ಪಂಪ: ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶದಿಂದ ಕೇರಳ ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರತಿಭಟನಾಕಾರರಿಂದ ಹಲ್ಲೆಗೊಳಗಾದರೂ ಅಳುತ್ತಲೇ ಕ್ಯಾಮರಾ ತೆಗೆಯುತ್ತಿದ್ದ ಪತ್ರಕರ್ತೆಯೊಬ್ಬರ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಿರುವನಂತಪುರದಲ್ಲಿ ಕೈರಳಿ ಟಿವಿ ಚಾನೆಲ್ ಕ್ಯಾಮರಾಮನ್ ಶಜಿಲ್ಲಾ ಅಬ್ಹುಲ್ ರೆಹಮಾನ್ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿ, ಕ್ಯಾಮರಾ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆಕೆ ಅಳುತ್ತಲೇ ತನ್ನ ಕರ್ತವ್ಯ ನಿರ್ವಹಿಸಿದ್ದು, ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಯದಿಂದ ಅಳುತ್ತಿರಲಿಲ್ಲ. ಅಸಹಾಯಕತೆಯಿಂದಾಗಿ ಅಳುತ್ತಿದೆ ಎಂದು ನಂತರ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಐದಾರು ಮಂದಿ ಹಿಂದಿನಿಂದ ಬಂದು ಕ್ಯಾಮರಾ ಕಸಿದುಕೊಂಡಾಗ ಏನು ಮಾಡಲು ಸಾಧ್ಯ, ಅವರು ಹಲ್ಲೆ ನಡೆಸಿದ್ದರಿಂದ ಕೆಳಗೆ ಬೀಳಬೇಕಾಯಿತು, ಇದರಿಂದ ಹಿಂದೆ ಚಿತ್ರೀಕರಿಸಿದ ದೃಶ್ಯಗಳೆಲ್ಲಾ ಹಾಳಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ಶಜಿಲ್ಲಾ ಅಬ್ಹುಲ್ ರೆಹಮಾನ್ ಅವರ ಧೈರ್ಯ ಹಾಗೂ ಕರ್ತವ್ಯನಿಷ್ಠೆಗೆ ಟ್ವೀಟರ್ ನಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.