ಭಾರತಕ್ಕೆ ರಾಜತಾಂತ್ರಿಕ ಜಯ: ವಿಜಯ್ ಮಲ್ಯ ಭಾರತ ಗಡಿಪಾರಿಗೆ ಬ್ರಿಟನ್ ಸರ್ಕಾರ ಅಸ್ತು
0
ಫೆಬ್ರವರಿ 04, 2019
ಲಂಡನ್: ಬ್ರಿಟನ್ ಸರ್ಕಾರ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಭಾರತದಿಂದ ಪರಾರಿಯಾಗಿ ಯುಕೆನಲ್ಲಿ ನೆಲೆಸಿರುವ ವಿಜಯ್ ಮಲ್ಯರನ್ನು ಪುನಃ ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಕೊಂಡಿದೆ.
ಉದ್ಯಮಿ ವಿಜಯ್ ಮಲ್ಯರನ್ನು ಗಡಿಪಾರು ಮಾಡುವ ಪ್ರಸ್ತಾವಕ್ಕೆ ಯುಕೆ ಸರ್ಕಾರ ಸಹಿ ಹಾಕಿದೆ. ಬ್ರಿಟನ್ ಗೃಹ ಇಲಾಖೆ ಮಲ್ಯ ಹಸ್ತಾಂತರ ಸಂಬಂಧದ ಎಲ್ಲಾ ದಾಖಲೆಗಳಿಗೆ ಸೋಮವಾರ ಸಹಿ ಮಾಡಿದೆ.
ಬ್ಯಾಂಕ್ ವಂಚನೆ ಸಂಬಂಧ ವಿಚಾರಣೆ ಎದುರಿಸಲು ಭಾರತಕ್ಕೆ ಹಸ್ತಾಂತರದ ಪರವಾಗಿ ಲಂಡನ್ ನ್ಯಾಯಾಲಯವು ತೀರ್ಪುನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಆದರೆ ಮಲ್ಯ ಈ ಸಂಬಂಧ 14 ದಿನಗಳೊಳಗೆ ಭಾರತಕ್ಕೆ ಗಡಿಪಾರು ಆಗುವುದರ ಕುರಿತಂತೆ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಸಹ ಅವಕಾಶ ಕಲ್ಪಿಸಲಾಗಿದೆ.
ಸಧ್ಯ ಗಡಿಪಾರು ಒಪ್ಪಂದ ಕುರಿತ ಕಾರ್ಯವಿಧಾನದಡಿಯಲ್ಲಿ, ಮುಖ್ಯ ಮ್ಯಾಜಿಸ್ಟ್ರೇಟ್ ತೀರ್ಪನ್ನು ಗೃಹ ಕಾರ್ಯದರ್ಶಿಗೆ ಕಳುಹಿಸಲಾಗಿದೆ
2016ರಲ್ಲಿ ಮಲ್ಯ ಅವರು ಬ್ಯಾಂಕುಗಳಿಗೆ ವಂಚಿಸಿ ದ್ದಾರೆ ಎಂದು ಭಾರತದ ಬ್ಯಾಂಕುಗಳು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವ ವಾರಗಳ ಮುನ್ನವೇ ಉದ್ಯಮಿ ವಿಜಯ್ ಮಲ್ಯ ಯುಕೆಗೆ ಪರಾರಿಯಾಗಿದ್ದರು.
ಮಲ್ಯ ಬೆಂಗಳೂರು, ಮುಂಬೈಗಳಲ್ಲಿ ಆಸ್ತಿಗಳನ್ನು ಹೊಂದಿದ್ದಲ್ಲದೆ ಯುನೈಟೆಡ್ ಬ್ರೂವರೀಸ್, ಯುನೈಟೆಡ್ ಸ್ಪಿರಿಟ್ಸ್ ಮತ್ತು ಮೆಕ್ಡೊವೆಲ್ ಹೋಲ್ಡಿಂಗ್ಸ್ ಗಳಲ್ಲಿ ಶೇರುಗಳನ್ನು ಸಹ ಹೊಂದಿದ್ದಾರೆ. ಮಲ್ಯ ವಿರುದ್ಧ ಅಕ್ರಮ ಹಣ ವರ್ಗಾವಣೆ, ವಂಚನೆ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ)ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಸಿಬಿಐ ಹಾಗೂ ಇಡಿ ಆ ಕುರಿತು ತನಿಖೆ ಕೈಗೊಂಡಿದೆ.