ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯು.ಎ.ಇ ಘಟಕಕ್ಕೆ ಚಾಲನೆ
0
ಫೆಬ್ರವರಿ 06, 2019
ಕುಂಬಳೆ: ಯು.ಎ.ಇ ಯಲ್ಲಿ ಉದ್ಯೋಗ ನಿಮಿತ್ತ ವಾಸಿಸುತ್ತಿರುವ ಕಾಸರಗೋಡು ಜಿಲ್ಲೆಯ ಉತ್ತರ ದಿಕ್ಕಿನ ಕನ್ನಡ ಭಾಷಾ ಪ್ರೇಮಿಗಳು ಒಗ್ಗಟ್ಟಾಗಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿಯ ಯು.ಎ.ಇ ಘಟಕವನ್ನು ರೂಪಿಸಿದ್ದು, ಕಾಸರಗೋಡು ಜಿಲ್ಲೆಯಲ್ಲಿ ನೂರಾರು ವರ್ಷಗಳ ಪರಂಪರೆಯಿರುವ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಉಳಿತಿಗಾಗಿ ನಡೆಸುತ್ತಿರುವ ಕನ್ನಡ ಪರ ಚಳವಳಿಗಳಿಗೆ ತಮ್ಮ ಬೆಂಬಲವನ್ನು ಸೂಚಿಸುವ ನಿರ್ಣಯವನ್ನು ಕೈಗೊಂಡಿದೆ.
ಕನ್ನಡ ಶಾಲೆಗಳಲ್ಲಿ ಕನ್ನಡೇತರ ಅಧ್ಯಾಪಕರನ್ನು ನೇಮಿಸುವುದು, ಸರ್ಕಾರಿ ಕಚೇರಿಗಳಲ್ಲಿನ ಅಧಿಕೃತ ಕಡತಗಳಲ್ಲಿ ಕನ್ನಡ ಬಾಷೆಯ ಬಗ್ಗೆ ಸರಕಾರಗಳು ವಹಿಸುತ್ತಿರುವ ನಿರ್ಲಕ್ಷ್ಯ ಸೇರಿದಂತೆ ಬಾಷಾ ಅಲ್ಪ ಸಂಖ್ಯಾತ ಕನ್ನಡಿಗರು ಎದುರಿಸುವ ಅನ್ಯಾಯಗಳಿಗೆದುರಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಕನ್ನಡ ಭಾಷೆಯ ಅಳಿವು ಒಂದು ಭಾಷೆಗೆ ಮಾತ್ರ ಸೀಮಿತವಲ್ಲ, ಹಿರಿಯರು ಕಾಪಾಡಿಕೊಂಡು ಬಂದ ಸಾಮಾಜಿಕ ವ್ಯವಹಾರಗಳು ಮೂಲೆ ಗುಂಪಾಗುತ್ತಿದ್ದು, ಜಾನಪದ ರಂಗಗಳಲ್ಲಿನ ಅಮೂಲ್ಯ ಕಲಾ ಸಂಪತ್ತುಗಳು ಬಾರೀ ಪ್ರಮಾಣದಲ್ಲಿ ಮಾಯವಾಗುತ್ತಿರುವ ಮೂಲಕ ಜನರ ಮಧ್ಯದಲ್ಲಿನ ಸಂಪರ್ಕ ಹಾಗೂ ಸಂಬಂಧಗಳು ಮುರಿಯುತ್ತಿದ್ದು, ನಷ್ಟ ಸಂಭವಿಸಿದ ಮಾನವೀಯತೆಯ ಸೌಹಾರ್ದತೆ ವಾತಾವರಣವು ಮರುಕಳಿಸಿ ಬರುವಂತೆ ಸೂಕ್ತ ಕ್ರಮಗಳು ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದೆ.
ಕನ್ನಡ ಪರ ಚಳವಳಿಗಳ ಮಂಚೂಣಿ ನಾಯಕ ಸಾಮಾಜಿಕ ಮುಂದಾಳು ಸುಲ್ಫೀಕರ್ ಅಲಿ ಕಯ್ಯಾರುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯ ಆಯ್ಕೆ ನಡೆಯಿತು. ಸಮಿತಿ ಅಧ್ಯಕ್ಷರಾಗಿ ನ್ಯಾಯವಾದಿ. ಇಬ್ರಾಹಿಂ ಖಲೀಲ್ ಅರಿಮಲೆ, ಉಪಾಧ್ಯಕ್ಷರುಗಳಾಗಿ ಅಶ್ರಫ್ ಪಾವೂರು, ಮುನೀರ್ ಕುಬಣೂರು, ಅಬೂಬಕ್ಕರ್ ಸಿದ್ದಿಕ್ ಕಯ್ಯಾರು, ಕಾರ್ಯದರ್ಶಿಯಾಗಿ ಆಸೀಸ್ ಬಳ್ಳೂರು, ಜೊತೆ ಕಾರ್ಯದರ್ಶಿಗಳಾಗಿ ಇಂಜಿನಿಯರ್ ಯೂಸಫ್ ಶೇಣಿ, ಬಾಬಾ ಬಾಜೂರಿ ಶಿರಂತಡ್ಕ, ತಾಜುದೀನ್ ಕುಬಣೂರು ಹಾಗೂ ಕೋಶಾಧಿಕಾರಿಯಾಗಿ ಅನೀಶ್ ಶೆಟ್ಟಿ ಜೋಡುಕಲ್ಲು, ಚಂದ್ರಶೇಖರ ಕುಂಬಳೆ ಸೇರಿದಂತೆ ಹನ್ನೊಂದು ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಮನೀಷ್ ಎಂ. ಶೆಟ್ಟಿ ಜೋಡುಕಲ್ಲು, ಅಬೂಬಕ್ಕರ್ ಸಿದ್ದಿಕ್ ಜೋಡುಕಲ್ಲು, ಜಾಬಿರ್ ಕನ್ಯಾನ, ಯಾಕೂಬ್ ಅರಿಮಲೆ, ಮುನೀರ್ ಬೇರಿಕೆ, ಸುಬೈರ್ ಕುಬಣೂರು ಮೊದಲಾದ ಅನಿವಾಸಿ ವಲಯದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಮುಖರು ಸಭೆಯಲ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಶುಭ ಹಾರೈಸಿದರು.ನೂತನ ಸಮಿತಿಯ ನೇಮಕಾತಿಯನ್ನು ಕರ್ನಾಟಕ ಜಾನಪದ ಪರಿಷತ್ತು ಕೇಂದ್ರ ಘಟಕದ ಗೌರವಾಧ್ಯಕ್ಷ, ಕರ್ನಾಟಕ ಸರಕಾರದ ನಿವೃತ್ತ ಪೋಲೀಸ್ ಮಹಾನಿರ್ದೇಶಕ ಡಾ.ಕೆ.ವಿ.ಆರ್.ಠಾಗೂರ್ ಅನುಮೋದಿಸಿದ್ದಾರೆ.