ಪತ್ತನಂತಿಟ್ಟು: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವ ಸಲುವಾಗಿ ತೆರಳಿದ್ದ ಭಕ್ತನೊಬ್ಬ ಕಾಡನೆ ದಾಳಿಗೆ ಬಲಿಯಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಪರಶಿವಂ (35) ಮೃತ ವ್ಯಕ್ತಿಯಾಗಿದ್ದಾರೆ. ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವ ಸಲುವಾಗಿ ಅರಣ್ಯ ಪ್ರದೇಶದಲ್ಲಿ ಕಾಲು ದಾರಿಯಲ್ಲಿ ಪುತ್ರನೊಂದಿಗೆ ಪರಶಿವಂ ಅವರು ತೆರಳಿದ್ದರು. ಕರಿಯಿಲಂತೊಡು ಮತ್ತು ಕರಿಮಲ ಮಾರ್ಗ ಮಧ್ಯೆ ಆನೆಯೊಂದು ಅಂಗಡಿ ಮೇಲೆ ದಾಳಿ ನಡೆಸುತ್ತಿದ್ದು. ಆನೆ ದಾಳಿ ನಡೆಸುತ್ತಿರುವುದನ್ನು ಕಂಡ ಪರಶಿವಂ ಅವರು ಭಯದಿಂದ ಸ್ಥಳದಲ್ಲಿದ್ದ ಅಂಗಡಿಯತ್ತ ಓಡಿ ಹೋಗಲು ಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ.
ಈ ವೇಳೆ ಆನೆ ಪರಶಿವಂ ಅವರ ಮೇಲೆ ದಾಳಿ ಮಾಡಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು ಹಾಗೂ ಅಯ್ಯಪ್ಪ ಸೇವಾ ಸಂಘದ ಕಾರ್ಯಕರ್ತರು ಸ್ಥಳಕ್ಕೆ ಬಂದರು. ಬಳಿಕ ಬೆಂಕಿ ಹಚ್ಚಿ ಆನೆಯನ್ನು ಎದುರಿಸಿ ಸ್ಥಳದಿಂದ ಹೋಗುವಂತೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಪರಶಿವಂ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರಾದರೂ ಅಷ್ಟರಲ್ಲಾಗಲೇ ಪರಶಿವಂ ಅವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಪರಶಿವಂ ಅವರ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅರಣ್ಯಾಧಿಕಾರಿ ಅಜೀಶ್ ಅವರು, ಮೃತನ ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.