ಮಂಜೇಶ್ವರ: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂವಿಧಾನದ ಹಿನ್ನೆಲೆಯಲ್ಲಿ ಸಂರಕ್ಷಿಸುವ ಉದ್ದೇಶದಿಂದ ರಾಜ್ಯ ಮಟ್ಟದಲ್ಲಿ ಪರ್ಯಟನೆ ನಡೆಸುವ ಸಂವಿಧಾನ ಸಂದೇಶ ಯಾತ್ರೆ ಸೋಮವಾರ ಮಂಜೇಶ್ವರದಿಂದ ಸಂಚಾರ ಆರಂಭಿಸಿದೆ.
ಕೇರಳ ವಿಧಾನ ಸಭೆ,ಸಾರ್ವಜನಿಕ ಶಿಕ್ಷಣ ಇಲಾಖೆಗಳ ನೇತೃತ್ವದಲ್ಲಿ ಸಾಕ್ಷರತಾ ಮಿಷನ್ ಆಯೋಜಿಸುವ ಈ ಯಾತ್ರೆ ಸಂವಿಧಾನ ಸಾಕ್ಷರತಾ ಜನಪರ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿದೆ. ರಾಜ್ಯದ 52 ಕೇಂದ್ರಗಳನ್ನು ಸಂಪರ್ಕಿಸಿ, ಜ.24 ರಂದು ತಿರುವನಂತಪುರಂನಲ್ಲಿ ಯಾತ್ರೆ ಸಮಾಪ್ತಿಗೊಳ್ಳಲಿದೆ.
ಮಂಜೇಶ್ವರ ಗೋವಿಂದ ಪೈ ನಗರದಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಪಿ.ಕರುಣಾಕರನ್ ಯಾತ್ರೆಯನ್ನು ಉದ್ಘಾಟಿಸಿದರು. ಜಾಥಾ ಮುಖಂಡ, ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ನಿರ್ದೇಶಕ ಡಾ.ಪಿ.ಎಸ್.ಶ್ರೀಕಲಾ ಅವರಿಗೆ ಸಂಸದ ಧ್ವಜ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಸಂಸದ ಪಿ.ಕರುಣಾಕರನ್ ಅವರು ವೈವಿಧ್ಯಮಯ ಸಂಸ್ಕೃತಿಕ ಹಿನ್ನೆಲೆ ಇರುವ ನಮ್ಮ ದೇಶದಲ್ಲಿ ಜಾತಿ,ಮತಗಳ ಹೆಸರಲ್ಲಿ ಜನತೆಯನ್ನು ಒಡೆಯುವ ಯತ್ನ ವ್ಯವಸ್ಥಿತವಾಗಿ ನಡೆದುಬರುತ್ತಿದೆ. ಇದರ ವಿರುದ್ಧ ಮುಂದಿನ ಜನಾಂಗವನ್ನು ಜಾಗೃತಗೊಳಿಸಲು ಸಂವಿಧಾನದ ಕುರಿತು ಶಾಸ್ತ್ರೀಯವಾಗಿ ಅಧ್ಯಯನ-ಚಿಂತನೆಗಳ ಅಗತ್ಯವಿದೆ ಎಂದವರು ಅಭಿಪ್ರಾಯಪಟ್ಟರು.
ಜಾಥಾ ಮುಖಂಡ ಡಾ.ಪಿ.ಎಸ್.ಶ್ರೀಕಲಾ ಅವರು ಮಾತನಾಡಿ ಎಲ್ಲರನ್ನೂ ಸಮಾನವಾಗಿ ಕಾಣುವ ದೃಷ್ಟಿಕೋನವೇ ನಮ್ಮಸಂವಿಧಾನದ ವಿಶೇಷತೆ. ಈ ಸಂದೇಶವನ್ನು ಜನತೆಗೆ ತಲಪಿಸುವ ಮಹತ್ತರ ಕರ್ತವ್ಯವನ್ನು ಸಂದೇಶ ಯಾತ್ರೆ ನಡೆಸುತ್ತಿದೆ ಎಂದು ವಿವರಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಕೆ.ಎಂ.ಕೆ.ನಂಬ್ಯಾರ್ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಕೆ.ಎಂ.ಕೆ.ಅಶ್ರಫ್, ಉಪಾಧ್ಯಕ್ಷೆ ಮಮತಾ ದಿವಾಕರ್, ಜಿಲ್ಲಾ ಯೋಜನಾ ಸಂಚಾಲಕ ಶಾಜು ಜೋನ್, ಮಂಜೇಶ್ವರ ಗ್ರಾಮಪಂಚಾಯತಿ ಅಧ್ಯಕ್ಷ ಅಬ್ದುಲ್ ಅಝೀಝ್, ಬ್ಲಾಕ್ ಪಂಚಾಯತಿ ಸದಸ್ಯ ಮಹಮ್ಮದ್ ಮುಸ್ತಫ, ಮಂಜೇಶ್ವರ ಗ್ರಾಮಪಂಚಾಯತಿ ಸದಸ್ಯರಾದ ಕೆ.ಎಂ.ಕೆ.ಅಬ್ದುಲ್ ರಹಮಾನ್ ಹಾಜಿ,ರಿಯಾನಾ, ಬ್ಲಾಕ್ ಅಭಿವೃದ್ದಿ ಅಧಿಕಾರಿ ನೂತನ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು.
ಯಾತ್ರೆಗೆ ಬಳಿಕ ಕಾಸರಗೋಡು ನಗರದ ನೂತನಬಸ್ ನಿಲ್ದಾಣಬಳಿಯ ಟಿ.ಉಬೈದ್ ನಗರದಲ್ಲಿ ಸ್ವಾಗತ ನೀಡಲಾಯಿತು.