ಕಾಸರಗೋಡು: ಬಿದಿರಿನ ಸಸಿಗಳನ್ನು ನೆಟ್ಟು ಬೆಳೆಸಿ ಜಿಲ್ಲೆಯ ಪ್ರಕೃತಿ ಪರಿಸರದ ಸಮಸ್ಯೆಗಳನ್ನು ಇಲ್ಲವಾಗಿಸುವ ಬೃಹತ್ ಯೋಜನೆ ಸಿದ್ಧವಾಗಿದೆ. ಕಾಸರಗೋಡು ಜಿಲ್ಲಾಡಳಿತ ಮತ್ತು ಮಂಜೇಶ್ವರ ಬ್ಲಾಕ್ ಪಂಚಾಯತುಗಳಲ್ಲಿ ಈ ಯೋಜನೆಗೆ ರೂಪುರೇಶೆ ಸಿದ್ದಪಡಿಸಲಾಗಿದ್ದು ಮುಂದಿನ ಐದು ತಿಂಗಳ ಒಳಗಾಗಿ ಜ್ಯಾರಿಗೆ ಬರಲಿದೆ. ಬಿದಿರು ನೆಡುವಿಕೆಯಿಂದ ಭೂಮಿಯ ಅಂತರ್ಜಲ ಮಟ್ಟ ಗಣನೀಯ ಹೆಚ್ಚಳವಾಗಲಿದೆ ಮಾತ್ರವಲ್ಲ ಬಿದಿರು ಬೆಳೆಸಲ್ಪಡುವ ಪ್ರತಿ ಗ್ರಾ.ಪಂಗಳಿಗೂ ಇದರಿಂದ ವರಮಾನ ಸಾಧ್ಯವಿದೆ ಎಂದು ಹೇಳಲಾಗಿದೆ. ಯೋಜನೆಯು ಜೂ. 5 ರಂದು ನಡೆಯುವ ಅಂತಾರಾಷ್ಟ್ರೀಯ ಪರಿಸರ ದಿನದಂದು ಉದ್ಘಾಟನೆಗೊಳ್ಳಲಿದ್ದು, ಬಿದಿರು ನೆಡುವ ಕಾರ್ಯಕ್ಕೆ ಚಾಲನೆ ಸಿಗಲಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರ ಮತ್ತು ಕಾಸರಗೋಡು ಕ್ಷೇತ್ರದ ಪ್ರತಿ ಗ್ರಾ.ಪಂಗಳಲ್ಲಿ ಜ್ಯಾರಿಗೆ ಬರಲಿರುವ ಯೋಜನೆಯ ಬಗ್ಗೆ ತಜ್ಞರ ತಂಡದಿಂದ ಬಿದಿರು ನೆಡುವ ಮತ್ತು ಪೋಷಿಸುವ ಬಗ್ಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ಕೃಷಿ ಇಲಾಖೆ, ಗ್ರಾಮ ಪಂಚಾಯತು, ಗ್ರಾಮಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆಗಳ ಜಂಟಿ ಸಹಭಾಗಿತ್ವದಲ್ಲಿ ಬಿದಿರು ನೆಡುವ ಬೃಹತ್ ಯೋಜನೆ ಮುನ್ನಡೆಯಲಿದೆ.
ಬಿದಿರಿನ ಪ್ರಾಮುಖ್ಯತೆ?
ಪ್ರಕೃತಿ ಮತ್ತು ಪರಿಸರದ ಅಸಮತೋಲನವನ್ನು ಇಲ್ಲವಾಗಿಸುವ ಸದುದ್ದೇಶದಿಂದ ಬಿದಿರನ್ನು ನೆಟ್ಟು ಬೆಳೆಸುವ ಬೃಹತ್ ಯೋಜನೆಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಒಂದು ಬಿದಿರಿನಿಂದ ಪ್ರತೀ ವರ್ಷ 22 ಕಿ.ಲೋ ತೂಕದ ಬಿದಿರನ್ನು ಪಡೆಯಬಹುದಾಗಿದೆ. ಎರಡು ಬ್ಲಾಕ್ ಗಳಲ್ಲಿ ಪ್ರಥಮ ವರ್ಷದಲ್ಲಿ ಒಟ್ಟಾರೆ 3 ಲಕ್ಷ ಬಿದಿರುಗಳನ್ನು ನೆಡುವ ಯೋಜನೆ ಇದಾಗಿದೆ. ವರ್ಷಕ್ಕೆ ಒಟ್ಟು 22 ಲಕ್ಷದಷ್ಟು ಜೈವಿಕ ವಸ್ತು ಬಿದಿರಿನಿಂದ ಭೂಮಿಗೆ ಸೇರುತ್ತದೆ. ಹೀಗೆ ಬೀಳುವ ಬಿದಿರಿನ ಎಲೆ ತೊಗಟೆಯಿಂದ ಕೆಮ್ಮಣ್ಣಿನ ಭೂನೆಲವು ಫಲ ಸಮೃದ್ಧಿಯಾಗುತ್ತದೆ. ರಾಜ್ಯದಲ್ಲೇ ಅತೀ ಹೆಚ್ಚು ಪಾಳು ಬಾವಿಗಳಿರುವ ಕಾಸರಗೋಡು ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳಕ್ಕೂ ಬಿದಿರುವ ಬೆಳೆ ಸಹಾಯಕವಾಗಲಿದ್ದು, ಪಾಳು ಬಾವಿಗಳಲ್ಲಿ ನೀರು ವೃದ್ಧಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ. ನೀರು ಸಿಗದೆ ಪಾಳು ಬಿದ್ದಿರುವ ಸಾವಿರದಷ್ಟು ಬಾವಿಗಳು ಮತ್ತು ಬೋರ್ ವೆಲ್ಗಳಿರುವ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಹೆಚ್ಚು ನೀರು ಲಭ್ಯತೆಯು ಬಿದಿರು ಬೆಳೆಯಿಂದ ಸಾಧ್ಯವಿದೆ. ಬಿದಿರಿನ ಬೇರುಗಳು ಸುಲಭವಾಗಿ ಗಟ್ಟಿ ಮಣ್ಣಿನ ಆಳಕ್ಕೆ ಇಳಿಯುತ್ತವೆ, ಇದರಿಂದ ಮಳೆಗಾಲದ ಅವಧಿಯಲ್ಲಿ ಹೆಚ್ಚಿನ ನೀರು ಭೂಮಿಯ ಅಡಿಪದರಕ್ಕೆ ಇಳಿಯುವಂತೆ ಆಗುತ್ತದೆ. ಹಲವು ವರ್ಷಗಳ ಕಾಲ ನಡೆಯುವ ಧನಾತ್ಮಕ ಪ್ರಕ್ರಿಯೆಯು ಬಿದಿರಿನ ಮೂಲಕ ಅಂತರ್ಜಲ ಹೆಚ್ಚಳಕ್ಕೂ ರಹದಾರಿಯಾಗಿದೆ. ಇದರಿಂದ ಜಿಲ್ಲೆಯಲ್ಲಿ ನೀರಿನ ಅಲಭ್ಯತೆಯನ್ನು ಸಾಕಷ್ಟು ಕಡಿಮೆ ಮಾಡಬಹುದಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಮಣ್ಣಿನಲ್ಲಿರುವ ಹಲವು ವಿಷಕಾರಿ ಲವಣಾಂಶಗಳನ್ನು ಹೀರುವ ಬಿದಿರಿನ ಗಿಡಗಳು ಭೂ ಶುದ್ಧಿಗೂ ಕಾರಣವಾಗಿವೆ. ಒಂದು ವಾರ್ಡಿನಲ್ಲಿ ಸರಾಸರಿ 1500 ಬಿದಿರು ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದೆ. ಯೋಜನೆಯನ್ನು ಸಾಕಾರಗೊಳಿಸಲು ಪ್ರತಿ ಗ್ರಾ.ಪಂ ಅಧೀನದಲ್ಲಿ ನರ್ಸರಿಗಳನ್ನು ಆರಂಭಿಸಲಾಗುವುದಾಗಿ ಕೃಷಿ ಇಲಾಖೆ ತಿಳಿಸಿದೆ. ಒಟ್ಟು 60,000 ಬಿದಿರಿನ ಗಡ್ಡೆಗಳನ್ನು ಅರಣ್ಯ ಇಲಾಖೆ ಮೂಲಕ ಪಡೆಯಲಾಗುತ್ತದೆ.
ಉದ್ಯೋಗ ಖಾತರಿ ಸದಸ್ಯರಿಂದ ಗಿಡ ನೆಡುವಿಕೆ:
ಜಿಲ್ಲಾಧಿಕಾರಿ ಡಾ. ಡಿ ಸಜಿತ್ ಬಾಬು ಮುಂದಾಳುತ್ವದಲ್ಲಿ ಯೋಜನೆಯನ್ನು ಮುನ್ನಡೆಸಲಾಗುತ್ತಿದೆ. ಎರಡು ತಾಲೂಕುಗಳ 13 ಗ್ರಾ.ಪಂಗಳಲ್ಲಿ ಯೋಜನೆಯ ಜ್ಯಾರಿ ಉದ್ದೇಶವನ್ನು ಇರಿಸಲಾಗಿದ್ದು, ಬಿದಿರು ನೆಡುವ ನಿರ್ದಿಷ್ಟ ಸ್ಥಳಗಳನ್ನು ಗೊತ್ತು ಪಡಿಸುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ, ಈ ನಿಮಿತ್ತ ಸ್ಥಳದ ನಕ್ಷೆಯನ್ನು ತಯಾರಿಸಲಾಗಿದೆ. ವಿವಿಧ ಪ್ರದೇಶಗಳಲ್ಲಿನ ಪರಂಬೋಕು ಹಾಗೂ ಸರಕಾರಿ ಸ್ವಾಮ್ಯದ ಬಂಜರು ಪ್ರದೇಶಗಳಲ್ಲಿ ಬಿದಿರನ್ನು ಬೆಳೆಸಲಾಗುವುದು ಎಂದು ಅಧಿಕೃತರು ತಿಳಿಸಿದ್ದಾರೆ. ಬಿದಿರು ಯಾವುದೇ ಭೌಗೋಳಿಕತೆಯಲ್ಲೂ ಬೆಳೆಯುವ ಗುಣ ಹೊಂದಿರುವುದು ಇದರ ವಿಶೇಷತೆಯಾಗಿದೆ. ಪ್ರಸ್ತುತ ಜಿಲ್ಲೆಯ ಉತ್ತರದಲ್ಲಿರುವ ಹಲವು ಕಲ್ಲು ಪಾರೆ ಪ್ರದೇಶಗಳಲ್ಲಿ ಇದನ್ನು ಬೆಳೆಸುವ ಸದುದ್ದೇಶವಿರಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಬಿದಿರು ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದ್ದು, ಮಳೆಗಾಲದ ಸಮಯ ಉದ್ಯೋಗ ಖಾತರಿ ಸದಸ್ಯರಿಗೂ ಕೆಲಸ ಸಿಗಲಿದೆ. ಬಿದಿರು ಮೌಲ್ಯವರ್ಧಿತ ಉತ್ಪನ್ನವಾದ್ದರಿಂದ ಆಹಾರ ವಸ್ತುವಾಗಿ, ಕೊಳಲುನಿರ್ಮಾಣಕ್ಕೆ, ಕರಕುಶಲ ವಸ್ತು ತಯಾರಿಕೆ ಸಹಿತ ಕಟ್ಟಡ, ಸೇತುವೆ ನಿರ್ಮಾಣದಲ್ಲೂ ಇದನ್ನು ಬಳಸಬಹುದಾಗಿದೆ.
ಏನಂತಾರೆ:
ಜಿಲ್ಲೆಯಲ್ಲಿರುವ ಸಾವಿರ ಎಕರೆಗಿಂತ ಹೆಚ್ಚಿನ ಭೂ ಪ್ರದೇಶ ಕಲ್ಲು ಪಾರೆಯಿಂದಾವೃತವಾಗಿದ್ದು, ಕೃಷಿ ಯೋಗ್ಯವಲ್ಲದ ರೀತಿಯಲ್ಲಿದೆ. ಇಂತಹ ಪ್ರದೇಶಗಳಲ್ಲಿ ನೆಡಲ್ಪಡುವ ಬಿದಿರಿನ ಸಸಿಗಳು ಪರಿಸರ ಸಂರಕ್ಷಣೆ ಸಹಿತ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಬೇಸಿಗೆ ಕಾಲದಲ್ಲಿ ಜಿಲ್ಲೆಯನ್ನು ಆವರಿಸುವ ತೀವ್ರ ಬರಗಾಲ ಮತ್ತು ಜಲ ಕ್ಷಾಮವನ್ನು ಬಹುತೇಕ ಇಲ್ಲವಾಗಿಸಲು ಬಿದಿರು ಬೆಳೆ ಸಹಾಯಕ ಎಂಬುದರಲ್ಲಿ ಸಂಶಯವಿಲ್ಲ.
ಡಾ.ಡಿ.ಸಜಿತ್ ಬಾಬು,
ಕಾಸರಗೋಡು ಜಿಲ್ಲಾಧಿಕಾರಿ