ಕಾಸರಗೋಡು: ರಾಜ್ಯ ಸರಕಾರ ರಚಿಸಿದ ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಪ್ರಕಾರ ಜಿಲ್ಲೆಯ ಶಿಕ್ಷಣ ವಲಯದಲ್ಲಿ 112 ಕೋಟಿ ರೂ. ನಿರ್ಮಾಣ ಚಟುವಟಿಕೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು.
ಇದರ ಅಂಗವಾಗಿ 500 ಮಕ್ಕಳು ಕಲಿಕೆ ನಡೆಸುತ್ತಿರುವ 51 ಶಾಲೆಗಳಿಗೆ ತಲಾ ಒಂದು ಕೋಟಿ ರೂ., ಒಂದು ಸಾವಿರ ಮಕ್ಕಳು ಕಲಿಕೆ ನಡೆಸುತ್ತಿರುವ 15 ಶಾಲೆಗಳಿಗೆ ತಲಾ 3 ಕೊಟಿ ರೂ. ಮಂಜೂರು ಮಾಡಲಾಗಿದೆ. ಇದಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆಯ 16 ಕೋಟಿ ರೂ. ಜಿಲ್ಲೆಯ ಶಿಕ್ಷಣಾಲಯಗಳ ಮೂಲಭೂತ ಸೌಲಭ್ಯ ಏರ್ಪಡಿಸಲು ಮಂಜೂರು ಮಾಡಲಾಗಿದೆ. ಈ ಸಂಬಂಧ ಯೋಜನೆ ಮತ್ತು ವರದಿ ಸಿದ್ಧಪಡಿಸಲು ಕಿಟ್ ಕೋ ಸಂಸ್ಥೆಗೆ ವಹಿಸಲಾಗಿದೆ. ಮೂಲಭೂತ ಸೌಲಭ್ಯಗಳೇ ಇಲ್ಲದ ಶಾಲೆಗಳಲ್ಲಿ ಅಡುಗೆ ಮನೆ, ಊಟದ ಮೇಜು, ತರಗತಿ ಕೊಠಡಿ ಸಹಿತ ಸೌಲಭ್ಯ ಏರ್ಪಡಿಸಲಾಗುವುದು. ಒಂದೇ ತರಗತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಕ್ಕಳನ್ನು ಕೂಡಿಸುವ ಮೂಲಕ ಶಿಕ್ಷಕರು ಅನುಭವಿಸುವ ಸಮಸ್ಯೆ ಇತ್ಯಾದಿಗಳ ಪರಿಹಾರಕ್ಕೆ ಈ ಉದ್ದೇಶ ಇರಿಸಲಾಗಿದೆ.
ಕಳೆದ ಆರ್ಥಿಕ ವರ್ಷ ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞ ಪ್ರಕಾರ ಜಿಲ್ಲೆಯಲ್ಲಿ 3 ಶಾಲೆಗಳಿಗೆ ತಲಾ 3 ಕೋಟಿ ರೂ., 5 ಶಾಲೆಗಳಿಗೆ ತಲಾ 5 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಮೊಗ್ರಾಲ್ ಜಿ.ಎಚ್.ಎಸ್.ಎಸ್., ತಳಂಗರೆ ಜಿ.ಎಂ.ವಿ.ಎಚ್.ಎಸ್.ಎಸ್., ಪೆರಿಯ ಜಿ.ಎಚ್.ಎಸ್.ಎಸ್., ಕಕ್ಕಾಡ್ ಜಿ.ಎಚ್.ಎಸ್.ಎಸ್., ಪಿಲಿಕೋಡ್ ಜಿ.ಎಚ್.ಎಸ್.ಎಸ್. ಶಾಲೆಗಳಿಗೆ 5 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಈ ಶಿಕ್ಷಣಾಲಯಗಳಲ್ಲಿ ನಿರ್ಮಾಣ ಚಟುವಟಿಕೆ ತ್ವರಿತಗತಿಯಲ್ಲಿ ನಡೆದುಬರುತ್ತಿದೆ.
ಇದಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆ 5 ಶಾಲೆಗಳಿಗೆ ತಲಾ ಒಂದು ಕೋಟಿ ರೂ. ಮಂಜೂರು ಮಾಡಿತ್ತು. ಇದರ ಅಂಗವಾಗಿ ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳ ಶಾಸಕರು 5 ಶಾಲೆಗಳನ್ನು ಆಯ್ಕೆ ಮಾಡಿದ್ದಾರೆ. ಪೇರಾಲ್ ಸರಕಾರಿ ಕಿರಿಯ ಬುನಾದಿ ಶಾಲೆ, ಕುಂಬ್ಡಾಜೆ ಸರಕಾರಿ ಕಿರಿಯ ಬುನಾದಿ ಶಾಲೆ, ಕೂಟಕನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಾಂದರ್ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಡಕ್ಕಾಡ್ ಸರಕಾರಿ ಹಿರಿಯ ಪ್ರಥಮಿಕ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.
ಮೇ ತಿಂಗಳಲ್ಲಿ ಈ ಶಾಲೆಗಳ ಕಾಮಗಾರಿ ಪೂರ್ತಿಗೊಳ್ಳಲಿದೆ ಎಂದು ಅ„ಕಾರಿಗಳು ತಿಳಿಸಿದರು. ಈ ಮೂಲಕ ಶಾಲೆಗಳು ಉತ್ತಮ ಮಟ್ಟದ ಶಿಕ್ಷಣ ನೀಡಿಕೆಯ ಕೇಂದ್ರಗಳಾಗಲಿವೆ ಎಂದವರು ನಿರೀಕ್ಷಿಸಿದ್ದಾರೆ.