'ರಾಷ್ಟ್ರೀಯ ಹಿತಾಸಕ್ತಿ ಸಾಧನೆಗೆ ಉಗ್ರತ್ವ ಬಳಕೆ ಅಕ್ಷಮ್ಯ': ಪಾಕ್ ಗೆ ಕೈ ಕೊಟ್ಟ ಚೀನಾ, ನೇರವಾಗಿಯೇ ತಿವಿದ ರಷ್ಯಾ!
0
ಫೆಬ್ರವರಿ 28, 2019
ಬೀಜಿಂಗ್: ಪಾಕಿಸ್ತಾನದ ಆಪದ್ಭಾಂಧವ ಎಂದೇ ಖ್ಯಾತಿ ಗಳಿಸಿರುವ ಚೀನಾ ಪುಲ್ವಾಮ ಉಗ್ರ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಕೈಕೊಟ್ಟಿದ್ದು, ರಾಷ್ಟ್ರೀಯ ಹಿತಾಸಕ್ತಿ ಸಾಧನೆಗೆ ಉಗ್ರತ್ವ ಬಳಕೆ ಅಕ್ಷಮ್ಯ ಹೇಳಿದೆ.
ಪುಲ್ವಾಮ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ತನ್ನ ವಾಯುಸೇನೆ ಮೂಲಕ ಜೈಶ್ ಉಗ್ರ ಸಂಘಟನೆಯ ಅಡಗುದಾಣಗಳ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಉಭಯ ದೇಶಗಳ ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿರುವಂತೆಯೇ ಇತ್ತ ಪಾಕಿಸ್ತಾನ ಆಪ್ತ ರಾಷ್ಟ್ರ ಚೀನಾ ಪಾಕಿಸ್ತಾನಕ್ಕೆ ಕೈಕೊಟ್ಟಿದ್ದು, ರಾಷ್ಟ್ರೀಯ ಹಿತಾಸಕ್ತಿ ಸಾಧನೆಗೆ ಉಗ್ರತ್ವ ಬಳಕೆ ಅಕ್ಷಮ್ಯ ಎಂದು ಹೇಳಿದೆ.
ಅಲ್ಲದೆ ನೇರವಾಗಿಯೇ ಭಯೋತ್ಪಾದನೆಗೆ ಪ್ರೋತ್ಸಾಹ ನೀಡಬೇಡಿ ಅಂತಾ ಪಾಕಿಸ್ತಾನಕ್ಕೆ ಚೀನಾ ವಾನಿರ್ಂಗ್ ಮಾಡಿದೆ. ಈ ಮೂಲಕ ಭಾರತದ ರಾಜತಾಂತ್ರಿಕತೆಗೆ ದೊಡ್ಡ ಜಯ ಲಭಿಸಿದಂತಾಗಿದೆ.
ನಿನ್ನೆ ಚೀನಾದ ವೂಹನ್ ನಲ್ಲಿ 16 ನೇ ರಷ್ಯಾ-ಭಾರತ-ಚೀನಾ (ಆರ್‍ಐಸಿ) ವಿದೇಶಾಂಗ ವ್ಯವಹಾರಗಳ ಸಚಿವರ ಸಭೆ ನಡೆದಿತ್ತು. ಈ ವೇಳೆ ಭಾರತ, ಪಾಕಿಸ್ತಾನ ಉಗ್ರರ ಪೋಷಣೆ ಮಾಡುತ್ತಿರುವ ಬಗ್ಗೆ ಚೀನಾಗೆ ಮನವರಿಕೆ ಮಾಡಿಕೊಟ್ಟಿತ್ತು. ಸದಾ ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಟಕ್ಕೆ ಕೊಕ್ಕೆ ಹಾಕುತ್ತಿದೆ ಎಂದು ಆರೋಪಿಸಿತ್ತು. ನಂತರ ಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಮೂರು ರಾಷ್ಟ್ರಗಳು ಒಟ್ಟಿಗೆ ಹೋರಾಟ ನಡೆಸುವ ಬಗ್ಗೆ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದ್ದರು.
ಇದಾದ ಕೆಲವೇ ಹೊತ್ತಿನಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದು, ಪಾಕಿಸ್ತಾನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನ ಸ್ಥಗಿತಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ನಮಗೆ ಸ್ನೇಹಿತರೇ. ಆದರೆ ಪಾಕಿಸ್ತಾನ ತನ್ನ ಉಗ್ರತ್ವವನ್ನ ಪೋಷಣೆ ಮಾಡೋದನ್ನ ನಿಲ್ಲಿಸಬೇಕು ಎಂದು ಚೀನಾ ಹೇಳಿದೆ.
ಇದೇ ನಿಲುವನ್ನು ರಷ್ಯಾ ಕೂಡ ಪ್ರಕಟಿಸಿದ್ದು, ಭಯೋತ್ಪಾದನೆ ವಿಚಾರದಲ್ಲಿ ತಾನು ಭಾರತದ ಯಾವುದೇ ನಿರ್ಧಾರವನ್ನು ಸಮರ್ಥಿಸುವುದಾಗಿ ಮತ್ತು ಅಗತ್ಯ ನೆರವು ನೀಡುವುದಾಗಿ ಘೋಷಣೆ ಮಾಡಿದೆ.