ಐಟಿ ರಿಟನ್ರ್ಸ್ ಸಲ್ಲಿಸಲು ಆಧಾರ್ ಕಡ್ಡಾಯ: ಸುಪ್ರೀಂ ಕೋರ್ಟ್
0
ಫೆಬ್ರವರಿ 06, 2019
ನವದೆಹಲಿ: ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸಲು ಪಾನ್ ಜತೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಬುಧವಾರ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಐಟಿ ರಿಟನ್ರ್ಸ್ ಸಲ್ಲಿಕೆಗೆ ಆಧಾರ್ ಕಡ್ಡಾಯವಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಕೆ ಸಿಕ್ರಿ ಹಾಗೂ ಎಸ್ ಅಬ್ದುಲ್ ನಾಜೀರ್ ಅವರನ್ನೊಳಗೊಂಡ ಸುಪ್ರೀಂ ಪೀಠ, ಐಟಿ ರಿಟನ್ರ್ಸ್ ಪಾವತಿ ಮಾಡಲು 2018-19 ಸಾಲಿಗೆ ಆಧಾರ್ ಕಡ್ಡಾಯ ಮಾಡಿ ಆದೇಶ ನೀಡಿದೆ.
ಈಗಾಗಲೇ ಪಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯ ಮಾಡಲಾಗಿದ್ದು, ಸದ್ಯ ಎಲ್ಲಾ ಆದಾಯ ತೆರಿಗೆ ಪಾವತಿ ಮಾಡುವವರು ಆಧಾರ್ ಸಂಖ್ಯೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಸುಪ್ರೀಂ ಕೋರ್ಟ್ ಆಧಾರ್ ಕಾರ್ಡಿಗೆ ಇರುವ ಸಂವಿಧಾನಿಕ ಮಾನ್ಯತೆಯನ್ನು ಸೆಪ್ಟೆಂಬರ್ ತೀರ್ಪಿನಲ್ಲಿ ಎತ್ತಿ ಹಿಡಿದಿತ್ತು. ಆದರೂ ಬ್ಯಾಂಕ್ ಖಾತೆ, ಮೊಬೈಲ್ ಫೋನ್ ಮತ್ತು ಶಾಲಾ ಪ್ರವೇಶಕ್ಕೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಹೇಳಿತ್ತು. ಆದರೆ ಈಗ ನ್ಯಾಯಾಲಯ ಐಟಿ ರಿಟನ್ರ್ಸ್ ಸಲ್ಲಿಕೆ ಮಾಡಲು ವೈಯಕ್ತಿಕ ಆಧಾರ್ ಸಂಖ್ಯೆಯನ್ನು ಒದಗಿಸುವುದನ್ನು ಕಡ್ಡಾಯ ಮಾಡಿದೆ. ಅಲ್ಲದೆ ಆಧಾರ್ ಕಾರ್ಡನ್ನು ಪಾನ್ ಕಾರ್ಡಿಗೆ ಲಿಂಕ್ ಮಾಡಲು 2019 ಮಾರ್ಚ್ 31 ರವರೆಗೂ ಸಮಯಾವಕಾಶವನ್ನು ನೀಡಿದೆ.