ನಾದಮಯ ಪ್ರಪಂಚವನ್ನು ಪ್ರೀತಿಸಿದಷ್ಟು ಬದುಕು ಸಹ್ಯವಾಗುತ್ತದೆ-ರಾಮ ಭಟ್ ಸಜಂಗದ್ದೆ ವೀಣಾವಾದಿನಿ ವಾರ್ಷಿಕೋತ್ಸವ ಸಮಾರೋಪ
0
ಫೆಬ್ರವರಿ 04, 2019
ಬದಿಯಡ್ಕ: ಮನುಷ್ಯನ ಬದುಕು ಸುಸಂಸ್ಕøತ ವಿಷಯವಾಗಿದ್ದು, ಅದು ಭೌತಿಕ ಅಲ್ಲ. ಪ್ರಕೃತಿಯೊಂದಿಗೆ ಜನಜೀವನ ಬೆಳೆದುಬಂದಿದ್ದು,ಅದರ ಭಾಗವಾದ ನಾದಕ್ಕೆ ಭಾರತೀಯ ಸಂಸ್ಕøತಿ ಮಹತ್ವ ನೀಡಿದೆ. ಅದು ಉಪಾಸನೆಯೋಪಾದಿಯಲ್ಲಿ ದೈವಿಕತೆಯನ್ನು ಕಂಡುಕೊಂಡಿದ್ದರಿಂದ ಸಂಗೀತದ ಆವಿರ್ಭಾವವನ್ನು ಕಂಡೊಕೊಳ್ಳಲಾಗಿದೆ ಎಂದು ನಿವೃತ್ತ ಉಪನ್ಯಾಸಕ, ಬರಹಗಾರ ರಾಮ ಭಟ್ ಸಜಂಗದ್ದೆ ಅಭಿಪ್ರಾಯ ವ್ಯಕ್ತಪಡಿಸಿದರು.
ಬಳ್ಳಪದವಿನಲ್ಲಿರುವ ನಾರಾಯಣೀಯಮ್ ವೀಣಾವಾದಿನಿ ಸಂಗೀತ ವಿದ್ಯಾಪೀಠದ ವಾರ್ಷಿಕೋತ್ಸವ "ವೇದ ನಾದ ಯೋಗ ತರಂಗಿಣ"ಯ ಮೂರು ದಿನಗಳ ವೇದ-ನಾದ-ಯೋಗ ಅನುಸಂಧಾನದ ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನೂತನ ಸಂಗೀತ ಸಮುಚ್ಚಯ ಓಂಕಾರ ವನ್ನು ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಆಧುನಿಕ ಯುವ ಸಮೂಜಕ್ಕೆ ಯಾವುದು ಸರಿ ಯಾವುದು ತಪ್ಪುಗಳೆಂದು ನಿರ್ಧರಿಸುವ ಸಾಮಥ್ರ್ಯ ಕುಸಿದಿದೆ. ಕಲೆ, ಸಾಹಿತ್ಯದ ಬಗೆಗಿನ ಮಹತ್ವ-ಅಗತ್ಯದ ಕುರಿತಾದ ತಿಳುವಳಿಕೆಯ ಅಗತ್ಯದ ಬಗ್ಗೆ ಇಂದು ನಮ್ಮಲ್ಲಿ ಗೊಂದಲಗಳಿವೆ. ಅದರೊಳಗಿನ ಸಂತೃಪ್ತಿ, ಸಮಾಧಾನವನ್ನು ತೋರಿಸುವ ಮಾದರಿಗಳೂ ನಮ್ಮಲ್ಲಿ ಇಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು. ವೇದ, ನಾದ, ಯೋಗಗಳ ಮೂಲ ಈ ಮಣ್ಣು, ನೆಲ, ಇಲ್ಲಿಯ ನಿಸರ್ಗವಾಗಿದೆ. ನಾದಮಯವಾದ ಪ್ರಪಂಚವನ್ನು ಪ್ರೀತಿಸಿದಷ್ಟು ಬದುಕು ಸಹ್ಯವಾಗುತ್ತದೆ ಎಂದ ಅವರು ಭಾರತೀಯ ಶಾಸ್ತ್ರೀಯ ಸಂಗೀತ ಅದು ಸ್ವಾದಮಯವಾಗಿ ಅಂತರಂಗಕ್ಕೆ ಸುಖ ನೀಡುತ್ತದೆ. ಈ ನಿಟ್ಟಿನಲ್ಲಿ ತಪಸ್ಸಿನಲ್ಲಿ ಸಂಗೀತ ಕ್ಷೇತ್ರದ ಬೆಳವಣಿಗೆ, ಹೊಸತನದ ನೋಟಗಳತ್ತ ದಾಪುಗಾಲಿಡುತ್ತಿರುವ ವೀಣಾವಾದಿನಿಯ ಪ್ರಯತ್ನಗಳು ಸ್ತುತ್ಯರ್ಹವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಹಿರಿಯ ಸಂಗೀತ ಗುರುಗಳಾದ ಪ್ರೊ.ಕೆ.ವೆಂಕಟರಾಮನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಹಾರೋಗ್ಯದ ಮೇಲೆ ಗಾಢ ಪರಿಣಾಮ ಬೀರುವ ವೇದ-ನಾದ-ಯೋಗಗಳ ಸಂಯೋಗವು ಸುಂದರ ಬದುಕಿನ ಮೂಲಧಾತುಗಳು ಎಂದು ತಿಳಿಸಿದರು. ಹೊಸ ತಲೆಮಾರಿಗೆ ಸಂಗೀತಲೋಕದ ಜ್ಞಾನ ಮೂಡಿಸುವುವಲ್ಲಿ ಸರ್ವ ತ್ಯಾಗಗಳೊಂದಿಗೆ ಮುನ್ನಡೆಯುತ್ತಿರುವ ವೀಣಾವಾಧಿನಿಯ ಸದ್ದಿಲ್ಲದ ಕಲೋಪಾಸನೆ ಮುಂದೊಂದು ದಿನ ಗುರುತ್ವವನ್ನು ಪಡೆಯಲಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಸಮಾರಂಭದಲ್ಲಿ ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ಕಲಾವಿದ ಟಿ.ಜಿ.ಗೋಪಾಲಕೃಷ್ಣನ್ ಹಾಗೂ ಕಾಸರಗೋಡಿನ ಶ್ರೀಗೋಪಾಲಕೃಷ್ಣ ಸಂಗೀತ ಶಾಲೆಯ ನಿರ್ದೇಶಕಿ ವಿದ್ವಾನ್. ಉಷಾ ಈಶ್ವರ ಭಟ್ ಅವರನ್ನು ವೀಣಾವಾಧಿನಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇಶಾ ಫೌಂಡೇಶನ್ ನ ಶಿಕ್ಷಕ ಪ್ರವೀಣ್ ಕುಮಾರ್ ಪಿ, ರಾಧಾಕೃಷ್ಣ ಭಟ್ ಬಳ್ಳಪದವು ಉಪಸ್ಥಿತರಿದ್ದು ಶುಭಹಾರೈಸಿದರು. ವೀಣಾವಾಧಿನಿಯ ನಿರ್ದೇಶಕ ವಿದ್ವಾನ್. ಯೋಗೀಶ ಶರ್ಮಾ ಬಳ್ಳಪದವು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ವಾನ್.ಪ್ರಭಾಕರ ಕುಂಜಾರು ವಂದಿಸಿದರು. ಅರ್ಥಾ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಶ್ರದ್ದಾ ಅಭಿನಂದನಾ ಪತ್ರ ವಾಚಿಸಿದರು.
ಬಳಿಕ ಸಂದೀಪ್ ನಾರಾಯಣ್ ಚೆನ್ನೈ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಎಡಪ್ಪಳ್ಳಿ ಅಜಿತ್(ವಯೋಲಿನ್), ಪಾಲಕ್ಕಾಡ್ ಮಹೇಷ್ ಕುಮಾರ್(ಮೃದಂಗ), ವಾಝಪ್ಪಳ್ಳಿ ಕೃಷ್ಣ ಕುಮಾರ್(ಘಟಂ)ನಲ್ಲಿ ಸಹಕರಿಸಿದರು.
ಫೆ 2 ರಂದು ಬೆಳಿಗ್ಗೆ 9 ರಿಂದ ಪ್ರೊ.ಕೆ.ವೆಂಕಟರಮಣನ್ ಹಾಗೂ ವೀಣಾವಾದಿನಿಯ ವಿದ್ಯಾರ್ಥಿಗಳಿಂದ ನವಗ್ರಹ ಕೃತಿಗಳ ಪ್ರಸ್ತುತಿ ಮತ್ತು 10.30 ರಿಂದ ವೀಣಾವಾದಿನಿ ವಿದ್ಯಾರ್ಥಿಗಳಿಂದ ನಾದೋಪಾಸನೆ ಹೆಸರಿನಲ್ಲಿ ಸಂಗೀತ ಕಚೇರಿಗಳು ಜರಗಿದವು. ಮಂಗಳೂರಿನ ಕಿರಿಯ ಕಲಾವಿದ ಆಗಮ ಪೆರ್ಲ, ಕುಮಾರಿ ಶ್ರೇಯಾ, ಧನ್ವೀಪ್ರಸಾದ, ಕುಮಾರಿ ವಿಧಾತ್ರಿ ಭಟ್ ಅಬರಾಜೆ, ವಿದುಷಿ ಸ್ವರ್ಣಗೌರಿ ಕೇದಾರ ಮೊದಲಾದವರು ಕಚೇರಿ ನಡೆಸಿದರು. ಬಳಿಕ ತಿರುವಿಳ ವಿಜು ಎಸ್. ಆನಂದ್ ಮತ್ತು ಮಾಂಜೂರು ರೆಂಜಿತ್ ಅವರಿಂದ ದ್ವಂದ್ವ ವಯೊಲಿನ್ ವಾದನ ಆಯೋಜಿಸಲಾಗಿತ್ತು. ವೈಕ್ಕಂ ಪ್ರಸಾದ್(ಮೃದಂಗ), ಮಂಜೂರ್ ರಂಜಿತ್(ಘಟಂ)ನಲ್ಲಿ ಸಹಕರಿಸಿಸರು.
ಭಾನುವಾರ ಫೆ. 3 ರಂದು ಬೆಳಿಗ್ಗೆ 6.30 ಇಶಾ ಫೌಂಡೇಶನ್ ನ ಉಪ ಯೋಗ ಕಾರ್ಯಕ್ರಮ, 9 ರಿಂದ ಪಂಚರತ್ನ ಕೃತಿಗಳ ಗಾಯನ ಮತ್ತು ವೀಣಾವಾದಿನಿ ವಿದ್ಯಾರ್ಥಿಗಳಿಂದ ನಾದೋಪಾಸನೆ ಸಂಗೀತ ಕಚೇರಿ ನಡೆಯಿತು.