ಕಾಸರಗೋಡು: ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಕಾನೂನುಭಂಗ ಪ್ರಕರಣಗಳು ನಡೆಯದಂತೆ ಜಿಲ್ಲಾಡಳಿತೆ ಬಿಗಿ ಕ್ರಮಕೈಗೊಳ್ಳಲು ನಿರ್ಧರಿಸಿದೆ.
ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ನಡೆದ ಶಾಂತಿಸಭೆಯಲ್ಲಿ ಭಾಗವಹಿಸಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ವಿಚಾರಕ್ಕೆ ಬೆಂಬಲ ಸೂಚಿಸಿದ್ದಾರೆ.
ಆರೋಪಿಗಳನ್ನು ಶೀಘ್ರ ಪತ್ತೆಮಾಡಿ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಸಭೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿನಂತಿಸಿದೆ.
ಆರೋಪಿಗಳ ಪತ್ತೆ :ಕಠಿಣ ಕ್ರಮ
ಹರತಾಳದ ವೇಳೆ ಜಿಲ್ಲೆಯಲ್ಲಿ ಹಿಂಸಾಚಾರ ಸಹಿತ ಕಾನೂನು ಭಂಗ ಪ್ರಕರಣಗಳನ್ನು ನಡೆಸಿದ ಆರೋಪಿಗಳ ಸ್ಪಷ್ಟ ಪತ್ತೆ ನಡೆದಿದ್ದು, ತಕ್ಷಣ ಬಂಧಿಸಲಾಗುವುದು. ಇವರ ವಿರುದ್ಧ ಕಂದಾಯ ಕಾಯಿದೆ (ಬ್ಯಾಂಕ್ ಠೇವಣಿ ನಿಯಂತ್ರಣ ಇತ್ಯಾದಿ) ಸಹಿತ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಆಸ್ತಿ ಹಾನಿ ಪ್ರಕರಣಗಳ ಕಾರಣಕರ್ತರ ವಿರುದ್ಧ ಕ್ರಮಕೈಗೊಂಡು, ಅವರಿಂದಲೇ ನಷ್ಟ ಪರಿಹಾರ ಈಡುಮಾಡುವ ಕ್ರಮವನ್ನು ನಡೆಸಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಆಡಳಿತೆಯಿಂದ ಕೊಂಚ ತೊಡಕು ಸಂಭವಿಸಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ ನಮ್ಮ ಜಿಲ್ಲೆಯಲ್ಲಿ ಕಾನೂನು ಭಂಗ ನಡೆಯದು ಎಂಬ ವಿಶ್ವಾಸ ಇದಕ್ಕೆ ಕಾರಣ. ಪರಿಸ್ಥಿತಿ ನಿಯಂತ್ರಣಕ್ಕಾಗಿ ಕೆಲವಡೆ ನಿಷೇಧಾಜ್ಞೆ ಹೇರಬೇಕಾಗಿ ಬಂದುದು ದುರಂತ ಎಂದು ಕಳಕಳಿ ವ್ಯಕ್ತಪಡಿಸಿದರು. ಮುಂದೆ ಇಂತಹ ಪರಿಸ್ಥಿತಿ ನಡೆಯದು ಎಂದು ಭರವಸೆ ನೀಡಿದರು.
ಸಭೆ ಖಂಡನೆ:
ಹರತಾಳ ಸಂಬಂಧ ನಡೆದ ಮೆರವಣಿಗೆ ವೇಳೆ ಪತ್ರಕರ್ತರ ಮೇಲೆ ನಡೆದ ಹಲ್ಲೆ, ಮೆರವಣಿಗೆ ವೇಳೆ ಕೆಲವರು ಮುಖ್ಯಮಂತ್ರಿ ವಿರುದ್ಧ ಮಾನಹಾನಿಕರ ಘೋಷಣೆ ಕೂಗಿದ ರೀತಿ, ಸಂಸ್ಥೆಗಳಿಗೆ ಹಾನಿ ಇತ್ಯಾದಿ ಪ್ರಕರಣಗಳನ್ನು ಸಭೆ ಖಂಡಿಸಿದೆ.
ಪೊಲೀಸ್ ಕ್ರಮ:
ಪೊಲೀಸರು ತಮ್ಮ ಅನೇಕ ಸಮಸ್ಯೆ, ಪರಿಮಿತಿಗಳ ನಡುವೆ ಜಿಲ್ಲೆಯ ಕಾನೂನು ಸಮತೋಲನ ನಿಯಂತ್ರಣಕ್ಕೆ ಯತ್ನಿಸುತ್ತಿದ್ದಾರೆ. ತಮ್ಮ ಕಾರ್ಯಕರ್ತರನ್ನು ಆಯಾ ಪಕ್ಷಗಳ ನೇತಾರರು ನಿಯಂತ್ರಿಸದೇ ಹೋದರೆ, ಪೊಲೀಸರು ತಮ್ಮ ಕ್ರಮದಲ್ಲಿ ಅವರನ್ನು ಹತೋಟಿಗೆ ತರಲಿದೆ. ಆಗ ನೇತಾರರು ಮಧ್ಯಪ್ರವೇಶ ನಡೆಸಕೂಡದು ಎಂದು ಪೊಲೀಸರ ಪರವಾಗಿ ಜಿಲ್ಲಾಧಿಕಾರಿ ಸಭೆಯಲ್ಲಿ ಸ್ಪಷ್ಟಪಡಿಸಿದರು.
ಸಾಂಸ್ಕೃತಿಕ ಜಾಗೃತಿ ಬೇಕು:
ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಡಿ.ವೈ.ಎಸ್.ಪಿ.ಅಸೈನಾರ್ ಅವರು ಜಿಲ್ಲೆಯಲ್ಲಿ ಸಾಂಸ್ಕೃತಿಕ ಜಾಗೃತಿಗೆ ರಾಜಕೀಯ ಮುಖಂಡರು ನೇತೃತ್ವ ವಹಿಸಬೇಕು. ಈ ಮೂಲಕ ಜಿಲ್ಲೆಯ ಶಾಂತಿ ಸ್ಥಾಪನೆ ಸಾಧ್ಯ. ಕಾನೂನು ಪಾಲನೆ ಎಂಬುದು ಪೊಲೀಸರ ಹೊಣೆ ಮಾತ್ರವಲ್ಲ. ಪೊಲೀಸ್ ಬಲವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಸಕಾರಾತ್ಮಕ ಚಿಂತನೆಯ ಜನ ನಿರ್ಧರಿಸಬೇಕು ಎಂದು ನುಡಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಮಾತನಾಡಿ ಆರೋಪಿಗಳ ವಿರುದ್ಧ ಪೊಲೀಸರು ಈ ವೇಳೆ ಕೈಗೊಳ್ಳುವ ಕ್ರಮ ನಿಷ್ಪಕ್ಷಪಾತಿಯಾಗಿರಬೇಕು ಎಂದು ಆಗ್ರಹಿಸಿದರು.
ಶಾಸಕ ಎಂ.ರಾಜಗೋಪಾಲ್ ಮಾತನಾಡಿ ಹರತಾಳದಂಥಹ ಪ್ರತಿಭಟನೆಗಳು ಹಿಂಸಾಚಾರಕ್ಕೆ ವೇದಿಕೆಯಾಗುವುದು ದುರಂತ ಎಂದರು. ಪತ್ರಕರ್ತರ ಮೇಲೆ ನಡೆದ ಹಲ್ಲೆ ಖಂಡನೀಯ ಎಂದು ತಿಳಿಸಿದರು.
ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯ್, ವಲಯ ದಂಡನಾಧಿಕಾರಿ ಅಬ್ದುಲ್ ಸಮದ್, ಸಿಪಿಎಂ ನೇತಾರರಾದ ಎಂ.ವಿ.ಬಾಲಕೃಷ್ಣನ್ ಮಾಸ್ಟರ್, ಕೆ.ಪಿ.ಸತೀಶ್ಚಂದ್ರನ್, ಬಿಜೆಪಿ ನೇತಾರರಾದ ನ್ಯಾಯವಾದಿ. ಕೆ.ಶ್ರೀಕಾಂತ್, ಬಿ.ವೇಲಾಯುಧನ್, ಸಿಪಿಐ ಯ ಸುರೇಶ್ ಬಾಬು, ಮುಸ್ಲಿಂಲೀಗ್ ನ ಎಂ.ಸಿ.ಖಮರುದ್ದೀನ್, ಎ.ಅಬ್ದುಲ್ ರಹಮಾನ್, ಕಾಂಗ್ರೆಸ್ ಮುಖಂಡ ಪಿ.ಎ.ಅಶ್ರಫಾಲಿ, ಜೆಡಿಎಸ್ ಮುಖಂಡ ಟಿಂಬರ್ ಮಹಮ್ಮದ್, ಎನ್ಸಿಪಿಯ ಸಿ.ಎ.ಮಹಮ್ಮದ್, ಆಝೀಸ್ ಪಿಯ ಹರೀಶ್ ಬಿ.ನಂಬ್ಯಾರ್, ರಮೇಶ್, ಕಾಂಗ್ರೆಸ್ (ಎಸ್)ನ ಕೈದಪ್ರಂ ಕೃಷ್ಣನ್ ನಂಬ್ಯಾರ್, ಕೇರಳ ಕಾಂಗ್ರೆಸ್ (ಬಿ)ಯ ಎ.ಕುಂ??ರಾಮನ್ ನಾಯರ್, ಸಾಮಾಜಿಕ ಕಾರ್ಯಕರ್ತರಾದ ಎಂ.ಕೆ.ರಾಧಾಕೃಷ್ಣನ್, ಭಾಸ್ಕರನ್ ಮೊದಲಾದವರು, ವಿವಿಧ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.