HEALTH TIPS

ಕಸಾಪ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲ್ಪಡುವ ಹಿರಿಯ ಸಾಧಕರು


         ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಆಶ್ರಯದಲ್ಲಿ ನೀರ್ಚಾಲು ಶಾಲೆಯಲ್ಲಿ  ನಡೆಯುತ್ತಿರುವ ಕಾಸರಗೋಡು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ದ್ವಿತೀಯ ದಿನವಾದ ಇಂದು (ಭಾನುವಾರ) ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ  ಹಿರಿಯ ಸಾಧಕರನ್ನು ಸನ್ಮಾನಿಸಲಾಗುವುದು.
        ಈ ಸಂದರ್ಭದಲ್ಲಿ ಕನ್ನಡ ಹೋರಾಟಗಾರ ಐ.ವಿ.ಭಟ್ಟ, ಸಂಗೀತ ಕ್ಷೇತ್ರದಲ್ಲಿ ಕೃಷ್ಣ ಭಟ್ಟ ಖಂಡಿಗೆ, ಯಕ್ಷಗಾನದಲ್ಲಿ ಶೇಡಿಗುಮ್ಮೆ ವಾಸುದೇವ ಭಟ್ಟ, ಸಮಾಜ ಸೇವೆಯಲ್ಲಿ ಪ್ರೇಮಾ ಭಟ್ಟ ತೊಟ್ಟೆತ್ತೋಡಿ ಹಾಗೂ ಸಾಹಿತ್ಯದಲ್ಲಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಶಿಕ್ಷಣ ಕ್ಷೇತ್ರದಲ್ಲಿ  ಎಂ.ಶಂಕರ ನಂಬಿಯಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.
    *ಐವಿ ಭಟ್ ಕಾಸರಗೋಡು:
    ನ್ಯಾಯವಾದಿಯಾಗಿ ದಶಕಗಳ ಕಾಲ ನಾಡಿನ ಎಲ್ಲ ವಿಭಾಗದ ಜನರ ಮೆಚ್ಚುಗೆಗೆ ಪಾತ್ರರಾದ ಐವಿ ಭಟ್, ಜನರು ಇಲ್ಲವೇ ಇಲ್ಲ ಆದರೆ ಜನರನ್ನು ಒಗ್ಗೂಡಿಸುವ ಸಂಘಟಕರಾಗಿ ಕನ್ನಡ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.
   1937ರಲ್ಲಿ ಜನಿಸಿದ ಅವರು ಮಂಗಳೂರಿನ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದು ನ್ಯಾಯವಾದಿಯಾಗಿ ಗಡಿನಾಡು ಕಾಸರಗೋಡಿನ ಮಣ್ಣಿನಲ್ಲಿ ಐದು ದಶಕಗಳನ್ನು ದಾಟುವಂತಾಯಿತು. ಈ ಮಧ್ಯೆ ಹಿರಿಯ ಹಲವಾರು ನ್ಯಾಯವಾದಿಗಳೊಂದಿಗೆ ಸದ್ದಿಲ್ಲದೆ ನ್ಯಾಯವಾದಿ ಅಗಿಯೂ ಸಮಾಜ ಸೇವಾ ಧುರೀಣರಾಗಿಯೂ ಒಡನಾಡಿದರೂ ತಾನು ಮಾಡಿದ್ದೆಲ್ಲ ಕಿರುಕಾರ್ಯ ಎಂಬಂತೆ ಜನರೊಂದಿಗೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಒಡನಾಡುವ ಐವಿ ಭಟ್ಟರು ಯಾವುದೇ ರೀತಿಯ ಭೇದಭಾವ ತೋರದೆ ವ್ಯವಹಾರ ಮಾಡಿದ್ದು ನಿಜಕ್ಕೂ ಇಂದಿನ ತಲೆಮಾರಿಗೆ ಅಪೂರ್ವ ಮಾದರಿ.
    1957ರ ಕಾಲದಿಂದಲೇ ವಿಶಾಲ ಕನ್ನಡ ನಾಡಿನ ಸಾಹಿತ್ಯ ಕ್ಷೇತ್ರಕ್ಕೊಂದು ಕಾಯಕಲ್ಪವನ್ನು ತಂದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಐವಿ ಭಟ್ಟರು ಗಡಿನಾಡಿನಲ್ಲೂ ಅದರ ಕಾರ್ಯಕ್ಷೇತ್ರವನ್ನು ವಿಸ್ತರಿಸುವಲ್ಲಿ ಗಡಿನಾಡ ಘಟಕದ ಅಧ್ಯಕ್ಷರಾಗಿ ಬಹುಕಾಲ ಸದ್ದಿಲ್ಲದೇ ಸೇವೆಮಾಡಿ ಕನ್ನಡಮ್ಮನ ಮಡಿಲಿಗೆ ತಮ್ಮಿಂದಾದ ಕೊಡುಗೆಯನ್ನು ನೀಡಿದ್ದಾರೆ.
ಐವಿ ಭಟ್ಟರ ಸಂಘಟನ ಚಾತುರ್ಯವನ್ನು ಕಂಡುಂಡವರಾರೂ ಬರಿಯ ಸದಸ್ಯನಾಗಿ ಕುಳಿತಿರಲು ಬಿಡುವುದಿಲ್ಲ ಎಂಬುದಕ್ಕೆ ಅವರು ಅಧ್ಯಕ್ಷರಾಗಿ , ಕಾರ್ಯದರ್ಶಿಯಾಗಿ ಕಾಸರಗೋಡಿನ ವಿವಿಧೆಡೆಗಳಲ್ಲಿ ಕಾರ್ಯವೆಸಗಲು ಕಾರಣವಾದ ಸಂಘಸಂಸ್ಥೆಗಳೇ ನಿದರ್ಶನ. ಬದಿಯಡ್ಕದ ನವಜೀವನ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ವಹಿಸುವ ಪೆರಡಾಲ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯಾಗಿಯೂ ಅಧ್ಯಕ್ಷರಾಗಿಯೂ ಬಹಳ  ಮುತುವರ್ಜಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯವೆಸಗಿದ ಐವಿ ಭಟ್ ಬಾಯಾರು ಪ್ರಶಾಂತಿ ವಿದ್ಯಾನಿಕೇತನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ,  ಎಡನೀರು ಮಠದ ಪ್ರಬಂಧಕರಾಗಿ ಬಹಳ ನಿಷ್ಠೆಯಿಂದ ಕಾರ್ಯವೆಸಗಿದ ಕೀರ್ತಿಗೆ ಭಾಜನರಾದವರು. ಅನಂಪುರ ಶ್ರೀ ಅನಂತಪದ್ಮನಾಭ ಸ್ವಾಮೀ ಕ್ಷೇತ್ರ ಮತ್ತು ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮಧೂರು ಶ್ರೀಮದನಂತೇಶ್ವರ ದೇವಸ್ಥಾನದ ಸೇವಾಸಮಿತಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಅತ್ಯಂತ ತಾಳ್ಮೆಯಿಂದ ದುಡಿಯುವುದರ ಮೂಲಕ ಧಾರ್ಮಿಕ ಮುಂದಾಳುವಾಗಿಯೂ ಅತ್ಯಂತ ತಾಳ್ಮೆಯಿಂದ ಜನರೊಂದಿಗೆ ಬೆರೆತವರು.ಇವುಗಳಿಗಿಂತ ಭಿನ್ನವಾಗಿರುವ ಲಯನ್ಸ್ ಕ್ಲಬ್ ಕಾಸರಗೋಡು ಇದರ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪ್ರಶಸ್ತಿಗಳು ಮತ್ತು ಸನ್ಮಾನಗಳಿಂದ ಆದಷ್ಟು ದೂರ ನಿಲ್ಲುವ ಜಾಯಮಾನದವರಾದ ಐವಿ ಭಟ್ಟರನ್ನು ಬಿಡದೆ ಸನ್ಮಾನಗಳು ಹುಡುಕಿಕೊಂಡು ಬಂದಿವೆ. ಮೈಸೂರಿನಲ್ಲಿ ನಡೆದ ಕನ್ನಡ  ಸಾಹಿತ್ಯ ಪರಿಷತ್ತಿನ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ , ಕನ್ಡಡ ಅಭಿವೃದ್ದಿ ಪ್ರಾಕಾರದ ಆಶ್ರಯದಲ್ಲಿ ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಕನ್ನಡ ಜಾಗೃತಿ ಸಮ್ಮೇಳನ ನಡೆದಾಗ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಅಖಿಲ ಹವ್ಯಕ ಮಹಾಸಭಾದ ಸಮ್ಮೇಳನದಲ್ಲಿ ಹೀಗೆ ನಾಡಿನ ಹಲವೆಡೆ ಸನ್ಮಾನಿತರಾದ ಐವಿ ಭಟ್ ಅವರನ್ನು ನೀರ್ಚಾಲಿನ ಅವರು ವಿದ್ಯಾರ್ಜನೆ ಮಾಡಿದ ಅದೇ ಮಹಾವಿದ್ಯಾಲಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕದ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲು ತೀರ್ಮಾನಿಸುವುದು.
           * ಜೇನುಮೂಲೆ ಕೃಷ್ಣ ಭಟ್ಟ:
     ಕಲಾರಾಧನಂ ವಿನಾ ನಜೀವಿತಂ ಎಂಬಂತೆ  ಬದುಕನ್ನೇ ಕಲೆಗಾಗಿ ಮೀಸಲಿಟ್ಟ ಅಗ್ರಗಣ್ಯರ ಸಾಲಿನಲ್ಲಿ ಸೇರುವವರು ಜೇನುಮೂಲೆ ಕೃಷ್ಣ ಭಟ್ಟರು 1941ರಂದು ಜನಿಸಿ, ನೀರ್ಚಾಲಿನ ಮಹಾಜನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದು,  ತಂದೆಯವರಾದ ಶಾಮಭಟ್ಟರು ಸಂಗೀತ ವಿದ್ವಾಂಸರಾದ ಗುತ್ತು ಗೋವಿಂದ ಭಟ್ಟರಿಂದ ಸಂಗೀತಾಭ್ಯಾಸ ಮಾಡಿ ಅದನ್ನು ನಿರಂತರ ಪ್ರಯೋಗ ಮಾಡುವುದು ಬಾಲಕನಲ್ಲಿ ಸಹಜ ಆಕರ್ಷಣೆಯನ್ನುಂಟುಮಾಡಿತು. ತಂದೆಯ ಹಾಡಿಗೆ ಹಾರ್ಮೋನಿಯಂ ಬಾರಿಸುತ್ತಿದ್ದ ಕೃಷ್ಣ ಭಟ್ಟರಿಗೆ ಸಂಗೀತವೆಂಬ ಅದ್ಬುತ ಕಲೆ ಸಿದ್ಧಿಯಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಅಲ್ಲಿಂದ ಮುಂದಿನದು ಸಂಗೀತ ಪ್ರಪಂಚದಲ್ಲಿ ವಿಹರಿಸುವ, ಸಾಧನೆಯನ್ನು ಮಾಡುವ ಸುದೀರ್ಘ ಕಾಲವಾಯಿತು.
     ಸಂಗೀತದ ಜೊತೆಗೆ ಪಿಟೀಲು ವಾದನದಲ್ಲೂ ಆಕರ್ಷಿತರಾದ ಕೃಷ್ಣ ಭಟ್ಟರು ಬಾಲಪಾಠವನ್ನು ಎಡನೀರು ವಿದ್ವಾನ್ ಮಹಾಲಿಂಗ ಭಟ್ಟರಲ್ಲಿ ಅಭ್ಯಾಸ ಮಾಡಿದರೆ ಮುಂದೆ ಉನ್ನತ ಶಿಕ್ಷಣವನ್ನು ಕಲಾನಿ ಚೆಂಬೈ ವೈದ್ಯನಾಥ ಭಾಗವತರ ನೇರ ಶಿಷ್ಯರಾದ ಚೆಂಬೈ ಎಂ ಜಿ ಭಾಗವತರಿಂದ  ಪಡೆಯುವ ಭಾಗ್ಯವಂತರಾಗಿದ್ದರು. ಅವರ ಉತ್ತಮ ರೀತಿಯ ಅಧ್ಯಾಪನ ಮತ್ತು ಸ್ವತಃ ಸಾಧನೆ ಶೀಘ್ರವಾಗಿ ರಂಗಪ್ರವೇಶ ಮಾಡುವಂತೆ ಮಾಡಿತು. ಕೇರಳ ಮತ್ತು ಕರ್ನಾಟಕ ರಾಜ್ಯ ಹಲವೆಡೆ ತುಂಬಿದ ಸಭೆಯಲ್ಲಿ ಸಂಗೀತನ್ನೂ ವಯಲಿನ್ ವಾದನವನ್ನೂ ಕಲಾಸಕ್ತರ ಮುಂದಿಡುವ ಬಹಳಷ್ಟು ಅವಕಾಶಗಳು ಹುಡುಕಿಬಂದುವು,
    ತಮ್ಮ ಇಡಿ ಕುಟುಂಬವನ್ನೇ ಸಂಗೀತ ಕಲಾರಾಧನೆಗಾಗಿ ತೊಡಗಿಸಿಕೊಂಡ ಜೇನುಮೂಲೆ ಕೃಷ್ಣ ಭಟ್ಟರು ಮಧುಪುರನಾಥ ಎಂಬ ಅಂಕಿತನಾಮದೊಂದಿಗೆ ನೂರಾರು ಕೀರ್ತನೆಗಳನ್ನೂ ರಚಿಸಿರುತ್ತಾರೆ. ಅವರ ಸಂಗೀತ ಕಲಾ ಸಾಧನೆಯನ್ನು ಗುರುತಿಸಿ ಈಗಾಗಲೇ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು, ಸೃಜನಾ ಬದಿಯಡ್ಕ , ಮಂಗಳೂರು ಸಂಗೀತ ಪರಿಷತ್ತು ಮೊದಲಾದ ಸಂಸ್ಥೆಗಳು ಸನ್ಮಾನಿಸಿರುತ್ತವೆ. ಅಂತಹ ಮೇರು ವಿದ್ವತ್ತಿನ ಜೇನುಮೂಲೆ ಕೃಷ್ಣ ಭಟ್ಟರನ್ನು  ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗುವುದು.
             * ರಾಧಾಕೃಷ್ಣ ಕೆ.ಉಳಿಯತ್ತಡ್ಕ:
      ಗಡಿನಾಡು ಕನ್ನಡ ಸಾಹಿತ್ಯ ಲೋಕಕ್ಕೆ ನಿರಂತರ ಸಾಹಿತ್ಯಸೇವೆಯನ್ನು ವೈವಿಧ್ಯಮಯವಾಗಿ ಕೈಗೆತ್ತಿಕೊಂಡು ರಸಪಾಕವನ್ನು ಕನ್ನಡಿಗರಿಗೆ ಉಣಬಡಿಸಿದ ಮೇರು ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಪದವಿ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರೈಸಿದ ಅನಂತರ ಉದ್ಯೋಗಕ್ಕಾಗಿ ಹಲವಾರು ರಂಗಕ್ಕೆ ಹಾದುಹೋಗಿದ್ದರೂ ಸಾರಸ್ವತ ಲೋಕ ತನ್ನ ಬಳಿಯಿಂದ ಹೊರಹೋಗಲು ಬಿಡಲೇ ಇಲ್ಲ. ತನ್ನಲ್ಲೇ ಕೃಷಿ ಮಾಡಿ ಓದುಗರೆಂಬ ನಾಡಜನತೆಯ ಹಸಿವನ್ನು ವಿಭಿನ್ನವಾಗಿ ನೀಗಿಸುವಂತೆ ಮಾಡಿತು. ಆದ್ದರಿಂದಲೇ ಪತ್ರಕರ್ತನಾಗಿ, ಜಿಲ್ಲಾ ಪ್ರಧಾನ ವರದಿಗಾರನಾಗಿ, ಉಪಸಂಪಾದಕನಾಗಿ, ಸಂಪಾದಕನಾಗಿ, ವೈವಿಧ್ಯಮಯವಾದ ಹುದ್ದೆಗಳನ್ನು ಅತ್ಯಂತ ಭರವಸೆಯಿಂದ ನಿರ್ವಹಿಸಿದ ಗರಿಮೆಯನ್ನು ಪಡೆದುಕೊಂಡರು.
    ರಾಧಾಕೃಷ್ಣ ಉಳಿಯತ್ತಡ್ಕ ರಚಿಸಿದ ಕೃತಿಗಳು ಹಲವಾರು. ಸರಳಗೀತೆಗಳು, ಈ ನನ್ನ ಶಬ್ದಗಳು, ನೋವ ಜಿನುಗುವ ಜೀವ, ಬೆಂಕಿ ನುಂಗುವ ಹುಡುಗ, ಹದಿಹರೆಯದ ಹನಿಗಳು,ಅರ್ಧ ಸತ್ಯದ ಬೆಳಕು ಮೊದಲಾದುವು ಅವರ ಲೇಖನಿಯಿಂದ ಮೂಡಿದ ಕವನ ಸಂಕಲನಗಳಾದರೆ ಕೂಡ್ಲು ಮನೆತನದ ಕುರಿತಾದ ಅಧ್ಯಯನ ನಡೆಸಿದ್ದರ ಫಲವಾಗಿ ಮೂಡಿಬಂದ ಕೃತಿಯೇ ಕುತ್ಯಾಳ ಸಂಪದ. ಕಯ್ಯಾರ ಕಿಞ್ಞಣ್ಣ ರೈ, ಲಕ್ಷ್ಮೀ ಕುಂಜತ್ತೂರು, ಪಿಎಸ್ ಪುಣಿಂಚಿತ್ತಾಯ, ಸಿರಿಬಾಗಿಲು ವೆಂಕಪ್ಪಯ್ಯ, ವಸಂತಕುಮಾರ್ ಪೆರ್ಲ,ಕೀರಿಯಾಟ್ ಕುಟ್ಟಿರಾಮನ್ ಮೊದಲಾದವರ ಜೀವನ ಚರಿತ್ರೆ ಹೊತ್ತಗೆಯಾಗಿ ಹೊರಹೊಮ್ಮಿದೆ. ಕಯ್ಯಾರ ಗದ್ಯ ಸೌರಭ, ಜೀವದನಿ, ಶ್ರೀನಿ ಮೊದಲಾದ ಗ್ರಂಥಗಳನ್ನು ಇವರು ಸಂಪಾದಿಸಿದ್ದಾರೆ.
ಕಯ್ಯಾರ ಕಾವ್ಯ ಪ್ರಶಸ್ತಿ, ಕೇರಳ ರಾಜ್ಯೋದಯ ಪ್ರಶಸ್ತಿ, ಕರ್ನಾಟಕ ಪತ್ರಕರ್ತರ ಸಂಘದ ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ, ಸಿದ್ದಯ್ಯ ಪುರಾಣಿಕ ಸಾಹಿತ್ಯ ಪ್ರಶಸ್ತಿ, ವಿಶ್ವವರಂಗಭೂಮಿ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸುವರ್ಣ ಕರ್ನಾಟಕ ಸಾಹಿತ್ಯ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ ಎಂಬುದು ಅವರ ಸಾಹಿತ್ಯ ಕೃಷಿಯನ್ನು ನಾಡು ಗುರುತಿಸಿರುವುದಕ್ಕೆ ನಿದರ್ಶನ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಮೂರು ಬಾರಿ ಭಾಗವಹಿಸಿರುವುದಲ್ಲದೆ ಮೈಸೂರು ದಸರಾ, ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯೋತ್ಸವಗಳಲ್ಲಿ ಕವಿತೆ ವಾಚಿಸಿದ್ದಾರೆ. ಬಂಟ್ವಾಳ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ, ರಾಣಿಬೆನ್ನೂರು, ಸಮಣೂರು, ಮಂಗಳೂರು ಮೊದಲಾದೆಡೆಗಳಲ್ಲಿ ನಡೆದ ಕವಿಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆಯಾಗಿರುವುದು ಅವರ ಕರ್ತೃತ್ವ ಶಕ್ತಿಯನ್ನು ಬಿಂಬಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ, ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷರೇ ಮೊದಲಾದ ಹುದ್ದೆಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದ ಅವರನ್ನು ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಲಾಗುವುದು.
      * ಟಿ ಪ್ರೇಮ ಕೆ ಭಟ್:
      ಸಮಾಜಸೇವೆಯ ಸಾಕಾರಮೂರ್ತಿಯಾಗಿ ಬದುಕನ್ನು ರೂಪಿಸಿದ ಟಿ.ಪ್ರೇಮಾ ಕೆ. ಭಟ್ ಯಕ್ಷಗಾನ ಪ್ರಸಂಗದ ಪಾತ್ರದ ಅರ್ಥಗಾರಿಕೆಯಲ್ಲ ಸಿನಿಮಾದ ಸಂಭಾಷಣೆಯ ತುಣುಕಲ್ಲ ಚೌಟರ ಚಾವಡಿಯ ಚೌಟ ಪ್ರತಿಷ್ಠಾನದವರು ಅದ್ದೂರಿ ಸಮಾರಂಭದಲ್ಲಿ ಸನ್ಮಾನಿಸುವ ಕಾಲಕ್ಕೆ ಸಮರ್ಪಿಸಿದ ಮಾನಪತ್ರದ ಮೊದಲಸಾಲಿನ ನುಡಿಗಳು. ಅದಕ್ಕೆ ಭಾಜನರಾದವರು ಟಿ ಪ್ರೇಮ ಕೆ ಭಟ್ ತೊಟ್ಟೆತ್ತೋಡಿ.
ಪುತ್ತೂರು ತಾಲ್ಲೂಕಿನ ಪಾಣಾಜೆಯಲ್ಲಿ ಕೃಷಿಕರೂ ವೈದ್ಯರೂ ಆದ ಡಾ.ಪಿಎಸ್ ಈಶ್ವರ ಭಟ್ಟ ಮತ್ತು ನಾಟಿವೈದ್ಯೆ ಪಾರ್ವತಿ ಅಮ್ನ ದಂಪತಿಗಳ ಮಗಳಾಗಿ 1947ರಂದು ಜನಿಸಿ ಪ್ರೇಮಾ ಭಟ್ ಪದವಿಪೂರ್ವದ ವರೆಗೆ ಶಿಕ್ಷಣವನ್ನು ಪಡೆದು ತೊಟ್ಟೆತ್ತೋಡಿಯ ಪ್ರತಿಷ್ಠಿತ ಕುಟುಂಬಕ್ಕೆ ಸೊಸೆಯಾಗಿ ಬಂದವರು. ತೊಟ್ಟೆತ್ತೋಡಿ ಕೇಶವ ಭಟ್ಟರ ಸತಿಯಾಗಿ ಅವರ ಎಲ್ಲ ಕೆಲಸಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಕಾಲಕ್ಕೆ ಪತಿಯವರೂ ಮಾವನವರಾದ ತೊಟ್ಟೆತ್ತೋಡಿ ನಾರಾಯಣ ಭಟ್ಟರೂ ವಿವಶರಾದಾಗ ಹಿಂದೆ ಮುಂದೆ ನೋಡದೆ ದಿಟ್ಟತನದಿಂದ ಸಂಸಾರವನ್ನು ಸಮರ್ಥವಾಗಿ ಮುನ್ನಡೆಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡು ಮುನ್ನಡೆದರು.
ತಮ್ಮ ಮನೆಯ ಸಮೀಪವೇ ಊರಿನ ಬಡಜನರಿಗೆ ಉಪಕಾರವಾಗುವಂತೆ ಆರಂಭಿಸಲಾದ ಶಿಕ್ಷಣ ಸಂಸ್ಥೆಯಾದ ವಾಣಿವಿಲಾಸ ಕಿರಿಯ ಪ್ರಾಥಮಿಕ ಶಾಲೆಯ ಪ್ರಬಂಧಕರಾಗಿ ಬಹಳಷ್ಟು ಕಷ್ಟದಿಂದ ಕಾರ್ಯವೆಸಗಿದ ಹಿರಿಮೆ ಪ್ರೇಮಾ ಭಟ್ ಅವರದು. ಮನೆಯಲ್ಲಿರುವ ಕೃಷಿಯನ್ನು ಅಚ್ಚುಕಟ್ಟಾಗಿ ನಡೆಸುತ್ತಾ ಗೃಹಿಣಿಯಾಗಿ, ತಾಯಿಯಾಗಿ ಮೂರು ಮಕ್ಕಳನ್ನು ಒಂದು ಉತ್ತಮ ನೆಲೆಗೆ ತರುವಲ್ಲಿ ಅವರು ಯಶಸ್ಸನ್ನು ಕಂಡಿದ್ದಾರೆ. ಅದೇ ರೀತಿ ಮೀಯಪದವಿನ ವಿದ್ಯಾವರ್ಧಕ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿಯೂ, ಶಿಕ್ಷಣ ರಂಗದ ಜೊತೆಗೆ ಆಸುಪಾಸಿನ ದೈವಸ್ಥಾನ, ದೈವಸ್ಥಾನಗಳ ಆಡಳಿತ ಮಂಡಳಿಗಳಲ್ಲೂ ಅಧ್ಯಕ್ಷರಾಗಿ ಅತ್ಯಂತ ಮುತುವರ್ಜಿಯಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ನೇತೃತ್ವ ವಹಿಸಿದ ಅನನ್ಯ ಸಾಧಕಿ ಅವರು.
  ಶಿಕ್ಷಣವನ್ನು ಪಡೆಯುತ್ತಿರುವಾಗಲೇ ಪ್ರತಿಭಾವಂತನಾಗಿ ಪ್ರಕಟಗೊಂಡು ಮುಂದೆ ವೈದ್ಯಕೀಯ ವಿಜ್ಞಾನವನ್ನು ಕಲಿತು ವೈದ್ಯನಾದರೂ ಮಗ ಉತ್ತಮ ಕೃಷಿಕನೂ ಆಗಬೇಕೆಂದು ಎರಡೂ ರಂಗಗಳಲ್ಲಿ ಪಳಗಿಸುವುದರ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತೆ ಪ್ರತ್ಯೇಕ ಗಮನಹರಿಸಿದ ಹಿರಿತನವನ್ನು ಹೊಂದಿದ ಮಾತೆ ಪ್ರೇಮಾ ಭಟ್ ನಾಡಿನ ಹಲವೆಡೆಗಳಲ್ಲಿ ಸನ್ಮಾನಿತರಾದವರು.
ಚೌಟರ ಚಾವಡಿಯಂತೆಯೇ ಮೀಯಪದವಿನ ವಿದ್ಯಾವರ್ಧಕ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವಿಶೇಷವಾಗಿ ಸನ್ಮಾನಿತರಾದ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ  ಸನ್ಮಾನಿತರಾಗುತ್ತಾರೆ.
      *ವಾಸುದೇವ ಭಟ್ಟ ಶೇಡಿಗುಮ್ಮೆ:
    ಯಕ್ಷಗಾನವೆಂಬ ಭವ್ಯ ಪರಂಪರೆಯಿರುವ ಯಕ್ಷಗಾನದಲ್ಲಿ ಮಿಂಚಿಸದ ವಾಸುದೇವ ಭಟ್ಟ ಶೇಡಿಗುಮ್ಮೆ, 1946ರಲ್ಲಿ ಜನಿಸಿದ ವಾಸುದೇವ ಭಟ್ಟರು ಸಾಹಿತ್ಯ ಕ್ಷೇತ್ರದಿಂದಲೂ ಯಕ್ಷಗಾನ ಕ್ಷೇತ್ರದಿಂದಲೂ ಪಡೆದದ್ದು  ಕಡಿಮೆಯಾದರೆ ಅವುಗಳಿಗೆ ಕೊಡುಗೆಯಾಗಿ ನೀಡಿದ್ದು ಬಹಳ.
   ಸ್ವತ: ಬತ್ತೀಸ ರಾಗಗಳಲ್ಲಿ ಕೇಳುಗನ ಕಿವಿಗಿಂಪಾಗುವಂತೆ ಹಾಡಲಾಗದಿದ್ದರೂ ಹಾಡುವವರು ಇಂಥದ್ದೇ ರಾಗದಲ್ಲಿ ಹಾಡಿದ್ದಾರೆ ಎಂದು ಇದಮಿತ್ಧಂ ಎಂದು ಹೇಳಬಲ್ಲ ಸಾಮಥ್ರ್ಯ ವಾಸುದೇವ ಭಟ್ಟರದು. ಯಕ್ಷಗಾನ ಬಯಲಾಟವಾಗಲಿ ತಾಳಮದ್ದಳೆಯಾಗಲಿ ದೂರದಲ್ಲಿ ಕುಳಿತು ಹಿರಿಕಿರಿಯ ಕಲಾವಿದರ ರಾಗತಾಳಲಯಮಾತುಗಳನ್ನು ತಾಳ್ಮೆಯಿಂದ ಕೇಳಿ ಪೆÇ್ರೀತ್ಸಾಹಿಸುವ ಅಪೂರ್ವವಾಗಿ ಕಾಣಿಸುವ ವ್ಯಕ್ತಿಗಳಲ್ಲಿ ಅವರೂ ಒಬ್ಬರು.
    ಶೇಡಿಗುಮ್ಮೆ ವಾಸುದೇವ ಭಟ್ಟರು ಹವ್ಯಾಸಿ ಯಕ್ಷಗಾನ ಕಲಾವಿದನಾಗಿ ನಾರಾಯಣಮಂಗಲದ ವಿಘ್ನೇಶ್ವರ ಯಕ್ಷಗಾನ ಸಂಘದಲ್ಲಿ ಸುದೀರ್ಘ ಕಾಲ ಹಾಡುಗಾರಿಕೆ ಮಾಡಿದ್ದರೂ ಕೃತಿಕಾರನಾಗಿ ಮಿಂಚಿದ್ದು ಸದ್ದಿಲ್ಲದೇ ಮಾಡಿದ ವಿಶೇಷ ಸಾಧನೆ. ಪóಥುರಾಜ ವಿಜಯ, ವಿಜಯ ಖಡ್ಗ ಮಹಾತ್ಮೆ, ಮೋಹನ ತರಂಗಿಣಿ, ಋಷಭ ಚರಿತ್ರೆ, ವೈಷ್ಣವೀ ದೇವೀ ಮಹಾತ್ಮೆ, ಆದಿಚುಂಚನಗಿರಿ ದೇವೀ ಮಹಾತ್ಮೆ, ತೊಡಿಕಾನ ಕ್ಷೇತ್ರ ಮಹಾತ್ಮೆ, ಕಾವೇರಿ ಮಹಾತ್ಮೆ, ಮುಚುಕುಂದ ಚರಿತ್ರೆ, ಕಾರ್ಗಿಲ್ ವಿಜಯ, ಸತ್ಯದರ್ಶನ, ಶಿಶಿಲೇಶ್ವರ ವೈಭವ, ಮಧುರ ಶೈಲೇಂದ್ರಿ ... ಹೀಗೆ ಅಪೂರ್ವ ಕಥೆಗಳನ್ನಾಧರಿಸಿದ ಪ್ರಸಂಗಗಳ ಬಹುದೊಡ್ಡ ಕೊಡುಗೆಯನ್ನು ಸಾರಸ್ವತ ಲೊಕಕ್ಕೆ ನೀಡಿದವರು. ಮಾಸ್ಚರ್ ಬ್ಲಾಸ್ಚರ್ ಸಚಿನ್ ತೆಂಡುಲ್ಕರ್ ಅವರ ಜೀವನಾಧಾರಿತವಾದ ಪ್ರಸಂಗ 2011ರಲ್ಲಿ ಪ್ರಕಟವಾಗಿದ್ದರೆ ಯಕ್ಷ ಕುಸುಮ ಎಂಬ ನಾಲ್ಕು ಪ್ರಸಂಗಗಳನ್ನೊಳಗೊಂಡ ಕೃತಿ 2016ರಲ್ಲಿ ಲೋಕಾರ್ಪಣೆಗೊಂಡಿದೆ. 1979ರಷ್ಟು ಹಿಂದೆಯೇ ಪ್ರಕಟವಾದ ವಾಸುದೇವ ಭಟ್ಟ ವಿರಚಿತ ವೀರಕೇಸರಿ ವಿಜಯ ಎಂಬ ಪ್ರಸಂಗವನ್ನು ಯಕ್ಷಗಾನ ಕ್ಷೇತ್ರದಲ್ಲಿ ಅಗ್ರಗಣ್ಯ ಮೇಳ ಶ್ರೀ ಧರ್ಮಸ್ಥಳ ಮೇಳದವರು ಹಲವಾರು ಕಡೆ ಪ್ರದರ್ಶನಕ್ಕಾಗಿ ಆಯ್ಕೆ ಮಾಡಿರುವುದು ಅವರ ಪ್ರಸಂಗದ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ.
ಬೇರೆಬೇರೆ ಕ್ಷೇತ್ರಗಳ ಕುರಿತಾಗಿ ಸಣ್ಣಪುಟ್ಟ ಯಕ್ಷಗಾನ ಪ್ರಸಂಗಗಳನ್ನೂ ಯಕ್ಷಗಾನ ಪದಗಳನ್ನೂ ರಚಿಸಿ ಕೊಟ್ಟಿದ್ದರೂ ಅವುಗಳ ಲೆಕ್ಕವಿಟ್ಟವರಲ್ಲ. ನಾಯಿಕಾಪು ಶ್ರೀ ಶಾಸ್ತಾರ ಬನದಲ್ಲಿ ಅವಲಕ್ಕಿ ಪದ ಸೇವೆ ವಿಶೇಷವೆಂಬುದನ್ನರಿತು ಅದಕ್ಕಾಗಿ ಹತ್ತಾರು ಯಕ್ಷಗಾನ ಪದಗಳನ್ನು ಬರೆದುಕೊಟ್ಟಿದ್ದಾರೆ. ಸಾಕ್ಷರತಾ ಆಂದೋಲನದ ಆದಿಕಾಲದಲ್ಲಿ ಯಕ್ಷಗಾನದ ಮೂಲಕ ಪ್ರಚಾರವಾಗಬೇಕೆಂಬ ಬೇಡಿಕೆ ಬಂದಾಗ ಅಕ್ಷರಾಂಬಿಕೆ ಮಹಾತ್ಮೆ ಎಂಬ ಪ್ರಸಂಗ ರಚನೆಯಾಗಿದ್ದರೆ ಯಾವುದೋ ಭಾರತದ ಸ್ವಾತಂತ್ರ್ಯದ ಸುವರ್ಣ ಸಂಭ್ರಮ ಕಾಲದಲ್ಲಿ ಸ್ವರಾಜ್ಯ ವಿಜಯ ಎಂಬ ಪ್ರಸಂಗ ದಿನಬೆಳಗಾಗುವುದರಲ್ಲಿ ರಚನೆ ಮಾಡಿಕೊಟ್ಟ ಚತುರ ಪ್ರಸಂಗಕರ್ತ ವಾಸುದೇವ ಭಟ್ಟರು. ಈಗಲೂ ಇಂದು ಒಂದು ಕಥೆ ಹೇಳಿ ಪ್ರಸಂಗ ಬೇಕಿತ್ತು ಎಂದರೆ ದಿನ ಬಿಟ್ಟು ಬನ್ನಿ ಎಂದು ಸೌಮ್ಯವಾಗಿ ಹೇಳುವ ಅವರು ನಿಗದಿಯಾದ ಹೊತ್ತಿಗೆ ಪ್ರಸಂಗವನ್ನು ಕೈಯಲ್ಲಿಟ್ಟು ಸದ್ದಿಲ್ಲದೆ ಕುಳಿತುಕೊಳ್ಳುವ ನಿಪುಣ ಮತ್ತು ಸಮಯ ನಿಷ್ಠರು.
ವಾಸುದೇವ ಭಟ್ಟರ ಪ್ರಸಂಗ ರಚನಾ ಸಾಮಥ್ರ್ಯವನ್ನು ಕಂಡು ಬೆರಗಾಗಿ ತಲೆದೂಗಿದ ನಾಡಿನ ಹಲವಾರು ಪ್ರತಿಷ್ಠಿತರು ಸನ್ಮಾನ ಮಾಡಿ ಗೌರವಿಸಿದ್ದಾರೆ. ಸೂಡದಲ್ಲಿ ನಡೆದ ಯಕ್ಷ ಕವಿ ಸಮ್ಮೇಳನದಲ್ಲಿ, ಉಡುಪಿಯ ಯಕ್ಷಕಲಾ ಕೂಟ ಅತ್ರಾಡಿ ಎಂಬಲ್ಲಿ, ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ಯಕ್ಷಗಾನ ಸಮ್ಮೇಳನದಲ್ಲಿ ಸನ್ಮಾನಗೊಂಡಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಶನಿನ ಕುಂಬಳೆ ಘಟಕದವರಿಂದ, ಸುರತ್ಕಲ್ ನ ಶೇಣಿ ದಶಮಾನೋತ್ಸವ ಸಮಿತಿ ತಡಂಬೈಲ್ ಮೊದಲಾದವರಿಂದೂ ಶ್ರೀಯುತರು ಸನ್ಮಾನಿತರಾಗಿದ್ದಾರೆ. ಅಂತಹ ಒಬ್ಬ ಅಪ್ರತಿಮ ಕೃತಿಕಾರರನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ  ಸನ್ಮಾನಿಸಲಾಗುವುದು.
           *ಎಂ.ಶಂಕರ ನಂಬಿಯಾರ್:
      ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಎಂ.ಶಂಕರ ನಂಬಿಯಾರ್  ಹಿಂದಿ, ಕನ್ನಡ, ಮಲಯಾಳ, ಇಂಗ್ಲೀಷ್ ಸಹಿತ ಹಲವು ಭಾಷೆಗಳನ್ನು ಕರಗತಗೊಳಿಸಿದ್ದವರು.
1933ರಲ್ಲಿ ಜನಿಸಿದ ಅವರು ಬಿಎ ಪದವಿಯೊಂದಿಗೆ ಬಿಎಡ್ ಮಾಡಿಕೊಂಡು ಹೈಸ್ಕೂಲ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.  ಆರಂಭದಲ್ಲಿ ಪ್ರೈಮರಿ ಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿ ಬಳಿಕ ಸುೀರ್ಘ 29ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.
   ಅಲ್ಲದೇ ಸಹಾಯಕ ವಿದ್ಯಾಕಾರಿಯಾಗಿ, ಮುಖ್ಯ ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೊನೆಯಲ್ಲಿ ಜಿಲ್ಲಾ ವಿದ್ಯಾಕಾರಿಯಾಗಿ ನಿವೃತ್ತಿಯಾಗಿದ್ದರು.  ಆನೇಕ ಪ್ರಶಸ್ತಿಗಳನ್ನು ಶಿಕ್ಷಣ ರಂಗದಲ್ಲಿ ಪಡೆದುಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries