ಉಪ್ಪಳ: ತುಳುನಾಡಿನ ದೈವಾರಾಧನೆಯಲ್ಲಿ ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರ ಗರಡಿಗಳಿಗೆ ಕರಾವಳಿಯಾದ್ಯಂತ ಅದರೆ ಮಹತ್ವ ನಂಬಿಕೆ ಶತಶತಮಾನಗಳಿಂದ ಜನಜನಿತವಾಗಿದೆ. "ಸತ್ಯೊಡು ಬತ್ತ್‍ಂಡ ತಿಗಲೆಡ್ ಸಾದಿ ಕೊರ್ಪ, ತತ್ತ್‍ದ್ ಬತ್ತ್‍ಂಡ ಸುರಿಯೊಡು ಸಾದಿ ಕೊರ್ಪ, ನಂಬಿನಕ್ಲೆಗ್ ಇಂಬು ಕೊರ್ಪ ಸತ್ಯಗೆಂದಾದ್ ಕೊರ್ಪ" ಎಂಬ ಅಭಯದ ನುಡಿಯೊಂದಿಗೆ ಉಡುಪಿ, ಮಂಗಳೂರು, ಕಾಸರಗೋಡು ಸಹಿತ ತುಳುನಾಡಿನಲ್ಲಿ ಸುಮಾರು 230 ಕ್ಕಿಂತಲೂ ಅಧಿಕ ಗರಡಿಗಳಲ್ಲಿ ಆರಾಧ್ಯ ದೈವಗಳಾಗಿ ನಂಬಿ ಬಂದ ಭಕ್ತರ ಕಷ್ಟಕೋಟಲೆಗಳನ್ನು ನಿವಾರಿಸಿ ಅಭೀಷ್ಟಗಳನ್ನು ಪೂರೈಸಿಕೊಂಡಿರುವ ಸತ್ಯಮೂರ್ತಿಗಳಾಗಿದ್ದಾರೆ ಶ್ರೀ ಕೋಟಿಚೆನ್ನಯರು. ಅದರಲ್ಲಿ ಚಿಪ್ಪಾರು ಅಮ್ಮೇರಿ ಗರಡಿಯೂ ಒಂದು.
ಕ್ಷೇತ್ರದ ಇತಿಹಾಸ:
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಪೈವಳಿಕೆ ಪಂಚಾಯತು ವ್ಯಾಪ್ತಿಗೊಳಪಟ್ಟ ಹಚ್ಚಹಸಿರಿನಿಂದ ಕಂಗೊಳಿಸುವ ಗ್ರಾಮವೇ ಚಿಪ್ಪಾರು. ಈ ಗ್ರಾಮದ ಅಮ್ಮೇರಿ ಎಂಬ ಸ್ಥಳದಲ್ಲಿ ಪುರಾತನ ಕಾಲದಿಂದಲೇ ಪ್ರತಿಷ್ಠಿತ ಅಮ್ಮೇರಿ ಬಿಲ್ಲವ ತರವಾಡು ಮನೆತನವು ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳನ್ನು ಆರಾಧಿಸಿಕೊಂಡು ಬರುವ ಕಾರಣಿಕ ಶಕ್ತಿ ಕ್ಷೇತ್ರವಾಗಿದೆ. ಸುಮಾರು 57 ವರ್ಷಗಳ ಹಿಂದೆ ಕರಿಯ ಪೂಜಾರಿ ಎಂಬವರು ಇದೇ ಮನೆತನದ ಹಿರಿಯರಾಗಿದ್ದ ಸಂದರ್ಭದಲ್ಲಿ ಈ ಮನೆಯಲ್ಲಿ ಆರಿದ ದೀಪ ಉರಿದುದೂ, ಬೇಯಿಸಿದ ಭತ್ತ ಮೊಳಕೆಯೊಡೆದಂತೆ ಕೌತುಕದ ವಿದ್ಯಮಾನಗಳು ಗೋಚರಿಸಿದ ಕಾರಣ ಅಲ್ಲಿಗೆ ಕಾರಣಿಕ ಅವಳಿ ಪುರುಷರಾದ ಶ್ರೀ ಕೋಟಿಚೆನ್ನಯರು ಆಗಮಿಸಿದ ದೃಷ್ಠಾಂತ ಸ್ಪಷ್ಟಗೊಂಡಿತು. ಹಿರಿಯರಾದ ಕರಿಯ ಪೂಜರಿಯವರು ಬಂಧುಮಿತ್ರರನ್ನು ಸೇರಿಸಿಕೊಂಡು ಚಪ್ಪರ ಹಾಕಿಸಿ ಶ್ರೀ ಬೈದೇರುಗಳಿಗೆ ನೇಮೋತ್ಸವವನ್ನು ನಡೆಸಿದರು. ನನ್ನ ಬಲಭಾಗದಲ್ಲಿ ಬೈದರ್ಕಳರನ್ನು ಪ್ರತಿಷ್ಟಾಪಿಸಿ ಆರಾಧಿಸಿ ಎಂದು ಧರ್ಮದೈವ ಶ್ರೀ ಧೂಮಾವತಿಯ ಅಪ್ಪಣೆಯಂತೆ ಅಮ್ಮೇರಿ ಮನೆಯ ಬಲಭಾಗದ ಎತ್ತರದ ಸ್ಥಳದಲ್ಲಿ ಗರಡಿ ನಿರ್ಮಾಣದ ಕಾರ್ಯವನ್ನು ಕೈಗೊಂಡರು. ಮುಂದೆ ವಯೋಸಹಜವಾಗಿ ಕರಿಯ ಪೂಜಾರಿಯವರು ಮರಣಿಸಿದರೂ ಅವರ ಮಕ್ಕಳು ಗರಡಿ ನಿರ್ಮಾಣದ ಕಾರ್ಯವನ್ನು ಪೂರ್ತಿಗೊಳಿಸಿ ನೇಮೋತ್ಸವಗಳನ್ನು ಮುನ್ನಡೆಸುತ್ತಾ ಬಂದರು. ಕೆಲ ವರ್ಷಗಳ ಹಿಂದೆ ಶ್ರೀ ಕೊಡಮಣಿತ್ತಾಯ ದೈವದ ಸಾನಿಧ್ಯವೂ ಕೂಡಾ ಕಂಡು ಬಂದ ಹಿನ್ನಲೆಯಲ್ಲಿ ಶ್ರೀ ಬೈದರ್ಕಳರೊಂದಿಗೆ ಸದ್ರಿ ದೈವಕ್ಕೂ ಕೂಡ ನೇಮೋತ್ಸವ ನಡೆಯುತ್ತಿದೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಗರಡಿಯು ತೀರಾ ಜೀರ್ಣಾವಸ್ಥೆಯಲ್ಲಿದ್ದುದರಿಂದ ಗರಡಿ ಮನೆತನದವರು ಹಾಗೂ ಊರ ಪರವೂರ ಭಕ್ತಬಾಂಧವರು ಅಷ್ಟಮಂಗಲ ಚಿಂತನೆ ನಡೆಸಿ ಜೀಣೋದ್ಧಾರ ಸಮಿತಿಯೊಂದನ್ನು ರೂಪೀಕರಿಸಿ ಶ್ರೀಕ್ಷೇತ್ರದ ಪುನರ್ ನಿರ್ಮಾಣದ ಕಾರ್ಯಕೈಗೊಂಡುದುದರ ಫಲವಾಗಿ ಜನವರಿ 18ರಿಂದ 20ರವರೆಗೆ ವಿವಿಧ ವೈದಿಕ ಧಾರ್ಮಿಕ ಸಭಾ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ವಿಜೃಂಭಣೆಯಿಂದ ಜರಗಲಿರುವುದು.
ಚಿಪ್ಪಾರು ಅಮ್ಮೇರಿ ಗರಡಿಯ ಭೂಸಾದೃಶ್ಯ:
ಚಿಪ್ಪಾರು ಅಮ್ಮೇರಿ ಬ್ರಹ್ಮಬೈದರ್ಕಳ ಗರಡಿಯು ಸುಂದರ ಭೂ ಪ್ರಕೃತಿಯ ಮಧ್ಯೆ ಸೂರ್ಯ ತೇಜಸ್ಸಿನಂತೆ ಕಂಗೊಳಿಸುತ್ತಾ ನಿಂತಿದೆ. ಸದಾ ಹಸಿರಿನಿಂದ ಕಂಗೊಳಿಸುವ ಗದ್ದೆ, ತೆಂಗು, ಕಂಗು, ತೋಟ ಕೆರೆ ತೊರೆ, ಬೆಟ್ಟಗುಡ್ಡಗಳ ಮಧ್ಯೆ ಸುಂದರವಾದ ದಿಬ್ಬದ ನಡುವಲ್ಲಿ ಮೈವೆತ್ತುಕೊಂಡಿದೆ. ಗರಡಿಯ ದಕ್ಷಿಣ ಪಾಶ್ರ್ವದಲ್ಲಿ ವಿಶಾಲವಾದ ಗೋಪುರವು ದಶಕಗಳ ಹಿಂದೆಯೇ ನಿರ್ಮಾಣಗೊಂಡಿತ್ತು. ಅದರ ಹಿಂಬದಿ ಅಂದರೆ ದಕ್ಷಿಣಕ್ಕೆ ಸುಮಾರು ಮೂವತ್ತು ಮೀಟರಿನಷ್ಟು ಕೆಳಗೆ ಪೂರ್ವದಿಂದ ಪಶ್ಚಿಮಕ್ಕೆ ಹಂತಹಂತದಲ್ಲಿ ಕೆಳಮುಖವಾಗಿ ಚಾಚಿರುವ ವಿಶಾಲವಾದ ಬಾಕಿಮಾರು ಗದ್ದೆಗಳಿವೆ. ಗರಡಿ ಇಳಿದ ಶ್ರೀ ಬೈದೇರುಗಳ ನೇಮೋತ್ಸವವು ಈ ಗದ್ದೆಗಳಲ್ಲಿ ನಡೆಯುತ್ತದೆ. ಈ ಗದ್ದೆಗಳನ್ನು ವೀಕ್ಷಿಸಿದಾಗ ನಮಗೆ ಕಂಡು ಬರುವ ವಿಶೇಷತೆ ಏನೆಂದರೆ ಗದ್ದೆಯ ಒಂದು ಹುಣಿಯಲ್ಲಿ ಎರಡು ತಾರಿ(ತಾಳೆಮರ)ಗಳು ಅವಳಿಗಳಂತೆ ತೀರಾ ಹತ್ತಿರ ಹತ್ತಿರವಿದ್ದರೆ ಇನ್ನೊಂದು ತಾರಿಯು ಗದ್ದೆಯ ಎದುರು ಭಾಗದ ಇನ್ನೊಂದು ಹುಣಿಯಲ್ಲಿದೆ. ಇದು ಬಹುಷ ಇಲ್ಲಿ ನೇಮ ನಡೆಯುವ ಮೂವರು ಬೈದೇರುಗಳ ಸಂಕೇತವೂ ಆಗಿರಲೂಬಹುದು. ತುಳು ಜನಪದ ನಂಬಿಕೆ ಪ್ರಕಾರ ಕೋಟಿಚೆನ್ನಯರ ಸೋದರ ಬಾವ( ತಂದೆ ತಂಗಿಯ ಮಗ) ಕುಜುಂಬ ಕಾಂಜನು ಅವರನ್ನು ಅಣಕಿಸಿದನೆಂದೂ, ಆಕಾರಣಕ್ಕಾಗಿ ಅವನನ್ನು ಕೋಟಿಚೆನ್ನಯರು ಅವಸಾನಗೊಳಿಸಿದರೆಂದೂ, ಅವನ ತಪ್ಪಿನ ಅರಿವಾಗಿ ಪ್ರಾಯಶ್ಚಿತ್ತ ಬೇಡಿ ಕೊಂಡಿದುದರ ಸಲುವಾಗಿ ಅವನಿಗೆ ಕ್ಷಮೆ ನೀಡಿ ತಮ್ಮೊಟ್ಟಿಗೆ ಸೇರಿಸಿ ಕೊಂಡಿರುವರೆಂದೂ ಆ ಕಾರಣಕ್ಕಾಗಿ ಕೋಟಿಚೆನ್ನಯರೊಂದಿಗೆ ಕುಜುಂಬ ಕಾಂಜನಿಗೂ ನೇಮ ನಡೆಯುತ್ತದೆ. ಈ ಹಿನ್ನಲೆಗೆ ಪೂರಕವಾಗಿ ಈ ಜೋಡಿ ಹಾಗೂ ಒಂಟಿ ತಾರಿಗಳು ಸ್ಥಳ ಮಹಿಮೆಯ ಕೌತುಕವಾಗಿದೆ. ಸುಮಾರು 30 ವರ್ಷ ಗಳಿಂದೀಚೆಗೆ ನೇಮೋತ್ಸವ ನಡೆಯುವ ಈ ಗದ್ದೆಗಳು ಹಡಿಲು ಬಿದ್ದಿತ್ತು. ಆದರೆ ಇತೀಚೆಗೆ ಎರಡು ವರ್ಷದಿಂದೀಚೆಗೆ ಗರಡಿ ಮನೆತನದ ಉತ್ಸಾಹಿ ಯುವಕರ ಹುಮ್ಮಸ್ಸಿನಿಂದ ಈ ಗದ್ದೆಗಳಲ್ಲಿ ಏಣೇಲು ಭತ್ತದ ಬೆಳೆಯನ್ನು ಬೆಳೆಯಲಾಗುತ್ತಿದೆ. ಇದೂ ಕೂಡಾ ಸ್ಥಳ ಸಾನಿಧ್ಯ ವೃದ್ಧಿಯ ಸಂಕೇತವೆಂದೇ ಹೇಳಬಹುದು. ಒಟ್ಟಿನಲ್ಲಿ ಭೂ ಪ್ರಾಕೃತಿಕ ವಿಶೇಷತೆಗಳಿಂದೊಡಗೂಡಿದ ಸ್ಥಳ ಸಾನಿಧ್ಯ ಹಾಗು ಶ್ರೀ ದೈವಗಳ ಕಾರಣಿಕದಿಂದ ಚಿಪ್ಪಾರು ಅಮ್ಮೇರಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯು ಭಕ್ತರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.