ಮದರು ಮಹಾಮಾತೆಗೆ ಸೂಕ್ತ ಸ್ಥಾನ ಕಲ್ಪಿಸಿಲ್ಲ-ಪ್ರತಿಭಟನೆ ತೀವ್ರತೆಗೆ ತೀರ್ಮಾನ
0
ಫೆಬ್ರವರಿ 06, 2019
ಬದಿಯಡ್ಕ : ಮಧೂರು ಶ್ರೀಮದನಂತೇಶ್ವರನೊಲಿದ ಮದರು ಮಹಾಮಾತೆಗೆ ಮಧೂರು ದೇವಾಲಯದ ಮೂಲ ಸ್ಥಾನದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಬೇಕೆಂದು ಮದರು ಮಹಾಮಾತೆ ಮೊಗೇರ ಸಮಾಜದ ವತಿಯಿಂದ ಮಲಬಾರ್ ದೇವಸ್ವಂ ಮಂಡಳಿ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ವರ್ಷಗಳು ಸಂದರೂ ಇದುವರೆಗೆ ಯಾವುದೇ ಕ್ರಮಕೈಗೊಳ್ಳದ ಸರಕಾರದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತಪಡಿಸಲು ತೀರ್ಮಾನಿಸಲಾಗಿದೆ.
ಧರ್ಬೆತ್ತಡ್ಕ ಶ್ರೀ ಧ್ಯಾನಮಂಟಪದಲ್ಲಿ ನಡೆದ ಮದರು ಮಹಾಮಾತೆ ಮೊಗೇರ ಸಮಾಜದ ಕಾರ್ಯಕಾರೀ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಮಿತಿ ಅಧ್ಯಕ್ಷ ವಸಂತ ಅಜಕ್ಕೋಡು ಅಧ್ಯಕ್ಷತೆ ವಹಿಸಿದ್ದರು. ಮಧೂರು ದೇವಸ್ಥಾನದ ಅಸ್ತಿತ್ವಕ್ಕೆ ಕಾರಣಕರ್ತೆಯಾದ ಮದರು ಮಹಾಮಾತೆಗೆ ಉಳಿಯತ್ತಡ್ಕ ಮೂಲಸ್ಥಾನದಲ್ಲಿ ಗುಡಿಕಟ್ಟಿ ಆರಾಧನೆ ನಡೆಸಬೇಕೆಂದು ಮಾಯಿಪಾಡಿ ರಾಜರ ಪ್ರತಿನಿಧಿ ಮತ್ತು ತಂತ್ರಿಗಳ ಉಪಸ್ಥಿತಿಯಲ್ಲಿ ನಡೆದ ಪ್ರಶ್ನೆರಾಶಿಯಲ್ಲಿ ತಿಳಿದು ಬಂದಿದೆ. ಅದರಂತೆ ಸಂಬಂಧಪಟ್ಟ ಇಲಾಖೆಗೆ ಮತ್ತು ಸರಕಾರದ ಸಚಿವರುಗಳಿಗೆ ಮನವಿ ಸಲ್ಲಿಸಲಾಗಿದೆ. ಕ್ಷೇತ್ರ ಜೀರ್ಣೋದ್ಧಾರ ಸಮಿತಿಗೂ, ಆಡಳಿತ ಮಂಡಳಿಗೂ ಮನವಿಯ ಪ್ರತಿಯನ್ನು ಸಲ್ಲಿಸಲಾಗಿದೆ. ಆದರೆ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ಆಶ್ಚರ್ಯದ ವಿಚಾರವಾಗಿದೆ. ಈ ನಿಲುವಿನ ವಿರುದ್ಧ ಜಾತಿ, ಮತ, ಪಕ್ಷಬೇಧ ಮರೆತು ಎಲ್ಲರೂ ಒಂದಾಗಿ ಹೋರಾಟ ನಡೆಸಲು ಸಿದ್ಧತೆ ನಡೆಸುವುದಾಗಿ ಅಧ್ಯಕ್ಷ ವಸಂತ ಅಜಕ್ಕೋಡು ಹೇಳಿದ್ದಾರೆ.
ಗೌರವಾಧ್ಯಕ್ಷ ಆನಂದ ಕೆ.ಮವ್ವಾರು, ಪದಾಧಿಕಾರಿಗಳಾದ ಡಿ.ಕೃಷ್ಣದಾಸ್, ರಾಮಪ್ಪ ಮಂಜೇಶ್ವರ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ರಾಮ ಪಟ್ಟಾಜೆ, ರವಿ ಕನಕಪಾಡಿ, ಗೋಪಾಲ ಡಿ., ಸುಂದರ ಬಾರಡ್ಕ, ಸುಂದರ ಮಾಳಂಗೈ, ಸುರೇಶ್ ಅಜಕ್ಕೋಡು ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಂಕರ ಡಿ. ದರ್ಭೆತ್ತಡ್ಕ ಸ್ವಾಗತಿಸಿ ವಿಷಯ ಮಂಡಿಸಿದರು. ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ ವಂದಿಸಿದರು.
ಮಧೂರು ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದ್ದು, ಅದು ಪೂರ್ಣಗೊಳ್ಳುವ ಸಂದರ್ಭದಲ್ಲಿ ಮೂಲಸ್ಥಾನದಲ್ಲಿ ಮದರುವಿನ ಗುಡಿಯ ಕೆಲಸವನ್ನೂ ನಡೆಸಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.