12ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಸವಾಧ್ಯಕ್ಷರ ಅಭಿಮತ
ಬದಿಯಡ್ಕ: ಭಾಷೆ ಮತ್ತು ಸಾಹಿತ್ಯದ ದೃಷ್ಟಿಯಿಂದ ಕಾಸರಗೋಡು ಪ್ರದೇಶವು ಒಂದು ತವನಿಧಿಯೆನಿಸಿದೆ. ಮೂರು ಸಮೃದ್ಧ ದ್ರಾವಿಡ ಭಾಷೆಗಳ-ಕನ್ನಡ, ತುಳು, ಮಲಯಾಳ ಭಾಷೆಗಳ-ತ್ರಿವೇಣೀ ಸಂಗಮವಿದು. ಉರ್ದು, ಕೊಂಕಣಿ, ಮರಾಠಿ ಮೊದಲಾದ ಭಾಷೆಗಳೂ ಬಳಕೆಯಲ್ಲಿರುವುದರಿಂದ ಭಾಷಾ ಬಹುತ್ವಕ್ಕೆ ಕಾಸರಗೋಡು ಉತ್ತಮ ನಿದರ್ಶನ. ತುಳು, ಕನ್ನಡ ಮತ್ತು ಮಲಯಾಳ ಭಾಷೆಗಳಲ್ಲಿನ ಜನಪದ ಸಾಹಿತ್ಯ ಹಾಗೂ ಕಲೆಗಳು, ಇಲ್ಲಿನ ಆರಾಧನ ವಿಧಾನಗಳು ಒಂದು ಮತ್ತೊಂದರಿಂದ ಪ್ರಭಾವಿತವಾದುದನ್ನು ಗಮನಿಸಬಹುದಾಗಿದೆ ಎಂದು ಡಾ.ಪಿ.ಶ್ರೀಕೃಷ್ಣ ಭಟ್ ಅವರು ಹೇಳಿದರು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಪರಿಸರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಆಯೋಜಿಸಿದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾದ ಡಾ.ಪಿ.ಶ್ರೀಕೃಷ್ಣ ಭಟ್ ಅವರು ತಮ್ಮ ಅಧ್ಯಕ್ಷ ಭಾಷಣ ಮಾಡಿ ಮಾತನಾಡಿದರು.
ಕಾಸರಗೋಡಿನ ಕನ್ನಡವನ್ನು ಉಳಿಸಿ ಬೆಳೆಸುವುದರಲ್ಲಿ ತೆಂಕುತಿಟ್ಟಿನ ಯಕ್ಷಗಾನಕ್ಕೆ ಸಿಂಹಪಾಲಿದೆ. ಯಕ್ಷಗಾನ ಪ್ರಸಂಗ ಸಾಹಿತ್ಯದ ರಚನೆ, ಅರ್ಥಧಾರಿಗಳು, ಕಲಾವಿದರು ಎಲ್ಲರೂ ಪ್ರಸ್ತುತರಾಗುತ್ತಾರೆ. ಸಾಹಿತ್ಯದ ಕ್ಷೇತ್ರದಲ್ಲಿ ಈಚೆಗೆ ಯುವ ಪ್ರತಿಭೆಗಳೂ ಮುಂದಕ್ಕೆ ಬರುತ್ತಿರುವುದು ಅಭಿಮಾನದ ವಿಷಯ. ಕವಿಗೋಷ್ಠಿಗಳಲ್ಲಿ ಭಾಗವಹಿಸುವ ಯುವ ಕವಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವಿದ್ಯಾರ್ಥಿ ಸಾಹಿತ್ಯ ಗೋಷ್ಠಿಗಳಲ್ಲಿಯೂ ಕಾಸರಗೋಡಿನ ವಿದ್ಯಾರ್ಥಿಗಳು ಮಿಂಚುತ್ತಿದ್ದಾರೆ. ಕನ್ನಡ ವಿದ್ಯಾರ್ಥಿನಿ ಸನ್ನಿಧಿ ಟಿ.ರೈಯಂಥವರ ಸಾಧನೆ ಎತ್ತಿ ಹೇಳಲೇ ಬೇಕಾದುದು. ಕೆಲ ವಿದ್ಯಾರ್ಥಿಗಳು ಬರವಣಿಗೆ ಕೇತ್ರದಲ್ಲಿಯೂ ಸಾಧನೆಯನ್ನು ತೋರಿಸುತ್ತಿದ್ದಾರೆ. ಸಾಕಷ್ಟು ಸಾಹಿತ್ಯ ಕೃತಿಗಳ ಇತಿಹಾಸವಿದ್ದರೂ ಇಂದು ಇಲ್ಲಿನ ನಮ್ಮ ಕನ್ನಡ ಭಾಷೆಯ ಬಗ್ಗೆ ಹೆಚ್ಚು ಚಿಂತಿಸಬೇಕಾದ ಕಾಲ ಸನ್ನಿಹಿತವಾಗಿದೆ ಎಂದರು.
ಕಾಸರಗೋಡು ಕನ್ನಡ ಭಾಷಾ ಪ್ರದೇಶ ಎಂಬುದನ್ನು ಸಾರಾಸಗಟಾಗಿ ಅಲ್ಲಗಳೆಯುವುದು, ಕಡ್ಡಾಯ ಮಲಯಾಳ ಕಲಿಕೆಯನ್ನು ಹೇರುವುದರ ಮೂಲಕ ಕನ್ನಡವನ್ನು ಇಲ್ಲದಾಗಿಸುವುದು, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಗಣಿತ, ಸಮಾಜ ಶಾಸ್ತ್ರ, ವಿಜ್ಞಾನ ಮೊದಲಾದ ವಿಷಯಗಳ ಬೋಧನೆಗಾಗಿ ಕನ್ನಡ ಭಾಷಾ ಜ್ಞಾನವೇ ಇಲ್ಲದ ಮಲಯಾಳಿ ಅಧ್ಯಾಪಕರನ್ನು ನೇಮಿಸುವುದು. ಈ ಮೂಲಕ ಕನ್ನಡ ಕಲಿಕೆಯನ್ನು ನಿರುತ್ಸಾಹಗೊಳಿಸುವುದು ನಡೆಯುತ್ತಿರುವಾಗ ಕನ್ನಡಿಗರು ಜಾಗೃತರಾಗಬೇಕಾದ ಅನಿವಾರ್ಯತೆ ಇದೆ ಎಂದರು.