ಕುಂಬಳೆ: ಸರೋವರ ಕ್ಷೇತ್ರವೆಂದೇ ಪ್ರಸಿದ್ದವಾಗಿರುವ ಇತಿಹಾಸ ಖ್ಯಾತಿವೆತ್ತ ಅನಂತಪುರ ಶ್ರೀಅನಂತಪದ್ಮನಾಭ ದೇವಾಲಯದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಭಟ್ ಎಂ.ವಿ. ಆಯ್ಕೆಯಾಗಿದ್ದಾರೆ.
ಗಡಿನಾಡ ಕನ್ನಡ ಹೋರಾಟ ಸಮಿತಿಯ ನೇತಾರನಾಗಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ನಿಕಟ ಪೂರ್ವ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವಿಗಳು. ಅಪ್ಪಟ ಕನ್ನಡಾಭಿಮಾನಿಯಾದ ಮಹಾಲಿಂಗೇಶ್ವರ ಭಟ್ ಸಾಮಾಜಿಕ,ಸಾಹಿತ್ತಿಕ, ಕನ್ನಡ ಹೋರಾಟ, ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮದೇ ಕೊಡುಗೆಗಳ ಮೂಲಕ ಗುರುತಿಸಿಕೊಂಡಿದ್ದಾರೆ.
ಶ್ರೀಕ್ಷೇತ್ರ ಅನಂತಪುರವು ಜಿಲ್ಲೆಯ ಪ್ರಧಾನ ಆರಾಧನಾ ಕೇಂದ್ರವಾಗಿ, ಜೊತೆಗೆ ಪ್ರವಾಸಿ ತೀರ್ಥ ಕ್ಷೇತ್ರವಾಗಿ ಇತ್ತೀಚೆಗೆ ಹೆಚ್ಚು ಗಮನ ಸೆಳೆಯುತ್ತಿದೆ. ಕಡು ಶರ್ಕರದಿಂದ ನಿರ್ಮಿತವಾದ ಇಲ್ಲಿನ ಶ್ರೀಅನಂತಪದ್ಮನಾಭ ನಂಬಿದ ಭಜಕರ ಸಂಕಷ್ಟ ನಿವಾರಣೆಯಲ್ಲಿ ಕಾರಣಿಕದ ಮೂಲಕ ಪ್ರಸಿದ್ದಿ ಪಡೆದಿದ್ದು, ಜೊತೆಗೆ ಇಲ್ಲಿಯ ಸರೋವರದಲ್ಲಿರುವ ಬಬಿಯಾ ಹೆಸರಿನ ದೇವರ ಮೊಸಳೆ ಪ್ರಧಾನ ಆಕರ್ಷಣೆಯಾಗಿ ಗಮನ ಸೆಳೆದಿದೆ. ದಿನನಿತ್ಯ ನೂರಾರು ಭಕ್ತರು ಕ್ಷೇತ್ರ ಸಂದರ್ಶನ ನಡೆಸುತ್ತಿದ್ದು,ತನ್ನದೇ ವಿಶಿಷ್ಟ ಶೈಲಿಯ ಆದರೋಪಚಾರ, ದೇವ ಪ್ರಾರ್ಥನೆಗಳಿಂದ ಭಕ್ತರಿಗೆ ಹೆಚ್ಚು ಪ್ರೀಯವಾಗಿದೆ.