ನವದೆಹಲಿ: ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚು ದಾಖಲಾಗಿದೆ ಎಂಬ ವರದಿ ಬಗ್ಗೆ ನೀತಿ ಆಯೋಗ ಸ್ಪಷ್ಟನೆ ನೀಡಿದ್ದು, ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಅಂಕಿ ಅಂಶ ಬಿಡುಗಡೆ ಮಾಡಿಲ್ಲ ಎಂದು ಗುರುವಾರ ಹೇಳಿದೆ.
ಈ ಸಂಬಂಧ ನಿನ್ನೆ ಸುದ್ದಿಗೋಷ್ಠಿ ನಡೆಸಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು, ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ವರದಿ ಬಿಡುಗಡೆ ಮಾಡಿಲ್ಲ. ವರದಿ ಇನ್ನೂ ಪರಿಶೀಲನಾ ಹಂತದಲ್ಲಿದೆ ಮತ್ತು ವರದಿ ಸಿದ್ಧವಾದ ನಂತರ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ದತ್ತಾಂಶ ಸಂಪೂರ್ಣವಾಗಿ ಯಾವಾಗ ಸಿದ್ಧವಾಗುತ್ತದೋ ಆವಾಗ ವರದಿ ಬಿಡುಗಡೆ ಮಾಡುತ್ತೇವೆ. ದತ್ತಾಂಶವನ್ನು ಕಲೆಹಾಕಲು ನಾವು ವಿಭಿನ್ನವಾದ ಮಾನದಂಡವನ್ನು ಅನುಸರಿಸುತ್ತೇವೆ. ಆದ್ದರಿಂದ ಈಗ ಬಹಿರಂಗವಾಗಿರುವ ವರದಿಯನ್ನೇ ಅಂತಿಮವೆಂದು ಭಾವಿಸಬೇಕಿಲ್ಲ ಎಂದು ಅವರು ಹೇಳಿದ್ದಾರೆ.
2017-18ನೇ ಸಾಲಿನಲ್ಲಿ ನಿರುದ್ಯೋಗ ಪ್ರಮಾಣ ಶೇ.6.01ರಷ್ಟಿದ್ದು, ಇದು ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚು ಎಂದು ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ(ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್) ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ಬ್ಯುಸಿನೆಸ್? ಸ್ಟಾಂಡರ್ಡ್? ವರದಿ ಮಾಡಿತ್ತು. ಈ ವರದಿ ಕೇಂದ್ರ ಸರ್ಕಾರ ಭಾರೀ ಮುಜುಗರ ಉಂಟು ಮಾಡಿತ್ತು ಮತ್ತು ಪ್ರತಿಪಕ್ಷಗಳು ಇದೇ ವಿಷಯ ಮುಂದಿಟ್ಟುಕೊಂಡು ಮೋದಿ ಸರ್ಕಾರವನ್ನು ಹಣಿಯಲು ಯತ್ನಿಸುತ್ತಿವೆ.