ತುಮಕೂರು: ಕಾಯಕ ಯೋಗಿ, ಅನ್ನ, ಅಕ್ಷರ, ಆಶ್ರಯ ಎಂಬ ತ್ರಿವಿಧ ದಾಸೋಹದಿಂದ ಜಗತ್ತಿಗೇ ಮಾದರಿಯಾದ ಶತಾಯುಷಿ, ಶತಮಾನದ ಸಂತ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಮಂಗಳವಾರ ಸಿದ್ಧಗಂಗೆ ಮಠದಲ್ಲಿ ಲೀನವಾದರು.
ನಿನ್ನೆ ಸಂಜೆ ಸಿದ್ಧಗಂಗಾ ಮಠದಲ್ಲಿ ಕ್ರಿಯಾ ಸಮಾಧಿ ಸ್ಥಳದಲ್ಲಿ 1ಲಿಂಗಾಯತ ಸಂಪ್ರದಾಯದಂತೆ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಹಾಗೂ ಸಕಲ ಸರ್ಕಾರಿ ಗೌರವದೊಂದಿಗೆ ಶ್ರೀಗಳ ಲಿಂಗ ಶರೀರದ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಇದಕ್ಕೋ ಮೊದಲು ಗೋಸಾಲ ಸಿದ್ಧೇಶ್ವರ ವೇದಿಕೆಯಿಂದ ಶ್ರೀಗಳ ಲಿಂಗ ಶರೀರವನ್ನು 6 ಅಡಿ ಎತ್ತರದ ರುದ್ರಾಕ್ಷಿ ರಥದಲ್ಲಿ ಮೆರವಣಿಗೆ ಮೂಲಕ ಕ್ರಿಯಾ ಸಮಾಧಿವರೆಗೆ ತರಲಾಯಿತು. ಮೆರವಣಿಗೆಯಲ್ಲಿ 400ಕ್ಕೂ ಹೆಚ್ಚು ಸ್ವಾಮೀಜಿಗಳು ಹಾಗೂ ಸಾವಿರಕ್ಕೂ ಹೆಚ್ಚು ಗಣ್ಯರು ಭಾವಹಿಸಿದ್ದರು.
ಅಂತಿಮ ಕ್ರಿಯಾವಿಧಿಗೆ ಮುನ್ನ ಸಕಲ ಸರ್ಕಾರ ಗೌರವಗಳನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಶ್ರೀಗಳ ಭೌತಿಕ ಶರೀರಕ್ಕೆ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು. ಬಳಿಕ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನಮನ ಸಲ್ಲಿಸಿದರು. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುಷ್ಪನಮನ ಸಲ್ಲಿಸಿದರು.
111 ವರ್ಷಗಳ ಸಾರ್ಥಕ ಬದುಕನ್ನು ಬಾಳಿದ ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳು ಸೋಮವಾರ ಬೆಳಗ್ಗೆ 11.45ಕ್ಕೆ ಲಿಂಗೈಕ್ಯರಾಗಿದ್ದರು.