ಕಾಸರಗೋಡು: ರಾಜ್ಯಕ್ಕೆ ಆಗಮಿಸುವ ದೀರ್ಘಗಾಮಿ ವಾಹನಗಳ ಚಾಲಕರ ಮತ್ತು ಸಹಾಯಕರ ವಿಶ್ರಾಂತಿ ಸಹಿತ ವಿಚಾರಗಳಿಗೆ ಜಿಲ್ಲಾಡಳಿತೆ ಸೌಕರ್ಯ ಏರಪಡಿಸಲಿದೆ.
ವಿಶ್ರಾಂತಿಯ ಜೊತೆಗೆ ವೈದ್ಯಕೀಯ ತಪಾಸಣೆ ಸಹಿತ ಸಹಾಯ, ಆಹಾರ ಪೂರೈಕೆ, ವಾಹನ ನಿಲುಗಡೆಗೆ ಸೌಲಬ್ಯ ಒದಗಿಸುವ ಯೋಜನೆ ಜಾರಿಗೊಳ್ಳಲಿದೆ. ಗಡಿಪ್ರದೇಶವಾದ ಹೊಸಂಗಡಿಯ ಸರಕಾರಿಜಾಗದಲ್ಲಿ ಇದಕ್ಕಿರುವ ಸೌಲಭ್ಯ ನಡೆಯಲಿದ್ದು, ಅತ್ಯಾಧುನಿಕ ರೀತಿಯ,ಎಲ್ಲ ಸೌಲಭ್ಯಗಳಿರುವ ಕೇಂದ್ರ ನಿರ್ಮಾಣಗೊಳ್ಳಲಿದೆ. ಈ ಸಂಬಂಧ ಸಮಗ್ರ ಯೋಜನೆ ವರದಿ ಸಿದ್ಧಪಡಿಸಲು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ(ಡಿ.ಟಿ.ಪಿ.ಸಿ.)ಗೆ ಆದೇಶ ನೀಡಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ರಸ್ತೆ ಸುರಕ್ಷೆ ಮಂಡಳಿ ಸಭೆಯಲ್ಲಿ ಈ ಆದೇಶನೀಡಲಾಗಿದೆ. ಉತ್ತರ ಭಾರತದಿಂದ ಸರಕು ಹೇರಿಕೊಂಡು ಬರುವ ಲಾರಿಗಳ ಚಾಲಕರಿಗೆ ಈ ಸೌಲಭ್ಯ ಭಾರೀ ಪ್ರಯೋಜನಕಾರಿಯಾಗಲಿದೆ. ಈ ಮೂಲಕ ನಂತರದ ಯಾತ್ರೆಗೆ ಅವರ ಉತ್ಸಾಹ ಹೆಚ್ಚಲಿದೆ. ಅಪಘಾತಗಳ ನಿಯಂತ್ರಣಕ್ಕೆ ಇದು ಪೂರಕವಾಗಿದೆ.
ಸಾಧಾರಣಗತಿಯಲ್ಲಿ ಇಂದು ತಾವು ಬರುವ ವಾಹನಗಳಲ್ಲೇ ಚಾಲಕರು ಮತ್ತು ಸಹಾಯಕರು ವಿಶ್ರಾಂತಿ ಪಡೆಯುತ್ತಿರುತ್ತಾರೆ. ಅನೇಕಬಾರಿ ಬೇರೆ ಬೇರೆ ಕಾರಣಗಳಿಂದ ಇವರಿಗೆ ಪೂರ್ಣರೂಪದ ವಿಶ್ರಾಂತಿ ಸಿಗದೆ ಸಮಸ್ಯೆಗಳಾಗುತ್ತವೆ. ಇದು ಹಲವು ಸಲ ಅಪಘಾತಕ್ಕೆ ಕಾರಣವಾಗುವುದೂ ಇದೆ.
ಒಂದೇ ಛಾವಣಿಯಡಿ ಎಲ್ಲ ಸೌಲಭ್ಯಗಳೂ ಸಿಗುವುದು ಹೊಸಂಗಡಿಯಲ್ಲಿ ನಿರ್ಮಾಣಗೊಳ್ಳಲಿರುವ ಕೇಂದ್ರದ ವಿಶೇಷತೆ. ಇಲ್ಲಿಪೊಲೀಸ್, ವೈದ್ಯಕೀಯ, ಮೋಟಾರು ವಾಹನ, ಜಿ.ಎಸ್.ಟಿ. ಸಹಿತ ಇಲಾಖೆಗಳ ವಿಭಾಗಗಳು ಚಟುವಟಿಕೆ ನಡೆಸಲಿವೆ. ಚಾಲಕರಿಗೆ, ಮತ್ತಿತರರಿಗೆ ವಿಶ್ರಾಂತಿಗೆ ಸಾಧಾರಣ ಕೊಠಡಿಗಳು, ಹವಾನಿಯಂತ್ರಿತ ಕೊಠಡಿಗಳು ಲಭ್ಯವಿರುವುವು. ಚಾಲಕರಿಗೆ ನೇತ್ರ ತಪಾಸಣೆ, ರಕ್ತದೊತ್ತಡ ಪರೀಕ್ಷೆ ಸಹಿತ ವೈದ್ಯಕೀಯ ತಪಾಸಣೆಗಳ ಸೌಲಭ್ಯವೂ ಇರುವುವು. ಈ ಮೂಲಕ ಸಂಚಾರ ವಲಯದಲ್ಲಿ ಬಲುದೊಡ್ಡ ಸಹಾಯಕ ವಾತಾವರಣ ನಿರ್ಮಾಣವಾಗಲಿದೆ.