ಬದಿಯಡ್ಕ: ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಉತ್ಸವದ ಅಂಗವಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಇತ್ತೀಚೆಗೆ ನಡೆಯಿತು. ಸುಧನ್ವ ಮೋಕ್ಷ ಎಂಬ ಕಥಾ ಭಾಗವನ್ನು ಸೂರ್ಯನಾರಾಯಣ ಪದಕಣ್ಣಾಯರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಮಲ್ಲಿಕಾ ಕಲಾವೃಂದವು ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಧ್ಯಾಹ್ನದ ಸುಡುಬಿಸಿಲಿಗೂ ಸೇರಿದ್ದ ಪ್ರೌಢಸಭೆ, ಯಕ್ಷಕಿನ್ನರರ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿತು. ಸಂಸ್ಥೆಗೆ ಅವಕಾಶ ನೀಡಿದ್ದಕ್ಕಾಗಿ ಶ್ರೀಶ ಕುಮಾರ ಪಂಜಿತ್ತಡ್ಕ ಅವರು ವಂದಿಸಿದರು. ಕಲಾವಿದರನ್ನು ಗೌರವಿಸಿದ ಸುಧಾಕರ ರಾವ್ ಪೇಜಾವರ ಅವರು, ರಂಗಸಿರಿಯ ಕಾರ್ಯವನ್ನು ಕೊಂಡಾಡಿದರು. ಕಾಸರಗೋಡು ಇಂದಿಗೂ ಭಾವನಾತ್ಮಕವಾಗಿ ಕರ್ನಾಟಕದ ಭಾಗವಾಗಿದೆ. ಭೌಗೋಳಿಕವಾಗಿ ಕೇರಳದಲ್ಲಿದ್ದರೂ ಕನ್ನಡ ಸಂಸ್ಕøತಿಅಯ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ರಂಗಸಿರಿಯ ಚಟುವಟಿಕೆಗಳು ಶ್ಲಾಘನೀಯ ಎಂದರು.
ಹಂಸಧ್ವಜನಾಗಿ ಪ್ರಭಾವತಿ ಕೆದಿಲಾಯ ಪುಂಡೂರು, ಸುಧನ್ವನಾಗಿ ವಿದ್ಯಾ ಕುಂಟಿಕಾನಮಠ, ಪ್ರಭಾವತಿಯಾಗಿ ಸುಪ್ರೀತಾ ಸುಧೀರ್ ಮುಳ್ಳೇರಿಯ, ಅರ್ಜುನನಾಗಿ ಶ್ರೀಶ ಕುಮಾರ ಪಂಜಿತ್ತಡ್ಕ, ಶ್ರೀಕೃಷ್ಣನಾಗಿ ಅಮಿತ ಅವರು ಪಾತ್ರಗಳನ್ನು ಮನಮುಟ್ಟುವಂತೆ ಅಭಿನಯಿಸಿ ಮೆಚ್ಚುಗೆಗಳಿಸಿದರು. ಭಾಗವತರಾಗಿ ವಾಸುದೇವ ಕಲ್ಲೂರಾಯ ಮಧೂರು, ಚೆಂಡೆಯಲ್ಲಿ ಕೃಷ್ಣರಾಜ ಭಟ್ ನಂದಳಿಕೆ, ಮದ್ದಳೆಯಲ್ಲಿ ಸೂರ್ಯನಾರಾಯಣ ಪದಕಣ್ಣಾಯ, ಚಕ್ರತಾಳದಲ್ಲಿ ಸುಧೀರ್ ಕುಮಾರ್ ರೈ ಮುಳ್ಳೇರಿಯ ಅವರು ಮುಮ್ಮೇಳಕ್ಕೆ ಪೂರಕವಾಗಿ ಉತ್ತಮ ಹಿಮ್ಮೇಳ ನೀಡಿದರು. ಮೋಹನ ಕೊಕ್ಕರ್ಣೆ ನೇಪಥ್ಯದಲ್ಲಿ ಸಹಕರಿಸಿದರು.