ಬೆಚ್ಚಿಬಿದ್ದು ಕಕ್ಕಾಬಿಕ್ಕಿಯಾದ ಜಿಲ್ಲಾಧಿಕಾರಿ ನಗರಸಭೆ ಕಚೇರಿಯಲ್ಲಿ ನೌಕರರು ನಾಪತ್ತೆ
0
ಫೆಬ್ರವರಿ 08, 2019
ಕಾಸರಗೋಡು: ಕಾಸರಗೋಡು ನಗರಸಭೆಗೆ ಮಿಂಚಿನ ತಪಾಸಣೆ ನಡೆಸಲು ತಲುಪಿದ ಜಿಲ್ಲಾಧಿಕಾರಿ ಡಿ.ಸಜಿತ್‍ಬಾಬು ಬೆಚ್ಚಿಬಿದ್ದ ಘಟನೆ ಶುಕ್ರವಾರ ನಡೆದಿದೆ.
ನಗರಸಭೆಯಲ್ಲಿ 63 ಮಂದಿ ನೌಕರರಿದ್ದು, ಕೇವಲ 19 ಮಂದಿ ಮಾತ್ರವೇ ಕರ್ತವ್ಯಕ್ಕೆ ಹಾಜರಾಗಿದ್ದರು. ಇಬ್ಬರು ರಜೆಯಲ್ಲಿ ಹೋಗಿದ್ದರೆ, ಉಳಿದವರು ಸಹಿ ಹಾಕಿ ಕಚೇರಿಯಿಂದ ಹೊರಗೆ ಹೋಗಿದ್ದರು.
ಸಂಜೆ 4.45 ಕ್ಕೆ ಜಿಲ್ಲಾಧಿಕಾರಿ ಕಾಸರಗೋಡು ನಗರಸಭಾ ಕಚೇರಿಗೆ ಮಿಂಚಿನ ತಪಾಸಣೆಗೆ ತೆರಳಿದ್ದರು.
ಎರಡನೇ ಶನಿವಾರ ಮತ್ತು ಭಾನುವಾರ ಬರುವ ದಿನಗಳಲ್ಲಿ ನೌಕರರು ಸಹಿ ಹಾಕಿ ಮಧ್ಯಾಹ್ನವೇ ಕಚೇರಿಯಿಂದ ಮನೆಗೆ ಹೋಗುತ್ತಿರುವುದು ಸಾಮಾನ್ಯವಾಗಿದೆ ಎಂಬ ದೂರುಗಳಿರುವಂತೆ ಜಿಲ್ಲಾಧಿಕಾರಿ ಮಿಂಚಿನ ತಪಾಸಣೆ ನಡೆಸಿದ್ದರು. ನಗರಸಭಾ ಕಾರ್ಯದರ್ಶಿ ಸರಕಾರದ ಅಧಿಕೃತ ಕಾನ್ಪರೆನ್ಸ್ ಅಂಗವಾಗಿ ಅಧ್ಯಕ್ಷೆ ಸಹಿತ ಮುನ್ನಾರಿಗೆ ತೆರಳಿದ್ದಾರೆ. ಉಳಿದ 41 ಮಂದಿ ಕರ್ತವ್ಯದ ವೇಳೆ ಕಚೇರಿಯಲ್ಲಿರಲಿಲ್ಲ.
ಎರಡು ವರ್ಷಗಳ ಹಿಂದೆ ಅವಧಿಗಿಂತ ಮೊದಲೇ ಕಚೇರಿಯಿಂದ ತೆರಳುವುದನ್ನು ತಡೆಯಲು ಪಂಚಿಂಗ್ ವ್ಯವಸ್ಥೆ ಮಾಡಿದ್ದರೂ, ಅದು ಕೇವಲ ಐದು ತಿಂಗಳು ಮಾತ್ರವೇ ಕಾರ್ಯಚರಿಸಿತ್ತು. ಕಚೇರಿಯಿಂದ ಅವಧಿಗಿಂತ ಮುನ್ನವೇ ಹೋಗಿರುವ ನೌಕರರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.