ಕೈರಳಿ ಪ್ರಕಾಶನದ ನೂತನ ಕೃತಿ ಬಿಡುಗಡೆ-ಸಮೀಕ್ಷೆ ಫೆ.9 ರಂದು
0
ಫೆಬ್ರವರಿ 05, 2019
ಕಾಸರಗೋಡು: ಸುಬ್ಬಯ್ಯಕಟ್ಟೆಯ ಕೈರಳಿ ಪ್ರಕಾಶನ ಪ್ರಕಟಿಸಿರುವ ಇತ್ತೀಚೆಗಿನ ಕೃತಿಗಳ ಸಮೀಕ್ಷೆ ಹಾಗೂ ನೂತನ ಕೃತಿ ಬಿಡುಗಡೆ ಫೆ.9 ರಂದು ಶನಿವಾರ ಬೆಳಿಗ್ಗೆ 10 ರಿಂದ ಕಾಸರಗೋಡು ಹೋಟೆಲ್ ಸ್ಪೀಡ್‍ವೇ ಸಭಾಂಗಣದಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಗಡಿನಾಡಿನ ಉದಯೋನ್ಮುಖ ಕವಿ-ಕವಯಿತ್ರಿಯರ ಕವಿತಾ ಸಂಕಲನ ಗಡಿನಾಡ ಕಾವ್ಯ ಕೈರಳಿಯನ್ನು ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖಾ ನಿರ್ದೇಶಕ ಎಂ.ರವಿಕುಮಾರ್ ಬಿಡುಗಡೆಗೊಳಿಸುವರು. ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಸೂಟರ್‍ಪೇಟೆ ಕೃತಿ ಸ್ವೀಕರಿಸುವರು. ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ, ಮಧುರೈ ಕಾಮರಾಜ ವಿವಿಯ ನಿವೃತ್ತ ಕನ್ನಡ ವಿಭಾಗ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ, ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಜಿ.ಪಂ.ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಸಂಕೀರ್ತನಕಾರ ಹರಿದಾಸ ಜಯಾನಂದಕುಮಾರ್ ಹೊಸದುರ್ಗ, ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್, ನೋಟರಿ ಗಮಗಾಧರ ಉಳ್ಳಾಲ್, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ನಿವೃತ್ತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಉಪಸ್ಥಿತರಿದ್ದು ಶುಭಹಾರೈಸುವರು.
ಕೇಳು ಮಾಸ್ತರ್ ಅಗಲ್ಪಾಡಿ ಅವರು ಸಂಪಾದಿಸಿರುವ ಜಿಲ್ಲೆಯ ಕೀರ್ತಿಶೇಷ 141 ಕನ್ನಡ ಸಾಹಿತಿಗಳ ಮಾಹಿತಿಯನ್ನೊಳಗೊಂಡ ಕಾಸರಗೋಡಿನ ಸಿರಿಗನ್ನಡ ಸಾಹಿತಿಗಳು ಕೃತಿಯನ್ನು ಮಂಗಳೂರು ಅಲೋಶಿಯಸ್ ಸಂಧ್ಯಾ ಕಾಲೇಜಿನ ಉಪನ್ಯಾಸಕ ಡಾ.ಕೆ.ಮಹಾಲಿಂಗ ಭಟ್, ರವಿ ನಾಯ್ಕಾಪು ಅವರು ಬರೆದಿರುವ ಕೊಡುಗೈ ದಾನಿ ಸಾಯಿರಾಂ ಭಟ್ ಅವರ ಜೀವನಾಧಾರಿತ ದಾನಗಂಗೆ ಕೃತಿಯನ್ನು ಸಾಹಿತಿ, ಪತ್ರಕರ್ತ ಮಲಾರು ಜಯರಾಮ ರೈ, ಶ್ರೀಕಾಂತ್ ನೆಟ್ಟಣಿಗೆ ಸಂಪಾದಿಸಿರುವ ದೀಪದ ಔನ್ನತ್ಯ ಕೃತಿಯನ್ನು ಕೇರಳ ಗ್ರಾಮೀಣ ಬ್ಯಾಂಕ್ ನಿವೃತ್ತ ವಲಯ ಪ್ರಬಂಧಕ ಎಸ್.ಜಗನ್ನಾಥ ಶೆಟ್ಟಿ ಸಮೀಕ್ಷೆ ನಡೆಸುವರು. ಕೈರಳಿ ಪ್ರಕಾಶನದ ಎ.ಆರ್.ಸುಬ್ಬಯ್ಯಕಟ್ಟೆ, ಪ್ರೊ.ಎ.ಶ್ರೀನಾಥ್ ಮೊದಲಾದವರು ಉಪಸ್ಥಿತರಿರುವರು.