ಇಂದು ಮಂಗಳೂರು ಸಹಪಂಕ್ತಿ ಭೋಜನದ 180ನೇ ವರ್ಷಾಚರಣೆ : ಗಿಳಿವಿಂಡುವಿನಲ್ಲಿ ವಿಚಾರಸಂಕಿರಣ ಮತ್ತು ಸಹಪಂಕ್ತಿ ಭೋಜನ
0
ಫೆಬ್ರವರಿ 25, 2019
ಮಂಜೇಶ್ವರ: ಮಂಗಳೂರು ಸಹಪಂಕ್ತಿ ಭೋಜನದ 180ನೇ ವರ್ಷಾಚರಣೆ ಅಂಗವಾಗಿ ವಿಚಾರಸಂಕಿರಣ ಮತ್ತು ಸಹಪಂಕ್ತಿ ಭೋಜನ ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈ ಅವರ ನಿವಾಸ ಗಿಳಿವಿಂಡು ನಲ್ಲಿ ಇಂದು (ಫೆ.26) ನಡೆಯಲಿದೆ.
ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ಬಗ್ಗೆ ನಡೆಯುತ್ತಿರುವ ಜಿಲ್ಲಾ ಮಟ್ಟದ ಸರಣಿ ಕಾರ್ಯಕ್ರಮ ಅಂಗವಾಗಿ ಈ ಸಮಾರಂಭ ಜರುಗಲಿದೆ.
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ತಾತ ದಿ. ಸಾಹುಕಾರ ನಾರಾಯಣ ಪೈ ಅವರು 1839ರಲ್ಲಿ ಮಂಗಳೂರಿನಲ್ಲಿ ನಡೆಸಿದ್ದ ಸಹಪಂಕ್ತಿ ಭೋಜನ ಆಂದೋಲನದ ಮೂಲಕ ಮಾನ ಸಮಾನತೆ ಸಂದೇಶ ಸಾರಿದ್ದರು. ಈ ಜನಪರ ಆಂದೋಲನದ 180ನೇ ವರ್ಷಾಚರಣೆ ಅಂಗವಾಗಿ ಜಿಲ್ಲಾಡಳಿತೆ ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಈ ಸಮಾರಂಭ ಆಯೋಜಿಸಿದೆ.
ಬೆಳಿಗ್ಗೆ 11 ಕ್ಕೆ ನಡೆಯುವ ಸಮಾರಂಭವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ಮಂಜೇಶ್ವರ ತಹಶೀಲ್ದಾರ್ ಜಾನ್ ವರ್ಗೀಸ್ ಅಧ್ಯಕ್ಷತೆ ವಹಿಸುವರು. ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್.ಜಯಾನಂದ ಸ್ವಾಗತಿಸುವರು.
ಬಳಿಕ ನಡೆಯುವ ವಿಚಾರಸಂಕಿರಣದಲ್ಲಿ ಮಂಗಳೂರು ಸಹಪಂಕ್ತಿ ಭೋಜನ ಆಂದೋಲನ ಕುರಿತು ಬೆಳ್ತಂಗಡಿ ಸರಕಾರಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಸುಬ್ರಹ್ಮಣ್ಯ ಕೆ. ಕನ್ನಡದಲ್ಲಿ, ನಿವೃತ್ತ ಉಪನ್ಯಾಸಕ ಡಾ.ಸಿ.ಬಾಲನ್ ಮಲೆಯಾಳಂನಲ್ಲಿ ಉಪನ್ಯಾಸ ನಡೆಸುವರು. ಬಳಿಕ ಸಹಪಂಕ್ತಿ ಭೋಜನ ನಡೆಯಲಿದೆ.