ಹತ್ತನೇ ತರಗತಿ ಬಳಿಕ ಮುಂದೇನು?-ಕಾರ್ಯಾಗಾರ
0
ಫೆಬ್ರವರಿ 05, 2019
ಬದಿಯಡ್ಕ: ಹತ್ತನೇ ತರಗತಿಯ ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳು ಓರ್ವ ವಿದ್ಯಾರ್ಥಿಯ ಭವಿಷ್ಯಕ್ಕೆ ದಾರಿದೀಪವಾಗಲಿದೆ. ಮುಂದಿನ ವಿದ್ಯಾಭ್ಯಾಸದ ಬಾಗಿಲು ತೆರೆಯುವುದು ಈ ಅಂಕ ಗಳಿಕೆಯ ಆಧಾರದಲ್ಲಿದೆ. ಆದುರಿಂದ 10ನೇ ತರಗತಿಯ ವಿದ್ಯಾರ್ಥಿಗಳು ತನ್ನೆಲ್ಲಾ ಇತರ ಚಟುವಟಿಕೆಗಳನ್ನು ಬದಿಗೊತ್ತಿ ಪರೀಕ್ಷಾ ಸಿದ್ಧತೆಯನ್ನು ಅಚಲ ನಿಷ್ಠೆಯಿಂದ ಮಾಡಬೇಕು. ಆಧುನಿಕ ತಂತ್ರಜ್ಞಾನಗಳನ್ನು ಮಕ್ಕಳು ಸರಿಯಾದ ನಿಟ್ಟಿನಲ್ಲಿ ಬಳಸುತ್ತಿದ್ದಾರೆಯೇ ಎಂಬ ಬಗ್ಗೆಯೂ ಪಾಲಕರು ನಿಗಾವಹಿಸಬೇಕಾಗಿದೆ ಎಂಬುದಾಗಿ ಮಂಗಳೂರು ಶಾರದಾ ವಿದ್ಯಾನಿಕೇತನ ಪಿಯು ಕಾಲೇಜ್‍ನ ಪ್ರಾಂಶುಪಾಲರಾದ ವಿನಾಯಕ ಬಿ.ಜೆ ತಿಳಿಸಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ `ಎಸ್.ಎಸ್.ಎಲ್.ಸಿ. ಮುಂದೇನು?' ಎಂಬ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿನೀಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಸ್.ಎಸ್.ಎಲ್.ಸಿ.ಯ ನಂತರ ಆಯ್ಕೆಗೊಳ್ಳುವ ವಿಷಯದ ಆಧಾರದಲ್ಲಿ ಉನ್ನತ ವ್ಯಾಸಂಗ ಕೈಗೊಳ್ಳಬೇಕಾಗುತ್ತದೆ. ಆದುದರಿಂದ ವಿವಿಧ ವಿಷಯಾಧಾರಿತ ಉನ್ನತ ವ್ಯಾಸಂಗಗಳಿಗಾಗಿರುವ `ಎಂಟ್ರೆನ್ಸ್ ಎಕ್ಸಾಮ್'ಗಳ ಕಡೆಗೂ ಗಮನಿಸುವುದು ಅಗತ್ಯ. ವಿಜ್ಞಾನ ವಿಭಾಗ, ಕಲಾ ವಿಭಾಗ, ವಾಣಿಜ್ಯ ವಿಭಾಗಗಳ ಆಧಾರದಲ್ಲಿ ದೊರಕಿಸಿಕೊಳ್ಳಬಹುದಾದ ಉನ್ನತ ವ್ಯಾಸಂಗದ ಬಗ್ಗೆ ಮಾಹಿತಿ ನೀಡಿದರು. ದೇಶದ ರಕ್ಷಣಾ ವಿಭಾಗದಲ್ಲಿ ಸೇವೆ ಮಾಡಲು ಬಯಸುವ ವಿದ್ಯಾರ್ಥಿಗೆ ಪಿ.ಯು.ಸಿ ಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಎನ್.ಡಿ.ಎ ಪ್ರವೇಶ ಪರೀಕ್ಷೆ ಬರೆಯಬಹುದಾಗಿದ್ದು ನಂತರದ ವಿವಿಧ ಆಯ್ಕೆ ಪ್ರಕ್ರಿಯೆಗಳ ಮೂಲಕ ತೇರ್ಗಡೆಯಾಗಿ ಪದವಿ ಪಡೆದು ಡಿಫೆನ್ಸ್ ವಿಭಾಗದಲ್ಲಿ ಸೇವೆ ಸಲ್ಲಿಸಬಹುದು ಎಂದು ಅವರು ತಿಳಿಸಿದರು.
ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಕಾರ್ಯಕ್ರಮ ಸಂಯೋಜಿಸಿದರು. ಶಾಲಾ ಸಂಚಾಲಕ ಜಯಪ್ರಕಾಶ್ ಪಜಿಲ, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು, ಬದಿಯಡ್ಕದ ಹೋಲಿಫ್ಯಾಮಿಲಿ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳಾದ ನಿತೀಶ್ ಕೆ. ಸ್ವಾಗತಿಸಿ, ಸ್ನೇಹಶ್ರೀ ವಂದಿಸಿಸದರು.