ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ 12ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ವರ್ಣರಂಜಿತ ಮೆರವಣಿಗೆಯು ಬೇಳ ವಿಷ್ಣುಮೂರ್ತಿನಗರದಿಂದ ಹೊರಟು ಬ್ಯಾಂಡ್ ಮೇಳ, ಯಕ್ಷಗಾನ ವೇಷ, ಮುತ್ತುಕೊಡೆ, ಸಿಂಗಾರಿ ಮೇಳ, ಯಕ್ಷಗಾನದ ಕೀಲು ಬೊಂಬೆಗಳ ನರ್ತನದೊಂದಿಗೆ ಪೇಟೆಯ ಮಧ್ಯರಸ್ತೆಯಲ್ಲಿ ಮುಂದುವರಿದು ಸಮ್ಮೇಳನ ನಗರವನ್ನು ತಲುಪಿತು.
ಮೆರವಣಿಗೆಯನ್ನು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅವರು ಉದ್ಘಾಟಿಸಿ,ಗಡಿನಾಡಿನ ಕನ್ನಡ ಶಾಲೆಗಳ ಪಠ್ಯ ಬೋಧನೆಯಲ್ಲಿ ಪ್ರಸ್ತುತ ಎದುರಾಗಿರುವ ಮಹತ್ತರ ಸವಾಲುಗಳಿಗೆ ಪ್ರತ್ಯುತ್ತರ ನೀಡುವಲ್ಲಿ ಸಾಹಿತ್ಯ ಸಮ್ಮೇಳನದ ಮೂಲಕ ಬಲವರ್ಧನೆಗೊಳ್ಳಲಿ. ಕನ್ನಡದ ಅವಗಣನೆಗೆ ಅವಕಾಶ ನೀಡುವ ಹಿತಾಸಕ್ತಿಗೆ ಒಗ್ಗಟ್ಟಿನಿಂದ ಕನ್ನಡಿಗರು ಹೋರಾಟದಹಾದಿ ಹಿಡಿಯಬೇಕು ಎಂದು ತಿಳಿಸಿದರು.
ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ.ಪಿ.ಶ್ರೀಕೃಷ್ಣ ಭಟ್ ಅವರನ್ನು ಕರೆತರಲಾಯಿತು. ಕಸಾಪ ಅಧ್ಯಕ್ಷ ಎಸ್.ವಿ.ಭಟ್, ಸಮ್ಮೇಳನದ ಅಧ್ಯಕ್ಷರ ಧರ್ಮಪತ್ನಿ ಜೊತೆಗಿದ್ದರು. ಮೆರವಣಿಗೆಯುದ್ದಕ್ಕೂ ಕನ್ನನಡದ ಸಂದೇಶ ಹೊತ್ತ ಫಲಕಗಳು, ಘೋಷಣೆಗಳು ಮುಗಿಲು ಮುಟ್ಟಿತು. ನೂರಾರು ವಿದ್ಯಾರ್ಥಿಗಳು, ಸಾಹಿತ್ಯ ಪ್ರೇಮಿಗಳು, ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.
ನೀರ್ಚಾಲು ಪೇಟೆಯಲ್ಲಿ ಮೆರವಣಿಗೆಸಾಗುವಾಗ ಸ್ಥಳೀಯ ರುದ್ರ ಫ್ರೆಂಡ್ಸ್ ಕ್ಲಬ್ ಸದಸ್ಯರು ಶರಬತ್ತು ವಿತರಿಸಿ ದಣಿವಿಗೆ ಆಸರೆಯಾಗಿ ಶ್ಲಾಘನೆಗೊಳಗಾದರು. ಜಯದೇವ ಖಂಡಿಗೆ, ಕಸಾಪ ಕಾರ್ಯದರ್ಶಿಗಳಾದ ರಾಮಚಂದ್ರ ಭಟ್ ಧರ್ಮತ್ತಡ್ಕ, ನವೀನಚಂದ್ರ ಮಾನ್ಯ, ಸುಂದರ ಬಾರಡ್ಕ, ಮೀಯಪದವು ವಿದ್ಯಾವರ್ಧಕ ಶಾಲಾ ಪ್ರಬಂಧಕ ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಗುರುಮೂರ್ತಿ ನಾಯ್ಕಾಪು, ಶೇಖರ ಶೆಟ್ಟಿ ಕುಳ್ಯಾರು, ರವೀಂದ್ರನಾಥ ಬಲ್ಲಾಳ್ ಕೆ.ಆರ್, ಸುಬ್ರಹ್ಮಣ್ಯ ಭಟ್, ಮಹಾಲಿಂಗೇಶ್ವರ ಭಟ್ ಎಂ.ವಿ., ಡಾ.ಕೆ.ಕಮಲಾಕ್ಷ, ಪ್ರೊ.ಪಿ.ಎನ್.ಮೂಡಿತ್ತಾಯ, ಡಾ.ರತ್ನಾಕರ ಮಲ್ಲಮೂಲೆ, ಸೌಮ್ಯಾ ಪ್ರಸಾದ್ ಕಿಳಿಂಗಾರು, ಸುಕುಮಾರ ಆಲಂಪಾಡಿ, ನ್ಯಾಯವಾದಿ ಥೋಮಸ್ ಡಿಸೋಜಾ, ಆಯಿಷಾ ಎ.ಎ.ಪೆರ್ಲ, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಗೋವಿಂದ ಬಳ್ಳಮೂಲೆ, ಶೇಖರ, ಶಾಮಪ್ರಸಾದ ಸರಳಿ, ಸುಬ್ಬಣ್ಣ ಶೆಟ್ಟಿ, ಎಸ್.ನಾರಾಯಣ, ಶಿವರಾಮ ಭಟ್ ಕಾರಿಂಜೆ. ಹಳೆಮನೆ,ಮೊಹಮ್ಮದಾಲಿ ಪೆರ್ಲ, ನರಹರಿ ಮಾಸ್ತರ್ ಕಳತ್ತೂರು, ಗಣೇಶ್ ಪ್ರಸಾದ್ ಪಿ, ವಾಣೀ ಪಿ.ಎಸ್, ಶೈಲಜಾ ಎ, ಗಾಯತ್ರೀ ಮೊದಲಾದವರು ನೇತೃತ್ವ ವಹಿಸಿದ್ದರು.