ಕಾಂಗ್ರೆಸ್‍ನಿಂದ 48 ಗಂಟೆಗಳ ನಿರಾಹಾರ ಸತ್ಯಾಗ್ರಹ ವಿರೋಧಿಸುವವರನ್ನು ಹತ್ಯೆ ಮಾಡುವುದು ಸಿಪಿಎಂ ನೀತಿ : ವಿ.ಎಂ.ಸುಧೀರನ್
0
ಫೆಬ್ರವರಿ 26, 2019
ಕಾಸರಗೋಡು: ವಿರೋಧಿಸುವವರನ್ನು ಹತ್ಯೆ ಗೈಯ್ಯುವುದೇ ಸಿಪಿಎಂ ಅನುಸರಿಸುತ್ತಿರುವ ರಾಜಕೀಯ ನೀತಿಯಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ವಿ.ಎಂ.ಸುಧೀರನ್ ಆರೋಪಿಸಿದರು.
ಪೆರಿಯದಲ್ಲಿ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಹತ್ಯೆಗೈದ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ವಿದ್ಯಾನಗರದಲ್ಲಿರುವ ಡಿಸಿಸಿ ಕಾರ್ಯಾಲಯದ ಮುಂದೆ ಮಂಗಳವಾರ ಬೆಳಗ್ಗೆ ಆರಂಭಗೊಂಡ 48 ಗಂಟೆಗಳ ನಿರಾಹಾರ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳ ಇಡೀ ದೇಶಕ್ಕೆ ಮಾದರಿಯಾಗಿತ್ತು. ಆದರೆ ಈ ಗೌರವ ಕಳೆದುಕೊಳ್ಳುವಂತಾಗಲು ಸಿಪಿಎಂ ಪ್ರಯತ್ನಿಸುತ್ತಿದೆ. ಸಿಪಿಎಂ ನವೋತ್ಥಾನ ಮೌಲ್ಯಗಳನ್ನು ಸಂರಕ್ಷಿಸಲು ಪ್ರಯತ್ನಿಸುತ್ತಿಲ್ಲ. ಬದಲಾಗಿ ಕೊಲೆ ರಾಜಕೀಯವೇ ಅದರ ಮುಖ್ಯ ಗುರಿಯಾಗಿದೆ. ರಾಜ್ಯದಲ್ಲಿ ಸಿಪಿಎಂ ಅಧಿಕಾರಕ್ಕೆ ಬಂದ ಬಳಿಕ 20 ರಷ್ಟು ಕೊಲೆ ಪ್ರಕರಣ ನಡೆದಿದೆ. ಇದರಲ್ಲಿ ಆರೋಪಿಗಳಾಗಿರುವವರು ಮುಖ್ಯಮಂತ್ರಿ ಪ್ರತಿನಿಧಿಕರಿಸುವ ಪಕ್ಷದವರೇ ಆಗಿದ್ದಾರೆ. ಕೊಲೆ ನಡೆದ ಬಳಿಕ ಶಾಂತಿ ಸಭೆಯನ್ನು ನಾಮ ಮಾತ್ರಕ್ಕೆ ನಡೆಸಲಾಗುತ್ತಿದೆ. ಅದರಿಂದೇನೂ ಪ್ರಯೋಜನವಾಗುತ್ತಿಲ್ಲ. ಪೆರಿಯ ಕಲ್ಯೋಟ್‍ನಲ್ಲಿ ನಡೆದ ಅವಳಿ ಕೊಲೆ ಪ್ರಕರಣದಲ್ಲಿ ಇದೀಗ ಬಂಧಿತರಾಗಿರುವವರು ಯಥಾರ್ಥ ಆರೋಪಿಗಳಲ್ಲ. ಯಥಾರ್ಥ ಆರೋಪಿಗಳನ್ನು ಸಂರಕ್ಷಿಸಲು ಸಿಪಿಎಂ ಪ್ರಯತ್ನಿಸುತ್ತಿದೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುವುದು ಅನಿವಾರ್ಯವೆಂದು ವಿ.ಎಂ.ಸುಧೀರನ್ ಹೇಳಿದರು.
ಪೆರಿಯ ಕಲ್ಯೋಟ್‍ನಲ್ಲಿ ಹತ್ಯೆಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್‍ಲಾಲ್ ಅವರ ಅಂತ್ಯ ಸಂಸ್ಕಾರ ನಡೆದ ಸ್ಥಳಕ್ಕೆ ವಿ.ಎಂ.ಸುಧೀರನ್ ಹಾಗು ಪಿ.ಸಿ.ವಿಷ್ಣುನಾಥ್ ಬೆಳಗ್ಗೆ ಭೇಟಿ ನೀಡಿ ಪುಷ್ಪಾರ್ಚನೆ ನಡೆಸಿ, ಮೃತರ ಕುಟುಂಬವನ್ನು ಸಂತೈಸಿದ ಬಳಿಕ ನಿರಾಹಾರ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.
ನೇತಾರರಾದ ನ್ಯಾಯವಾದಿ.ಸಿ.ಕೆ.ಶ್ರೀಧರನ್, ಪಿ.ಸಿ.ವಿಷ್ಣುನಾಥ್, ಹರೀಶ್ ಪಿ.ನಾಯರ್, ಹಕೀಂ ಕುನ್ನಿಲ್, ಕೆ.ನೀಲಕಂಠನ್ ಮೊದಲಾದವರು ಉಪಸ್ಥಿತರಿದ್ದರು.