ಮಾನ್ಯದಲ್ಲಿ 6ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ದೈವಗಳ ಕೋಲ
0
ಫೆಬ್ರವರಿ 05, 2019
ಬದಿಯಡ್ಕ: ಮಾನ್ಯ ಸಮೀಪದ ದೇವರಕೆರೆ ಮೇಗಿನಡ್ಕದ ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ 6ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ದೈವಗಳ ಕೋಲ ವಿವಿಧ ಧಾರ್ಮಿಕ, ತಾಂತ್ರಿಕ, ಸಾಂಸ್ಕøತಿಕ ವಿಧಿವಿಧಾನಗಳೊಂದಿಗೆ ಶನಿವಾರ ಹಾಗೂ ಭಾನುವಾರ ಜರುಗಿತು. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಇವರ ನೇತೃತ್ವದಲ್ಲಿ ಮಹೋತ್ಸವದಂಗವಾಗಿ ತಂಬಿಲಸೇವೆ ನಡೆಯಿತು. ವಾದ್ಯಘೋಷಗಳೊಂದಿಗೆ ಮಾನ್ಯ ಪಡುಮನೆ ಭಂಡಾರಮನೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಹಾಗೂ ಶ್ರೀ ವಿಷ್ಣುಮೂರ್ತಿ ವಯನಾಟ್ ಕುಲವನ್ ದೈವಸ್ಥಾನ ಆರ್ತಲೆ ಕಲ್ಲಕಟ್ಟದಿಂದ ಶ್ರೀ ಕಾಲಿಚ್ಚಾನ್ ದೈವದ ಭಂಡಾರ ಆಗಮಮಿಸಿತು. ಬಳಿಕ ವಿಷ್ಣುಮೂರ್ತಿ, ಕಾಲಿಚ್ಚಾನ್ ದೈವ ಕೋಲಗಳಲ್ಲದೆ ಶ್ರೀ ಮಂತ್ರವಾದಿ ಗುಳಿಗ ದೈವದ ಕೋಲವೂ ನೆರವೇರಿತು.
ಮನರಂಜಿಸಿದ ಸಾಂಸ್ಕøತಿಕ ಕಾರ್ಯಕ್ರಮಗಳು:
ದೈವಕೋಲ ಮಹೋತ್ಸವದ ಅಂಗವಾಗಿ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದುವು. ಪ್ರಿಯದರ್ಶಿನಿ ಆಟ್ರ್ಸ್ ಆಂಡ್ ಸ್ಪೋಟ್ಸ್ ಕ್ಲಬ್ ಮೇಗಿನಡ್ಕ ಇದರ ಪ್ರಾಯೋಜಕತ್ವದಲ್ಲಿ ಊರ ಪರವೂರ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಹಾಗೂ ಪ್ರಕೃತಿ ಫೋಕ್ಯುಲರ್ ಗ್ಯಾಲರಿ ಓಫ್ ಕೇರಳ ಸಾದರಪಡಿಸುವ ನಾಡನ್ ಪಾಟ್ಟುಗಳ್ ಎಂಬ ಜಾನಪದ ಗೀತೆಗಳನ್ನೊಳಗೊಂಡ ರಸಮಂಜರಿಯು ಪ್ರಸ್ತುತಿಗೊಂಡಿತು. ಯಕ್ಷನಾಟ್ಯಗುರು ರಾಕೇಶ್ ರೈ ಅಡ್ಕ ಇವರ ಯಕ್ಷ ನಾಟ್ಯಾಲಯ ದೇವರಕೆರೆ ಮಾನ್ಯದ ಶಿಷ್ಯ ವೃಂದದಿಂದ ಮಹಿಷಾಸುರ ವಧೆ ಯಕ್ಷಗಾನ ಪ್ರದರ್ಶನವು ಅದ್ಧೂರಿಯಾಗಿ ಜರಗಿತು. ಈ ಸಂದರ್ಭದಲ್ಲಿ ಗುರು ರಾಕೇಶ್ ರೈ ಅಡ್ಕ ಅವರನ್ನು ಸಮ್ಮಾನಿಸಲಾಯಿತು. ಶ್ಯಾಮ ಪ್ರಸಾದ್ ಮಾನ್ಯ, ಸುಂದರ ಶೆಟ್ಟಿ ಕೊಲ್ಲಂಗಾನ, ಶಿವಪ್ರಸಾದ, ಉಣ್ಣಿ ಪಣಿಕ್ಕರ್, ಎಂ.ಎಚ್. ಜನಾರ್ದನ ಮೊದಲಾದವರು ಉಪಸ್ಥಿತರಿದ್ದರು.