಂಜೇಶ್ವರ ಭೂ ಅಭಿವೃದ್ದಿ ಬ್ಯಾಂಕಿನ ಅಧ್ಯಕ್ಷ ಸೋಮಶೇಖರ ಜೆ.ಎಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕ್ಷೇತ್ರದ ನೂತನ ಕೊಡಿಮರ ಕೆತ್ತನೆಯ ಶಿಲ್ಪಿ ಕೃಷ್ಣ ಆಚಾರ್ಯ ಬೆದ್ರಂಪಳ್ಳ, ಝೀ ಕನ್ನಡ ಡ್ರಾಮಾ ಜೂನಿಯರ್ ಬಾಲ ಕಲಾವಿದ ಅನೂಪ್ ರಮಣ ಶರ್ಮಾ ಮುಳ್ಳೇರಿಯ, ಎಂ.ಟೆಕ್ ಪದವಿಯಲ್ಲಿ ಚಿನ್ನದ ಪದಕ ವಿಜೇತೆ, ಪ್ರತಿಭಾನ್ವಿತ ವಿದ್ಯಾರ್ಥಿ ಮಾನಸಮಿತ್ರಾ ಅವರನ್ನು ಈ ಸಂದರ್ಭ ಗಣ್ಯರು ಸನ್ಮಾನಿಸಿ ಗೌರವಿಸಿದರು. ಉದಯ ಕುಮಾರ್ ಸ್ವರ್ಗ ಸ್ವಾಗತಿಸಿ, ವಂದಿಸಿದರು.ವೇಣುಗೋಪಾಲ ಭಟ್ ಸಾಲೆತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಂಗಳೂರು ಕದ್ರಿಯ ಮಂಗಳಾ ಮ್ಯಾಜಿಕ್ ವಲ್ರ್ಡ್ ನ ಅಪೂರ್ವ ಮಳಿ, ಅಂಜನಾ ಮಳಿ ಹಾಗೂ ರಾಜೇಶ್ ಮಳಿ ಅವರಿಂದ ಅಪೂರ್ವ ಜಾದೂ ಪ್ರದರ್ಶನ ನಡೆಯಿತು. ರಾತ್ರಿ 9 ರಿಂದ ಕುಂಟಾಲುಮೂಲೆಯ ಚಿರಂಜೀವಿ ಯಕ್ಷಗಾನ ಕಲಾಸಂಘದವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಮಂಗಳವಾರ ಬೆಳಿಗ್ಗೆ 6ರಿಂದ ಗಣಪತಿಹವನ, ಶಾಂತಿಹೋಮಗಳು, ದಹನ ಪ್ರಾಯಶ್ಚಿತ, ತ್ರಿಕಾಲ ಪೂಜೆ, ದುರ್ಗಾಹೋಮ, ಅಂಕುರಪೂಜೆ, ಮಹಾಪೂಜೆ, ಹೋಮಕಲಶಾಭಿಷೇಕ, ಅನುಜ್ಞಾ ಕಲಶಪೂಜೆ, ಮಹಾಪೂಜೆಗಳೇ ಮೊದಲಾದ ವೈದಿಕ ಕಾರ್ಯಕ್ರಮಗಳು ನಡೆಯಿತು. 10ರಿಂದ ಕಾಟುಕುಕ್ಕೆಯ ಶ್ರೀಸುಬ್ರಹ್ಮಣ್ಯ ಬಾಲ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ ನಡೆಯಿತು. 1ರಿಂದ ರಾಮಚಂದ್ರ ಮಣಿಯಾಣಿ ಕಾಟುಕುಕ್ಕೆ ಅವರಿಂದ ಶ್ರೀದೇವೀ ಮಹಾತ್ಮ್ಯೆ ಹರಿಕಥಾ ಸಂಕೀರ್ತನೆ ನಡೆಯಿತು. ಅಪರಾಹ್ನ 3ರಿಂದ ಶೇಣಿ ರಂಗಜಂಗಮ ಟ್ರಸ್ಟ್ ಅವರಿಂದ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು. ಸಂಜೆ ಧಾರ್ಮಿಕ ಸಭೆ ನಡೆಯಿತು. ರಾತ್ರಿ 8ರಿಂದ ಸಾಯಿ ಮನೋಹರ್ ಕಾಸರಗೋಡು ಬಳಗದ ಸ್ಯಾಕ್ಸೋಫೋನ್ ಫ್ಯೂಶನ್ ನಡೆಯಿತು.
ಇಂದಿನ ಕಾರ್ಯಕ್ರಮ:
ಜ.30ರಂದು ಬೆಳಗ್ಗೆ 6ರಿಂದ ವೈದಿಕ ಕಾರ್ಯಕ್ರಮಗಳು,10ರಿಂದ ಭಜನೆ, ಕುಣಿತ ಭಜನೆ, ಸಂಜೆ 5.30ರಿಂದ ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರು ಮಾತಾನಂದಮಯಿ ಸ್ವಾಮೀಜಿ ಆಶೀರ್ವಚನ ನೀಡುವರು.ಮಾಜೀ ವಿಧಾನಸಭಾ ಸದಸ್ಯೆ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು ಯುವ ವಾಗ್ಮಿ ಅಕ್ಷತಾ ಧಾರ್ಮಿಕ ಭಾಷಣ ಮಾಡಲಿದ್ದು ಗೌರವಾರ್ಪಣೆ ನಡೆಯಲಿದೆ.ರಾತ್ರಿ 8ರಿಂದ ಯೋಗೀಶ್ ಶರ್ಮ ಬಳ್ಳಪದವು ಬಳಗದ ಶಾಸ್ತ್ರೀಯ ಸಂಗೀತ ಕಚೇರಿ ಏರ್ಪಡಿಸಲಾಗಿದೆ.