ಕಾಂಗ್ರೆಸ್ ಜನ ಮಹಾಯಾತ್ರೆ ಆರಂಭ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸುವ ಕಾರ್ಯವಾಗಬೇಕಿದೆ : ಎ.ಕೆ.ಆ್ಯಂಟನಿ
0
ಫೆಬ್ರವರಿ 04, 2019
ಕಾಸರಗೋಡು: ಕಾಂಗ್ರೆಸ್‍ನ ಕೇರಳ ಘಟಕ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಅವರ ಸಾರಥ್ಯದಲ್ಲಿ ಕಾಸರಗೋಡಿನಿಂದ ತಿರುವನಂತಪುರ ತನಕ ನಡೆಯುವ ಜನ ಮಹಾಯಾತ್ರೆ ನಾಯಮ್ಮಾರಮೂಲೆಯಿಂದ ಭಾನುವಾರ ಆರಂಭಗೊಂಡಿತು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನದ್ರೋಹ ನೀತಿಗಳು, ಜಾತ್ಯತೀತ ಮತ್ತು ವಿಶ್ವಾಸ ಸಂರಕ್ಷಣೆ, ಕೇರಳದ ಸರ್ವಾಂಗೀಣ ಪ್ರಗತಿ ಮೊದಲಾದ ಸಂದೇಶಗಳನ್ನು ಮುಂದಿಟ್ಟು ಯಾತ್ರೆಯನ್ನು ಆಯೋಜಿಸಲಾಗಿದೆ.
ನ್ಯಾಯಮ್ಮಾರಮೂಲೆಯಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿಗಳೂ, ಮಾಜಿ ಕೇಂದ್ರ ರಕ್ಷಣಾ ಸಚಿವರೂ ಆದ ಎ.ಕೆ.ಆ್ಯಂಟಣಿ ಅವರು ಪತಾಕೆಯನ್ನು ಯಾತ್ರೆ ಸಾರಥಿ ಮುಲ್ಲಪಳ್ಳಿ ರಾಮಚಂದ್ರನ್ ಅವರಿಗೆ ಹಸ್ತಾಂತರಿಸಿ ಉದ್ಘಾಟಿಸಿದರು.
ಮುಂಬರುವ ಲೋಕಸಭಾ ಚುನಾವಣೆಯು ಎರಡನೇ ಕುರುಕ್ಷೇತ್ರ ಯುದ್ಧವಾಗಿರಲಿದ್ದು, ಮೋದಿ ಸಾರಥ್ಯದ ಕೌರವರನ್ನು ರಾಹುಲ್ ಪಡೆಯು ಸೋಲಿಸಲಿದೆ ಎಂದು ಮಾಜಿ ರಕ್ಷಣಾ ಸಚಿವ, ಹಿರಿಯ ಕಾಂಗ್ರೆಸ್ ನೇತಾರ ಎ.ಕೆ.ಆ್ಯಂಟನಿ ಹೇಳಿದರು.
ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸುವ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಸಮಾನ ಮನಸ್ಕ ಪಕ್ಷಗಳು ಕೈಜೋಡಿಸಲಿವೆ ಎಂದರು. ಚುನಾವಣೆಯು ನಾಯಕತ್ವದ ಬದಲಾವಣೆಯನ್ನು ಬಯಸುತ್ತದೆ, ಆ ಮೂಲಕ ದೇಶದ ಜಾತ್ಯತೀತ ನೆಲೆಗಟ್ಟು ಸಹಿತ ಮತೇತರ ತತ್ವಾದರ್ಶಗಳನ್ನು ಉಳಿಸುವ ಕಾರ್ಯವಾಗಲಿದೆ. ಕಳೆದ ನಾಲ್ಕು ವರ್ಷಗಳಿಂದ ದೇಶದ ಪ್ರಜಾಪ್ರಭುತ್ವವಾದಿ ಮೌಲ್ಯಗಳನ್ನು ನಾಶಪಡಿಸುವ ಯತ್ನ ನಿರಂತರವಾಗಿ ಸಾಗಿರುವುದಾಗಿ ಹೇಳಿದರು. ದೇಶದ ಜನತೆಯ ಐಕ್ಯತೆಯನ್ನು ನಾಶಗೊಳಿಸಿ, ಭಿನ್ನತೆಯನ್ನು ಮೂಡಿಸುವ ಮೂಲಕ ಹೊಸ ಸಂವಿಧಾನ ಸೃಷ್ಟಿಸುವ ಯತ್ನವೂ ಎಗ್ಗಿಲ್ಲದೆ ಮುನ್ನಡೆದಿದೆ. ಜನಸಾಮಾನ್ಯರು ಬೆಲೆಯೇರಿಕೆ, ಹೊಸ ಆರ್ಥಿಕ ನೀತಿಗಳಿಂದ ಕಂಗೆಟ್ಟಿದ್ದಾರೆ. ಮೋದಿ ಆಳ್ವಿಕೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿವೆ ಎಂದು ಆರೋಪಿಸಿದರು. ಯುವ ಸಮೂಹವು ನಿರುದ್ಯೋಗ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಕಾರ್ಮಿಕ ವರ್ಗಕ್ಕೆ ಸೂಕ್ತ ಸಂಬಳ ವ್ಯವಸ್ಥೆಯಿಲ್ಲದಾಗಿದೆ ಎಂದರು. ಇಂತಹ ವ್ಯವಸ್ಥೆ ಮುಂದುವರಿದರೆ ದೇಶದಲ್ಲಿ ಅರಾಜಕತೆಯಂತಹ ದುಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಕೆ.ಸುಧಾಕರನ್ ಅಧ್ಯಕ್ಷತೆ ವಹಿಸಿದರು. ಮಾಜಿ ಮುಖ್ಯಮಂತ್ರಿ ಉಮ್ಮನ್‍ಚಾಂಡಿ, ಸಂಸದ ಕೆ.ಸಿ.ವೇಣುಗೋಪಾಲ್, ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ, ಪಿ.ಸಿ.ಚಾಕೋ, ಕೊಡಿಕುನ್ನಿಲ್ ಸುರೇಶ್, ಪಿ.ಸಿ.ವಿಶ್ವನಾಥ, ಬೆನ್ನಿ ಬೆಹನನ್, ಎಂ.ಎಂ.ಹಸನ್, ತಂಬಾನೂರು ರವಿ. ಡಾ|ಶುರುನಾಡ್ ರಾಜಶೇಖರನ್, ಸಿ.ಆರ್.ಜಯಪ್ರಕಾಶ್, ಜೋಸೆಫ್ ವಾಳಕನ್, ಎಐಸಿಸಿ ಕಾರ್ಯದರ್ಶಿ ಪಿ.ಸಿ.ವಿಷ್ಣುನಾಥ್, ಎ.ಎ.ಶುಕೂರು, ಕೆ.ಸಿ.ಅಬು, ಲತಿಕಾ ಸುಭಾಷ್, ರಾಜ್‍ಮೋಹನ್ ಉಣ್ಣಿತ್ತಾನ್, ಶರತ್‍ಚಂದ್ರ ಪ್ರಸಾದ್, ಶಾನಿಮೋಳ್ ಉಸ್ಮಾನ್, ಕೆ.ಸಿ.ಜೋಸೆಫ್, ಕೆ.ಬಾಬು, ಮಣವಿಳ ರಾಧಾಕೃಷ್ಣನ್, ಜೋನ್ಸನ್ ಅಬ್ರಹಾಂ, ಎ.ಪಿ.ಅನಿಲ್ ಕುಮಾರ್, ಕೆ.ಪಿ.ಅನಿಲ್ ಕುಮಾರ್, ಅನ್ವರ್ ಸಾದತ್, ಕೆ.ಎಸ್.ಶಬರಿನಾಥನ್, ಸಿ.ಪಿ.ಜೋನ್, ಶಿಬು ಬೇಬಿ ಜಾನ್, ಜೋನಿ ನೆಲ್ಲೂರು. ಸಿ.ಟಿ.ಅಹಮ್ಮದ್ ಕಬೀರ್, ಪಿ.ಟಿ.ಜೋಸ್, ಕೆ.ಎಸ್.ಯು, ಯೂತ್ ಕಾಂಗ್ರೆಸ್, ಅನಿವಾಸಿ ಕಾಂಗ್ರೆಸ್ ಜಿಲ್ಲಾ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಿ.ಸಿ.ಸಿ. ಅಧ್ಯಕ್ಷ ಹಕೀಂ ಕುನ್ನಿಲ್ ಸ್ವಾಗತಿಸಿದರು.
ಯುಡಿಎಫ್ ಸಂಚಾಲಕ ಬೆನ್ನಿ ಬೆಹನನ್ ಯಾತ್ರೆಯನ್ನು ನಿಯಂತ್ರಿಸುವರು. ಶಾಸಕ ಕೆ.ಸಿ.ಜೋಸೆಫ್, ನ್ಯಾಯವಾದಿ ಅಬ್ದುಲ್ ಮುತ್ತಲಿಬ್, ಎ.ಕೆ.ರಾಜು ಮೊದಲಾದವರು ಯಾತ್ರೆಯ ಮೆನೇಜರ್ ಆಗಿರುವರು. ಯಾತ್ರೆಗೆ ರಾಜ್ಯದ 139 ಕೇಂದ್ರಗಳಲ್ಲಿ ಸ್ವಾಗತ ನೀಡಲಾಗುವುದು. ಫೆ.24 ರಂದು ಯಾತ್ರೆ ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.